ಮೊದಲ ಜಾಗತಿಕ ಎಐ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ

Update: 2024-03-22 17:39 GMT

ಸಾಂದರ್ಭಿಕ ಚಿತ್ರ

ಜಿನೆವಾ: ವೈಯಕ್ತಿಕ ಡೇಟಾವನ್ನು ರಕ್ಷಿಸಲು, ಕೃತಕ ಬುದ್ಧಿಮತ್ತೆ(ಎಐ)ಯ ಅಪಾಯದ ಮೇಲೆ ನಿಗಾ ವಹಿಸಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಐ ಕುರಿತ ಪ್ರಥಮ ಜಾಗತಿಕ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುವಾರ ಸ್ವೀಕರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಅಮೆರಿಕ ಪ್ರಸ್ತಾಪಿಸಿದ್ದ ನಿರ್ಣಯವನ್ನು ಚೀನಾ ಸೇರಿದಂತೆ 121 ಇತರ ದೇಶಗಳು ಬೆಂಬಲಿಸಿದ್ದವು. ಆದರೆ ಗೌಪ್ಯತಾ ನೀತಿಗಳನ್ನು ಬಲಪಡಿಸುವುದು ಸೇರಿದಂತೆ ಹಲವು ಸಲಹೆಗಳ ಬಗ್ಗೆ ಸುಮಾರು 3 ತಿಂಗಳ ಸಮಾಲೋಚನೆಯ ಬಳಿಕ ಅಂತಿಮವಾಗಿ ನಿರ್ಣಯವನ್ನು ವಿಶ್ವಸಂಸ್ಥೆ ಸ್ವೀಕರಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

`ಎಐ ಕುರಿತಂತೆ ಪ್ರಪ್ರಥಮ ನೈಜ ಜಾಗತಿಕ ಒಮ್ಮತದ ದಾಖಲೆ ಇದಾಗಿದೆ. ನಾವು ಕ್ಷಿಪ್ರವಾಗಿ ಬದಲಾಗುತ್ತಿರುವ ತಂತ್ರಜ್ಞಾನಗೊಂದಿಗೆ ಪ್ರಕ್ಷುಬ್ಧವಾಗಿರುವ ನೀರಿನಲ್ಲಿ ನೌಕಾಯಾನ ಮಾಡುತ್ತಿದ್ದೇವೆ. ನಮ್ಮ ಮೌಲ್ಯಗಳ ಬೆಳಕಿನಲ್ಲಿ ಮುನ್ನಡೆಯುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ' ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫೀಷಿಯಲ್ ಇಂಟಲಿಜೆನ್ಸ್) ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಅಡ್ಡಿಪಡಿಸಲು ಬಳಸಬಹುದು, ವಂಚನೆಯನ್ನು ಪ್ರೇರೇಪಿಸಲಿದೆ ಮತ್ತು ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂಬ ಭೀತಿಯ ನಡುವೆಯೇ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯನ್ನು ರೂಪಿಸಲು ಹಲವು ದೇಶಗಳು ಕೈಗೊಂಡಿರುವ ಸರಣಿ ಉಪಕ್ರಮಗಳಲ್ಲಿ ಇದು ಇತ್ತೀಚಿನ ಪ್ರಕ್ರಿಯೆಯಾಗಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಅಸಮರ್ಪಕ ಅಥವಾ ದುರುದ್ದೇಶಪೂರಿತ ವಿನ್ಯಾಸ, ಅಭಿವೃದ್ಧಿ, ನಿಯೋಜನೆ ಮತ್ತು ಬಳಕೆ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ರಕ್ಷಣೆ, ಪ್ರಚಾರಕ್ಕೆ ಅಡ್ಡಿಯಾಗಬಹುದು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. `ನಿರ್ಣಯದ ಪರ-ವಿರೋಧ ಕಾವೇರಿದ ಚರ್ಚೆ ನಡೆದಿದ್ದು ಚೀನಾ, ರಶ್ಯ, ಕ್ಯೂಬಾ ಮುಂತಾದ ದೇಶಗಳೂ ಅಂತಿಮವಾಗಿ ಸಹಮತ ಸೂಚಿಸಿವೆ. ಈ ನಿರ್ಣಯವು ಮಾನವ ಹಕ್ಕುಗಳ ರಕ್ಷಣೆಯನ್ನು ಮುಂದುವರಿಸುವುದರ ಜತೆಗೆ, ಮಾನವ ಹಕ್ಕುಗಳು ಮತ್ತು ತಾಂತ್ರಿಕ ಅಭಿವೃದ್ಧಿಯ ಪ್ರಗತಿಯ ನಡುವೆ ಸೂಕ್ತವಾದ ಸಮತೋಲನವನ್ನು ಸಾಧಿಸುವ ವಿಶ್ವಾಸವಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಎಐ ದುರ್ಬಳಕೆಯಾಗದಂತೆ ತಡೆಯುವ ಬಗ್ಗೆ, ಸುರಕ್ಷಿತ ವಿನ್ಯಾಸವನ್ನು ಹೊಂದಿರುವ ಎಐ ತಂತ್ರಜ್ಞಾನವನ್ನು ಸೃಷ್ಟಿಸುವಂತೆ ಸಂಸ್ಥೆಗಳನ್ನು ಆಗ್ರಹಿಸುವ ನಿಟ್ಟಿನಲ್ಲಿ ಪ್ರಪ್ರಥಮ ಅಂತರಾಷ್ಟ್ರೀಯ ಒಪ್ಪಂದವೊಂದನ್ನು ಕಳೆದ ನವೆಂಬರ್‌ ನಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ಸುಮಾರು 15 ದೇಶಗಳು ಮುಂದಿರಿಸಿದ್ದವು.

