ಟ್ರಂಪ್ ಹತ್ಯಾ ಪ್ರಯತ್ನಕ್ಕೂ ಮುನ್ನ ಪೊಲೀಸ್ ಸಿಬ್ಬಂದಿಯತ್ತ ರೈಫಲ್ ಹಿಡಿದಿದ್ದ ಶೂಟರ್

Update: 2024-07-15 16:08 GMT

PC ; hindustantimes.com

ವಾಷಿಂಗ್ಟನ್ : ಶನಿವಾರ ಪೆನಿಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಮೇಲೆ ಗುಂಡಿನ ದಾಳಿ ನಡೆಯುವುದಕ್ಕೆ ಕೆಲ ಕ್ಷಣಗಳ ಮೊದಲು ಶೂಟರ್ ಥಾಮಸ್ ಕ್ರುಕ್ಸ್‍ನನ್ನು ಪೊಲೀಸ್ ಅಧಿಕಾರಿ ತಡೆಯಲು ಪ್ರಯತ್ನಿಸಿದ್ದರು. ಆದರೆ ಕ್ರುಕ್ಸ್ ಪೊಲೀಸ್ ಅಧಿಕಾರಿಯತ್ತ ರೈಫಲ್ ಗುರಿಯಾಗಿಸಿದಾಗ ಅಧಿಕಾರಿ ಹಿಂದೆ ಸರಿದಿದ್ದರು ಎಂದು ಸ್ಥಳೀಯರನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಓರ್ವ ವ್ಯಕ್ತಿ ರ‍್ಯಾಲಿ ನಡೆದ ಸ್ಥಳದ ಸಮೀಪವಿದ್ದ ಕಟ್ಟಡದ ಛಾವಣಿಯ ಮೇಲೇರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಛಾವಣಿಯ ಮೇಲೇರಿ ಆತನನ್ನು (ಥಾಮಸ್ ಕ್ರುಕ್ಸ್) ಸಮೀಪಿಸಿದಾಗ ಕ್ರುಕ್ಸ್ ತನ್ನ ಬಳಿಯಿದ್ದ ರೈಫಲ್ ಅನ್ನು ಅಧಿಕಾರಿಯತ್ತ ಗುರಿ ಹಿಡಿದಿದ್ದಾನೆ. ಅಧಿಕಾರಿ ಛಾವಣಿಯಿಂದ ಕೆಳಗೆ ಇಳಿಯತೊಡಗಿದಾಗ ಕ್ರುಕ್ಸ್ ಟ್ರಂಪ್‍ರತ್ತ ಗುಂಡು ಹಾರಿಸಿದ್ದಾನೆ ಎಂದು ಇಬ್ಬರು ಕಾನೂನುಜಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.

ಟ್ರಂಪ್‍ರನ್ನು ನಿಖರ ಗುರಿಯಾಗಿಸುವ ಸ್ಥಳಕ್ಕೆ ಶೂಟರ್ ಹೇಗೆ ತಲುಪಿದ ಎಂಬ ಪ್ರಶ್ನೆ ಎದುರಾಗಿದೆ. ಪ್ರಕರಣವನ್ನು ಹತ್ಯೆಯ ಪ್ರಯತ್ನ ಹಾಗೂ `ಸಂಭವನೀಯ ಆಂತರಿಕ ಭಯೋತ್ಪಾದನೆಯ ಕೃತ್ಯ' ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‍ಬಿಐ) ಹೇಳಿದೆ.

ಕ್ರುಕ್ಸ್‍ನ ಕೃತ್ಯದ ಹಿಂದಿರುವ ಉದ್ದೇಶ ಅಸ್ಪಷ್ಟವಾಗಿಯೇ ಉಳಿದಿದೆ. ಕ್ರುಕ್ಸ್ ಏಕಾಂಗಿಯಾಗಿ ಈ ಕೆಲಸ ಮಾಡಿದ್ದಾನೆ ಮತ್ತು ಆತನ ಕಾರಿನಲ್ಲಿ ಬಾಂಬ್ ತಯಾರಿಸುವ ವಸ್ತುಗಳು ಪತ್ತೆಯಾಗಿವೆ ಎಂದು ಎಫ್‍ಬಿಐ ಅಧಿಕಾರಿಗಳು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಬೆದರಿಸುವ ಹೇಳಿಕೆಗಳು ಅಥವಾ ಟ್ರಂಪ್ ಮೇಲೆ ದಾಳಿ ನಡೆಸುವ ಉದ್ದೇಶವನ್ನು ವಿವರಿಸುವ ಸೈದ್ಧಾಂತಿಕ ಸುಳಿವುಗಳು ಕಂಡುಬಂದಿಲ್ಲ. ತನಿಖೆಯ ಈ ಹಂತದಲ್ಲಿ, ಕ್ರುಕ್ಸ್ ಏಕಾಂಗಿಯಾಗಿ ಕೃತ್ಯ ಎಸಗಿರುವಂತೆ ಕಾಣುತ್ತದೆ. ಆದರೆ ಇನ್ನೂ ಬಹಳಷ್ಟು ತನಿಖೆ ನಡೆಯಬೇಕಿದೆ' ಎಂದು ಎಫ್‍ಬಿಐ ರಾಷ್ಟ್ರೀಯ ಭದ್ರತಾ ಶಾಖೆಯ ಕಾರ್ಯನಿರ್ವಾಹಕ ಸಹಾಯಕ ನಿರ್ದೇಶಕ ರಾಬರ್ಟ್ ವೆಲ್ಸ್ ಹೇಳಿದ್ದಾರೆ.

ಕ್ರುಕ್ಸ್‍ನ ಉದ್ದೇಶವನ್ನು ನಿರ್ಧರಿಸಲು ಭಯೋತ್ಪಾದನಾ ನಿಗ್ರಹ ದಳ ಮತ್ತು ಅಪರಾಧ ಪತ್ತೆ ದಳ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಶೂಟರ್ ಮೃತಪಟ್ಟಿರಬಹುದು, ಆದರೆ ತನಿಖೆ ಮುಂದುವರಿದಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ಈ ಹಂತದಲ್ಲಿ ಹೆಚ್ಚಿನ ವಿವರ ಒದಗಿಸಲಾಗದು. ನಿನ್ನೆ ನಾವು ಕಂಡಿರುವುದು ಪ್ರಜಾಪ್ರಭುತ್ವ ಮತ್ತು ನಮ್ಮ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೇಲಿನ ದಾಳಿಗೆ ಸಮವಾಗಿದೆ' ಎಮದು ಎಫ್‍ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

`ಸೀಕ್ರೆಟ್ ಸರ್ವಿಸ್' ಮುಖ್ಯಸ್ಥೆ ರಾಜೀನಾಮೆಗೆ ಆಗ್ರಹ

ಚುನಾವಣಾ ರ‍್ಯಾಲಿಯ ಸಂದರ್ಭ ಟ್ರಂಪ್ ಭದ್ರತೆಯ ಹೊಣೆ ವಹಿಸಿದ್ದ ಸೀಕ್ರೆಟ್ ಸರ್ವಿಸ್(ರಹಸ್ಯ ಗುಪ್ತಚರ ಸೇವೆ) ಏಜೆಂಟರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದ್ದು ಕರ್ತವ್ಯದ ಕಡೆ ಗಮನ ನೀಡದ ಸೀಕ್ರೆಟ್ ಸರ್ವಿಸ್ ಮುಖ್ಯಸ್ಥೆ ಕಿಂಬರ್ಲಿ ಚಿಯಾಟಲ್ ತಕ್ಷಣ ರಾಜೀನಾಮೆ ನೀಡಬೇಕೆಂಬ ಆಗ್ರಹ ಹೆಚ್ಚಿದೆ.

ಆದರೆ ಸುತ್ತಮುತ್ತಲಿನ ಕಟ್ಟಡ, ಮನೆಗಳಲ್ಲಿ ಸಂಭಾವ್ಯ ಅಪಾಯದ ಬಗ್ಗೆ ಗಮನ ಹರಿಸಿ ಸೂಕ್ತ ಭದ್ರತಾ ವ್ಯವಸ್ಥೆ ನಡೆಸುವುದು ಸ್ಥಳೀಯ ಪೊಲೀಸರ ಕರ್ತವ್ಯ ಎಂದು ಸೀಕ್ರೆಸ್ ಸರ್ವಿಸ್ ಏಜೆಂಟ್ ಪ್ರತಿಪಾದಿಸಿದ್ದಾರೆ. ಟ್ರಂಪ್ ಅವರ ಪ್ರಚಾರ ಕಾರ್ಯದ ಸಂದರ್ಭದ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು ಎಂದು ಇಬ್ಬರು ಮಾಜಿ ಎಫ್‍ಬಿಐ ಅಧಿಕಾರಿಗಳು ಟೀಕಿಸಿದ್ದಾರೆ. ಈ ಮಧ್ಯೆ, ಶೂಟರ್ 50 ಸುತ್ತು ಮದ್ದುಗುಂಡುಗಳನ್ನು ಖರೀದಿಸಿದ್ದ ಎಂದು ಹಿರಿಯ ಕಾನೂನು ಜಾರಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News