ಈ ಬಾರಿಯ ಚುನಾವಣೆ ಸ್ವಾತಂತ್ರ್ಯ ಮತ್ತು ಅರಾಜಕತೆ ನಡುವಿನ ಆಯ್ಕೆ: ಕಮಲಾ ಹ್ಯಾರಿಸ್
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರು ಸ್ವಾತಂತ್ರ್ಯ ಮತ್ತು ಅರಾಜಕತೆ ನಡುವೆ ತಮಗೆ ಯಾವುದು ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ತಮ್ಮ ಎದುರಾಳಿ ಹಾಗೂ ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.
"ಈ ಪ್ರಚಾರದ ಅವಧಿಯಲ್ಲಿ ಅವರ ಪೂರ್ವ ದಾಖಲೆಗಳ ವಿರುದ್ಧ ನನ್ನದನ್ನು ಯಾವುದೇ ಸಂದರ್ಭದಲ್ಲಾದರೂ ಪ್ರಸ್ತುತಪಡಿಸುವ ಭರವಸೆಯನ್ನು ಹೆಮ್ಮೆಯಿಂದ ನೀಡುತ್ತೇನೆ. ಪ್ರತಿಯೊಬ್ಬರೂ ಪ್ರಯೋಜನ ಪಡೆಯುವುದು ಮಾತ್ರವಲ್ಲದೇ ಮುನ್ನಡೆಯುವ ಅವಕಾಶವನ್ನು ಪ್ರತಿಯೊಬ್ಬರಿಗೆ ಕಲ್ಪಿಸಿಕೊಡುವ ಭವಿಷ್ಯದ ಬಗ್ಗೆ ನನಗೆ ನಂಬಿಕೆ ಇದೆ" ಎಂದು ಅವರು ಘೋಷಿಸಿದರು.
ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಅಧ್ಯಕ್ಷೀಯ ರೇಸ್ ನಿಂದ ಹಿಂದೆ ಸರಿದ ಬೆನ್ನಲ್ಲೇ, ನಾಮನಿರ್ದೇಶನಕ್ಕಾಗಿ ಡೆಮಾಕ್ರಟಿಕ್ ಪ್ರತಿನಿಧಿಗಳ ಬೆಂಬಲ ಯಾಚಿಸಲು ಮಿಲ್ವಾಕೀಗೆ ಹ್ಯಾರಿಸ್ ಆಗಮಿಸಿದ್ದಾರೆ. ಬೈಡನ್ ಅವರು ಹ್ಯಾರಿಸ್ ಹೆಸರನ್ನು ದೃಢಪಡಿಸಿದ ಎರಡೇ ದಿನದಲ್ಲಿ ತಮ್ಮ ಮೊದಲ ಪ್ರಚಾರಸಭೆ ನಡೆಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಇದ್ದ ಬೆಂಬಲದ ಕೊರತೆಯನ್ನು ನೀಗಿಸುವ ಭರವಸೆಯನ್ನು ಈ ಸಭೆ ಮೂಡಿಸಿದ್ದು, ನವೆಂಬರ್ ನಲ್ಲಿ ನಡೆಯುವ ಚುಣಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರ ನಿಧಾನವಾಗಿ ವಿಶ್ವಾಸದ ಅಲೆ ಸೃಷ್ಟಿಯಾಗುತ್ತಿದೆ. ಮಂಗಳವಾರ ಕಾಂಗ್ರೆಸ್ ಮುಖಂಡರಾದ ಚಾರ್ಲ್ಸ್ ಶುಮೆರ್ ಮತ್ತು ಹ್ಯಾಕೀಮ್ ಜೆಫ್ರಿಸ್ ಸೇರಿದಂತೆ ಹಲವು ಮಂದಿ ಸೇರಿದಂತೆ ಹೆಚ್ಚಿನ ಡೆಮಾಕ್ರಟಿಕ್ ಅಧಿಕಾರಿಗಳು ಮತ್ತು ರಾಜಕೀಯ ಗುಂಪುಗಳ ಬೆಂಬಲವನ್ನು ಪಡೆದರು.
ವಿಸ್ಕಿನ್ ಸನ್ ನಲ್ಲಿ ನಿಲ್ಲುವ ಮೂಲಕ ಹ್ಯಾರಿಸ್ ಮಿಚಿಗನ್ ಹಾಗೂ ಪೆನ್ಸೆಲ್ವೇನಿಯಾ ಸೇರಿದಂತೆ 'ಬ್ಲೂ ವಾಲ್' ರಾಜ್ಯದಲ್ಲಿ ಗುರುತು ಮೂಡಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಗೆಲುವಿಗೆ ಡೆಮಾಕ್ರಟಿಕ್ ಪಕ್ಷಕ್ಕೆ ಇಲ್ಲಿನ ಬೆಂಬಲ ಅಗತ್ಯವಾಗಿದೆ.