ಈ ತಿಂಗಳ ಆರಂಭದಲ್ಲಿ ಯುರೋಪಿಯನ್ ಯೂನಿಯನ್‍ನ ಸಂಸದರು ಎಐ ತಂತ್ರಜ್ಞಾನದ ಮೇಲೆ ನಿಗಾ ವಹಿಸುವ ತಾತ್ಕಾಲಿಕ ಒಪ್ಪಂದವೊಂದನ್ನು ಅನುಮೋದಿಸಿದ್ದು ಈ ತಿಂಗಳಾಂತ್ಯದಲ್ಲಿ ಅದನ್ನು ಅಂಗೀಕರಿಸುವ ನಿರೀಕ್ಷೆಯಿದೆ. ಗ್ರಾಹಕರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಗುಂಪುಗಳಿಗೆ ಎಐ ಅಪಾಯಗಳನ್ನು ಕಡಿಮೆ ಮಾಡಲು ಹೊಸ ಕಾರ್ಯಾದೇಶವನ್ನು ಕಳೆದ ಅಕ್ಟೋಬರ್‌ ನಲ್ಲಿ ಅಮೆರಿಕದ ಶ್ವೇತಭವನ ಜಾರಿಗೊಳಿಸಿದೆ. ರಶ್ಯ ಮತ್ತು ಚೀನಾಗಳೂ ಎಐ ಸಾಧನಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವ ಬಗ್ಗೆ ಸಂಶೋಧನೆ ನಡೆಸಿವೆ. ಈ ಮಧ್ಯೆ, ಮೈಕ್ರೋಸಾಫ್ಟ್ ಬೆಂಬಲಿತ ಓಪನ್‍ಎಐ ಸಾಫ್ಟ್‍ವೇರ್ ಅನ್ನು ಬೇಹುಗಾರಿಕೆ ಕೌಶಲ್ಯ ವೃದ್ಧಿಗೆ ಬಳಸಿಕೊಂಡ ಎರಡೂ ದೇಶಗಳ ಹ್ಯಾಕರ್‍ಗಳನ್ನು ಹಿಡಿಯಲಾಗಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದೆ.

ಎಐ ತಂತ್ರಜ್ಞಾನದ ಭವಿಷ್ಯದ ದಾರಿಯನ್ನು ಈ ನಿರ್ಣಯ ಮುಂದಿರಿಸಿದೆ. ಇಲ್ಲಿ ಪ್ರತೀ ದೇಶವೂ ಭರವಸೆಯನ್ನು ಹೊಂದುವ ಮತ್ತು ಎಐ ಅಪಾಯವನ್ನು ಸೂಕ್ತವಾಗಿ ನಿರ್ವಹಿಸುವ ಅವಕಾಶವಿದೆ ಎಂದು ಅಮೆರಿಕ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News