ಸಿರಿಯನ್ ಗೋಲನ್ನಿಂದ ಇಸ್ರೇಲ್ ಹಿಂದೆ ಸರಿಯಲು ವಿಶ್ವಸಂಸ್ಥೆ ಆಗ್ರಹ
ವಿಶ್ವಸಂಸ್ಥೆ: ಸಿರಿಯನ್ ಗೋಲನ್ನಿಂದ ಇಸ್ರೇಲ್ ಇನ್ನೂ ಹಿಂದೆ ಸರಿಯದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಪರ ಭಾರತ ಸಹಿತ 91 ದೇಶಗಳು ಮತ ಹಾಕಿವೆ ಎಂದು ವರದಿಯಾಗಿದೆ.
ನೈಋತ್ಯ ಸಿರಿಯಾದಲ್ಲಿರುವ ಗೋಲನ್ ಹೈಟ್ಸ್ ಪ್ರಾಂತವನ್ನು 1967ರ ಯುದ್ಧದಲ್ಲಿ ಇಸ್ರೇಲ್ ಸ್ವಾಧೀನ ಪಡಿಸಿಕೊಂಡಿದೆ. ಗೋಲನ್ನಿಂದ ಇಸ್ರೇಲ್ ಹಿಂದಕ್ಕೆ ಸರಿಯದಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ನಿರ್ಣಯವನ್ನು ಮಂಗಳವಾರ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈಜಿಪ್ಟ್ ಮಂಡಿಸಿದ್ದು 193 ಸದಸ್ಯ ದೇಶಗಳಲ್ಲಿ 91 ದೇಶಗಳು ಪರ, 8 ವಿರುದ್ಧ ಮತ ಚಲಾಯಿಸಿದರೆ 62 ದೇಶಗಳು ಗೈರಾಗಿದ್ದವು.
ಭಾರತ, ಮಲೇಶ್ಯಾ, ಮಾಲ್ದೀವ್ಸ್, ಬಾಂಗ್ಲಾದೇಶ, ಭೂತಾನ್, ಚೀನಾ, ನೇಪಾಳ, ರಶ್ಯ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಯುಎಇ ಸೇರಿದಂತೆ 91 ದೇಶಗಳು ನಿರ್ಣಯದ ಪರ ಮತ ಹಾಕಿದರೆ ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್, ಅಮೆರಿಕ ಸಹಿತ 8 ದೇಶಗಳು ನಿರ್ಣಯವನ್ನು ವಿರೋಧಿಸಿವೆ.
`1967ರಿಂದಲೂ ಅತಿಕ್ರಮಣಕ್ಕೆ ಒಳಗಾಗಿರುವ ಸಿರಿಯನ್ ಗೋಲನ್ನಿಂದ ಇಸ್ರೇಲ್ ಹಿಂದಕ್ಕೆ ಸರಿಯಬೇಕೆಂಬ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆಯ ನಿರ್ಣಯದ ಪಾಲನೆ ಆಗದಿರುವುದು ತೀವ್ರ ಕಳವಳದ ವಿಷಯವಾಗಿದೆ. ಸಿರಿಯನ್ ಗೋಲನ್ ಹೈಟ್ಸ್ ಪ್ರದೇಶದಲ್ಲಿ ತನ್ನ ಕಾನೂನುಗಳು, ನ್ಯಾಯ ವ್ಯವಸ್ಥೆ ಮತ್ತು ಆಡಳಿತವನ್ನು ಹೇರುವ ಇಸ್ರೇಲ್ನ ನಿರ್ಧಾರ ಅಕ್ರಮ ಮತ್ತು ಅನೂರ್ಜಿತ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂಬ ಭದ್ರತಾ ಮಂಡಳಿ ನಿರ್ಣಯ 497(1981)ರ ಪಾಲನೆಗೆ ಇಸ್ರೇಲ್ ವಿಫಲವಾಗಿದೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
`1981ರ ಡಿಸೆಂಬರ್ 14ರಂದು ಇಸ್ರೇಲ್ ಜಾರಿಗೊಳಿಸಿದ ನಿರ್ಧಾರ ಅಕ್ರಮ ಮತ್ತು ಅನೂರ್ಜಿತವಾಗಿದ್ದು ಇದಕ್ಕೆ ಮಾನ್ಯತೆಯಿಲ್ಲ. 1967ರಿಂದ ಆಕ್ರಮಿತ ಗೋಲನ್ ಹೈಟ್ಸ್ ಪ್ರಾಂತದಲ್ಲಿ ಇಸ್ರೇಲ್ನ ವಸಾಹತು ನಿರ್ಮಾಣ ಹಾಗೂ ಇತರ ಚಟುವಟಿಕೆಗಳೂ ಕಾನೂನು ಬಾಹಿರ. 1967ರ ಜೂನ್ 4ರ ರೇಖೆಗೆ ಇಸ್ರೇಲ್ ಹಿಂದಕ್ಕೆ ಸರಿಯಬೇಕು. ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಅನುಷ್ಠಾನಗೊಳ್ಳಬೇಕು ಮತ್ತು ಗೋಲನ್ನಲ್ಲಿ ಇಸ್ರೇಲ್ನ ನಿರಂತರ ಅತಿಕ್ರಮಣ ಮತ್ತು ಸ್ವಾಧೀನತೆಯು ಈ ಪ್ರದೇಶದಲ್ಲಿ ನ್ಯಾಯಯುತ, ಸಮಗ್ರ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸುವ ಹಾದಿಯಲ್ಲಿ ಒಂದು ತೊಡಕಾಗಿದೆ' ಎಂದು ನಿರ್ಣಯ ಹೇಳಿದೆ.