ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕಾಲ್ತುಳಿತ; 7 ಮಕ್ಕಳ ಸಹಿತ 13 ಮಂದಿ ಮೃತ್ಯು
ಅಂಟಾನನರಿವೊ: ಆಫ್ರಿಕಾದ ಆಗ್ನೇಯ ಕರಾವಳಿಯ ದ್ವೀಪರಾಷ್ಟ್ರ ಮಡಗಾಸ್ಕರ್‍ನಲ್ಲಿ ಆಯೋಜಿಸಲಾದ ಹಿಂದೂ ಮಹಾಸಾಗರ ದ್ವೀಪಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ನಡೆದ ಕಾಲ್ತುಳಿತದಲ್ಲಿ 7 ಮಕ್ಕಳ ಸಹಿತ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 80 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬರೆಯಾ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಶುಕ್ರವಾರ ದುರಂತ ಸಂಭವಿಸಿದೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 50,000 ವೀಕ್ಷಕರು ಏಕಕಾಲದಲ್ಲಿ ಆಗಮಿಸಿದಾಗ ನೂಕುನುಗ್ಗಲು ಸಂಭವಿಸಿದೆ. ಆಗ ಸ್ಥಳದಲ್ಲಿ ಗದ್ದಲ, ಆತಂಕದ ಸ್ಥಿತಿ ನೆಲೆಸಿದ್ದು ಕಾಲ್ತುಳಿತಕ್ಕೆ ಸಿಲುಕಿ 7 ಮಕ್ಕಳ ಸಹಿತ 13 ಮಂದಿ ಮೃತರಾಗಿದ್ದಾರೆ. ಗಾಯಗೊಂಡ ಸುಮಾರು 80 ಮಂದಿಯನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿದೆ ಎಂದು ಮಡಗಾಸ್ಕರ್‍ನ ಪ್ರಧಾನಿ ಕ್ರಿಸ್ತಿಯನ್ ನತಾಸೆ ಹೇಳಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ 1 ನಿಮಿಷ ಮೌನ ಆಚರಿಸುವಂತೆ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿ ರಜೋಲಿನಾ ಕರೆ ನೀಡಿದರು.
ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಆಯೋಜಿಸುವ ಹಿಂದುಮಹಾಸಾಗರ ದ್ವೀಪಗಳ ಕ್ರೀಡಾಕೂಟದಲ್ಲಿ ಮಾರಿಷಸ್, ಸೀಷೆಲ್ಸ್, ಕೊಮೊರೊಸ್, ಮಡಗಾಸ್ಕರ್, ಮೆಯೊಟ್, ರಿಯುನಿಯನ್ ದ್ವೀಪ ಮತ್ತು ಮಾಲ್ದೀವ್ಸ್ ದೇಶಗಳ ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ.