ಅಮೆರಿಕ ಚುನಾವಣೆ: ವರ್ಜೀನಿಯಾದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ
ಅಮೆರಿಕ: ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ವರ್ಜೀನಿಯಾದಲ್ಲಿ ಗೆಲುವನ್ನು ಸಾಧಿಸಿದ್ದು, ಈ ಮೂಲಕ ವರ್ಜೀನಿಯಾ ಮತ್ತು ಇಡೀ ಪೂರ್ವ ಕರಾವಳಿಯಿಂದ ಚುನಾಯಿತರಾದ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡೆಮಾಕ್ರಟಿಕ್ ಭದ್ರಕೋಟೆಯಾದ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಿಂದ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್( ಜನಪ್ರತಿನಿಧಿಗಳ ಸಭೆ)ಗೆ ಸ್ಪರ್ಧಿಸಿದ ಸುಬ್ರಮಣ್ಯಂ ಅವರು ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸಿ ಗೆಲುವನ್ನು ಸಾಧಿಸಿದ್ದಾರೆ.
ನನ್ನ ಮೇಲೆ ನಂಬಿಕೆ ಇಟ್ಟಿರುವ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ನ ಜನರಿಗೆ ನನ್ನ ಅಭಿನಂದನೆ. ಇಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಕುಟುಂಬಕ್ಕೆ ವೈಯಕ್ತಿಕವಾದವುಗಳು. ಈ ಜಿಲ್ಲೆಗೆ ಸೇವೆ ಸಲ್ಲಿಸಲು ನನಗೆ ಸಿಕ್ಕ ಸದಾವಕಾಶ ಇದಾಗಿದೆ. ನನ್ನ ಪೋಷಕರು 70ರ ದಶಕದಲ್ಲಿ ಅಮೆರಿಕಾಗೆ ಬಂದಿದ್ದಾರೆ. ನನ್ನ ತಾಯಿ ಬೆಂಗಳೂರಿನವರು, ಮತ್ತು ನನ್ನ ತಂದೆ ಚೆನ್ನೈನವರು. ಅವರು ಸಿಕಂದರಾಬಾದ್‌ನಲ್ಲಿದ್ದರು. ಆ ಬಳಿಕ ಅಮೆರಿಕಗೆ ಬಂದು ನೆಲೆಸಿದ್ದಾರೆ ಎಂದು ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.
ಪ್ರಸ್ತುತ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀ ಥಾನೇದಾರ್ ಸೇರಿ ಐವರು ಭಾರತೀಯ ಅಮೆರಿಕನ್ನರನ್ನು ಒಳಗೊಂಡಿರುವ ಕಾಂಗ್ರೆಸ್ ನ ಸಮೋಸಾ ಕಾಕಸ್ (Samosa Caucus) ಗೆ ಸುಬ್ರಹ್ಮಣ್ಯಂ ಸೇರ್ಪಡೆಯಾಗಿದ್ದಾರೆ.