ಭೀಕರ ಭೂಕಂಪಕ್ಕೆ ನಡುಗಿದ ಚೀನಾ: ಕನಿಷ್ಠ 127 ಮಂದಿ ಸಾವು; 700 ಮಂದಿಗೆ ಗಾಯ
ಬೀಜಿಂಗ್: ವಾಯವ್ಯ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 127 ಮಂದಿ ಸಾವನ್ನಪ್ಪಿದ್ದು 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ಕಳೆದ 13 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ಭೂಕಂಪ ಇದಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ 1 ಗಂಟೆಗೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯನ್ನು ದಾಖಲಿಸಿದ್ದು ಗಾನ್ಸು ಮತ್ತು ಕ್ವಿಂಘಾಯ್ ಪ್ರಾಂತದ ಗಡಿಭಾಗದಲ್ಲಿರುವ ಲಿಯುಗೌ ನಗರದಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ನಡುರಾತ್ರಿ ಭೂಮಿ ನಡುಗಿದಾಗ ನಿದ್ದೆಯಲ್ಲಿದ್ದ ಜನರು ಗಾಭರಿಯಿಂದ ಹೊರಗೆ ಧಾವಿಸಿದರು. ಎರಡೂ ಪ್ರಾಂತಗಳಲ್ಲಿ ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು ಸುಮಾರು 700ರಷ್ಟು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗಳು, ರಸ್ತೆಗಳಿಗೆ ವ್ಯಾಪಕ ಹಾನಿಯಾಗಿದ್ದು ವಿದ್ಯುತ್ ಮತ್ತು ಸಂವಹನ ವ್ಯವಸ್ಥೆ ಮೊಟಕುಗೊಂಡಿದೆ. ಜಿಷಿಷಾನ್ ನಗರದಲ್ಲಿ 6,381 ಮನೆಗಳಿಗೆ ಹಾನಿಯಾಗಿದೆ. ಗಾನ್ಸು ಪ್ರಾಂತದಲ್ಲಿ ಅತೀ ಹೆಚ್ಚು ನಾಶ-ನಷ್ಟ ಸಂಭವಿಸಿದ್ದು 105 ಮಂದಿ ಮೃತಪಟ್ಟಿದ್ದು 397 ಮಂದಿ ಗಾಯಗೊಂಡಿದ್ದು ಇವರಲ್ಲಿ 16 ಮಂದಿಯ ಸ್ಥಿತಿ ಗಂಭೀರವಾಗಿದೆ. ಕ್ವಿಂಗಾಯ್ ಪ್ರಾಂತದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು 182 ಮಂದಿ ಗಾಯಗೊಂಡಿದ್ದಾರೆ. ಕುಸಿದು ಬಿದ್ದ ಕಟ್ಟಡದ ಅಡಿಯಲ್ಲಿ 20 ಮಂದಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು `ಚೀನಾ ನ್ಯೂಸ್ ಸರ್ವಿಸ್' ವರದಿ ಮಾಡಿದೆ.
ನೆರೆಯ ಉಯಿಗರ್ ಸ್ವಾಯತ್ತ ಪ್ರದೇಶದಲ್ಲಿ ಮಂಗಳವಾರ ಮತ್ತೊಂದು ಲಘು ಭೂಕಂಪ ಸಂಭವಿಸಿದೆ. ಭೂಕಂಪ ಸಂಭವಿಸಿ ಸುಮಾರು 9 ಗಂಟೆಯ ಬಳಿಕ 3.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ 9 ಪಶ್ಚಾತ್ ಕಂಪನಗಳು ಸಂಭವಿಸಿದ್ದು ಹಲವರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಗಾನ್ಸು ಪ್ರಾಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ 300 ಹೆಚ್ಚುವರಿ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪದಿಂದ ಹಾನಿಗೊಳಗಾದ ಪ್ರದೇಶಕ್ಕೆ ಟೆಂಟ್ ಗಳು, ಮಡಚುವ ಹಾಸಿಗೆಗಳು ಮತ್ತಿತರ ಸಾಮಾಗ್ರಿಗಳನ್ನು ರವಾನಿಸಲಾಗಿದೆ. ಕನಿಷ್ಠ 4000 ಅಗ್ನಿಶಾಮಕ ಕಾರ್ಯಕರ್ತರು, ಯೋಧರು ಮತ್ತು ಪೊಲೀಸ್ ಅಧಿಕಾರಿಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ನಿರ್ದೇಶನ ನೀಡಲು ಚೀನಾದ ಸೇನೆ ತಾತ್ಕಾಲಿಕ ನೆಲೆಯನ್ನು ಸ್ಥಾಪಿಸಿದೆ ಎಂದು ಸಿಸಿಟಿವಿ ವರದಿ ಮಾಡಿದೆ. ಪೀಡಿತ ಜನರಿಗೆ ಸೂಕ್ತ ಪುನರ್ವಸತಿ ಮತ್ತು ಜನರ ಜೀವನ ಮತ್ತು ಆಸ್ತಿಯ ರಕ್ಷಣೆಗೆ ಆದ್ಯತೆ ನೀಡುವಂತೆ ಅಧ್ಯಕ್ಷ ಕ್ಸಿಜಿಂಪಿಂಗ್ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.