ಫಿಲಿಪ್ಪೀನ್ಸ್ ನಲ್ಲಿ ಚಂಡಮಾರುತ | ಹಲವೆಡೆ ಭೂಕುಸಿತ ; 9 ಮಂದಿ ಮೃತ್ಯು
ಮನಿಲಾ : ಚಂಡಮಾರುತದಿಂದ ತತ್ತರಿಸಿರುವ ಉತ್ತರ ಫಿಲಿಪ್ಪೀನ್ಸ್ ನಲ್ಲಿ ರವಿವಾರ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಪ್ರವಾಹ, ಭೂಕುಸಿತ ಸಂಭವಿಸಿದ್ದು ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಶಾಲೆಗಳು ಹಾಗೂ ಸರಕಾರಿ ಕಚೇರಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ವಿಜಾನ್ ಪ್ರಾಂತದ ಇನ್‍ಫಾಂಟಾ ನಗರದ ಈಶಾನ್ಯದಲ್ಲಿ ಗಂಟೆಗೆ 90 ಕಿ.ಮೀ ವೇಗದ ಗಾಳಿಯ ಜತೆಗೆ ಭಾರೀ ಅವಾಂತರ ಸೃಷ್ಟಿಸಿರುವ `ಯಾಗಿ' ಚಂಡಮಾರುತದ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ಮಧ್ಯಾಹ್ನದ ಬಳಿಕ ಉತ್ತರ ಲುಝೋನ್ ಪ್ರಾಂತದತ್ತ ಮುಂದುವರಿಯುತ್ತಿರುವ ಚಂಡಮಾರುತದಿಂದಾಗಿ ಪರ್ವತ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮನಿಲಾದ ಸಮೀಪವಿರುವ ರಿಝಾಲ್ ಪ್ರಾಂತದ ಅಂಟಿಪೊಲೋ ಪಟ್ಟಣದ ಪರ್ವತ ಪ್ರದೇಶದಲ್ಲಿ ಎರಡು ಸಣ್ಣ ಮನೆಗಳ ಮೇಲೆ ಮಣ್ಣುಕುಸಿದು ಬಿದ್ದು ಗರ್ಭಿಣಿ ಮಹಿಳೆಯ ಸಹಿತ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಇತರ ನಾಲ್ಕು ಮಂದಿ ಮಣ್ಣಿನಡಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಮಧ್ಯ ಫಿಲಿಪ್ಪೀನ್ಸ್‍ನಲ್ಲಿ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಪೂರ್ವದ ಸುರ್ ಪ್ರಾಂತದಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಕ| ಜೀನ್ ಫಜಾರ್ದೊ ಹೇಳಿದ್ದಾರೆ. ಇದೇ ಪ್ರಾಂತದಲ್ಲಿ ವಿದ್ಯುತ್ ಶಾಕ್‍ನಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಲುಝಾನ್ ಪ್ರಾಂತ, ಮನಿಲಾ ನಗರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸರಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಧಾರಾಕಾರ ಮಳೆಯಿಂದಾಗಿ ಮನಿಲಾ ಬಳಿಯ ಮರಿಕಿನಾ ನದಿಯ ನೀರು ಅಪಾಯದ ಮಟ್ಟ ಸಮೀಪಿಸಿದ್ದು ಸ್ಥಳಾಂತರಗೊಳ್ಳಲು ಸಿದ್ಧವಾಗಿರುವಂತೆ ನದಿ ದಡದ ನಿವಾಸಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಂಡಮಾರುತದ ಪ್ರಭಾವಕ್ಕೆ ಒಳಗಾದ ಹಲವು ಬಂದರುಗಳಲ್ಲಿ ಸಮುದ್ರ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು 3,300ಕ್ಕೂ ಅಧಿಕ ಹಡಗು ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬಿರುಗಾಳಿಯಿಂದಾಗಿ ಹಲವು ದೇಶೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಮನಿಲಾದ ಉತ್ತರದಲ್ಲಿ ಬುಲಾಕಾನ್ ಪ್ರಾಂತದಲ್ಲಿನ ಇಪೊ ಅಣೆಕಟ್ಟಿನ ನೀರು ಅಪಾಯ ಮಟ್ಟ ಮೀರಿದ್ದರಿಂದ ಅಣೆಕಟ್ಟೆಯ ಗೇಟುಗಳನ್ನು ತೆರೆಯುವ ಬಗ್ಗೆ ಸ್ಥಳೀಯರಿಗೆ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.