ನನ್ನ ಹತ್ಯೆಗೆ ಎರಡು ಪ್ರಯತ್ನ ನಡೆದಿತ್ತು : ಎಲಾನ್ ಮಸ್ಕ್
ವಾಷಿಂಗ್ಟನ್ : ಕಳೆದ 8 ತಿಂಗಳಲ್ಲಿ ತಾನು ಎರಡು ಹತ್ಯೆಯ ಪ್ರಯತ್ನಗಳನ್ನು ಎದುರಿಸಿರುವುದಾಗಿ ಟೆಸ್ಲಾ ಮಾಲಕ ಎಲಾನ್ ಮಸ್ಕ್ ಹೇಳಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಯ ಯತ್ನವನ್ನು ಖಂಡಿಸಿದ್ದಾರೆ.
ಹತ್ಯೆ ಪ್ರಯತ್ನದಲ್ಲಿ ಗುಪ್ತಚರ ಸೇವೆಯ ವೈಫಲ್ಯ ಎದ್ದುಕಾಣುತ್ತಿದೆ. ಅಧಿಕಾರಿಗಳು ಸಂಪೂರ್ಣ ಅಸಮರ್ಥರಾಗಿದ್ದಾರೆ ಅಥವಾ ಉದ್ದೇಶಪೂರ್ವಕ ವರ್ತನೆ ಇದಾಗಿರಬಹುದು ಎಂದವರು ಟೀಕಿಸಿದ್ದಾರೆ. ಹತ್ಯೆಯ ಪ್ರಯತ್ನದಿಂದ ಪಾರಾದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರನ್ನು ಬೆಂಬಲಿಸುವುದಾಗಿ ಮಸ್ಕ್ ಹೇಳಿದ್ದಾರೆ.
`ಅಪಾಯದ ಕ್ಷಣಗಳು ಮುಂದಿವೆ. ಕಳೆದ 8 ತಿಂಗಳಲ್ಲಿ ಇಬ್ಬರು ವ್ಯಕ್ತಿಗಳು (ಪ್ರತ್ಯೇಕ ಸಂದರ್ಭಗಳಲ್ಲಿ) ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಟೆಕ್ಸಾಸ್ನಲ್ಲಿರುವ ಟೆಸ್ಲಾ ಕೇಂದ್ರಕಚೇರಿಯ ಸಮೀಪ ಅವರನ್ನು ಗನ್ಗಳ ಸಹಿತ ಬಂಧಿಸಲಾಗಿದೆ' ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಅವರ ಪ್ರಚಾರ ಕಾರ್ಯಕ್ಕೆ ದೇಣಿಗೆ ನೀಡುವ ಮೂಲಕ ಮುಂದಿನ ಅಧ್ಯಕ್ಷರಾಗಿ ಅವರನ್ನು ಬೆಂಬಲಿಸುವುದಾಗಿ ಮಸ್ಕ್ ಹೇಳಿದ್ದಾರೆ. 2022ರಲ್ಲೂ ತನ್ನ ಹತ್ಯೆಗೆ ಪ್ರಯತ್ನ ನಡೆದಿತ್ತು. ತಾನಿರುವ ಸ್ಥಳದ ಮಾಹಿತಿಯನ್ನು ವರದಿಗಾರರು ಶೇರ್ ಮಾಡಿಕೊಳ್ಳುವ ಮೂಲಕ `ಹತ್ಯೆ ಸಂಚಿಗೆ ಸಹಕರಿಸುತ್ತಿದ್ದರು. ತನ್ನ ಖಾಸಗಿ ಜೆಟ್ ವಿಮಾನದ ಪ್ರಯಾಣದ ಮಾಹಿತಿಗಳನ್ನು ಪಡೆದಿದ್ದರು' ಎಂದು ಮಸ್ಕ್ ಆರೋಪಿಸಿದ್ದು ಈ ವರದಿಗಾರರ ಖಾತೆಗಳನ್ನು `ಎಕ್ಸ್'ನಿಂದ ನಿಷೇಧಿಸಲಾಗಿದೆ ಎಂದಿದ್ದಾರೆ. ರಶ್ಯದ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥ ಡಿಮಿಟ್ರಿ ರೆಗೊಝಿನ್ರಿಂದಲೂ ತನಗೆ ಬೆದರಿಕೆಯಿದೆ ಎಂದವರು ಹೇಳಿದ್ದಾರೆ.