ನಾಳೆ (ಫೆ.8) ಪಾಕ್ ನಲ್ಲಿ ಮಹಾ ಚುನಾವಣೆ: ಪಿಎಂಎಲ್ (ಎನ್), ಪಿಟಿಐ, ಪಿಪಿಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ
ಇಸ್ಲಾಮಾಬಾದ್: ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, 5128 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್ ಶರೀಫ್) (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ.
ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನಗಳ ಮೊದಲು, ಜನಪ್ರಿಯ ನಾಯಕ, ಪಿಟಿಐ ಪಕ್ಷದ ವರಿಷ್ಠ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಜೈಲು ಶಿಕ್ಷೆ ಘೋಷಿಸಲಾಗಿತ್ತು ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹತೆಯನ್ನು ಘೋಷಿಸಲಾಗಿತ್ತು. ಎಂದಿನಂತೆ ಈ ಚುನಾವಣೆಯಲ್ಲಿಯೂ ಪಾಕ್ ಮಿಲಿಟರಿ ಪ್ರಭಾವ ಬೀರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವುದರಿಂದ ಹಾಗೂ ಅವರ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದ ಬ್ಯಾಟ್ ಚುನಾವಣಾ ಚಿಹ್ನೆಯನ್ನು ನೀಡಲು ನಿರಾಕರಿಸಿರುವುದರಿಂದ ನವಾಝ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಪಕ್ಷಕ್ಕೆ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಿಎಂಎಲ್ (ಎನ್) ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಫಲವಾದಲ್ಲಿ ನವಾಝ್ ಶರೀಫ್ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವುದು ಖಚಿತವಾಗಿದೆ.
ಚುನಾವಣಾ ಚಿಹ್ನೆ ನಿರಾಕರಿಸಲ್ಪಟ್ಟ ಹೊರತಾಗಿಯೂ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಅಭ್ಯರ್ಥಿಗಳು ನವಾಝ್ ಶರೀಫ್ ಅವರ ಪಕ್ಷದ ಅಭ್ಯರ್ಥಿಗಳಿಗೆ ಪ್ರಬಲ ಹೋರಾಟ ನೀಡುತ್ತಿದ್ದಾರೆ. ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕೂಡಾ ಗಮನಾರ್ಹ ಸಾಧನೆಯ ನಿರೀಕ್ಷೆಯಲ್ಲಿದೆ.
2018ರಿಂದೀಚೆಗೆ ಪಾಕಿಸ್ತಾನದ ಮೊದಲ ಸಾರ್ವತ್ರಿಕ ಚುನಾವಣೆಗೆ ದೇಶದ ಆರ್ಥಿಕ ಪರಿಸ್ಥಿತಿಯ ಹಾಗೆ ಮಂಕುಬಡಿದಿದೆ ಎಂದು ಚುನಾವಣಾ ಸಮೀಕ್ಷಾ ಸಂಸ್ಥೆ ಗಲೂಪ್ ಹೇಳಿದೆ.
ಗುರುವಾರದ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ 12 ಕೋಟಿಗೂ ಅಧಿಕ ಮಂದಿ ಪಾಕ್ ಪ್ರಜೆಗಳು ಮತಚಲಾಯಿಸಲು ಅರ್ಹರಾಗಿದ್ದಾರೆ. ದೇಶಾದ್ಯಂತ 90 ಸಾವಿರಕ್ಕೂ ಅಧಿಕ ಮತಗಟ್ಟೆಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಕಣದಲ್ಲಿ ಮುಂಚೂಣಿಯಲ್ಲಿರುವ ಪಿಎಂಎಲ್ಎನ್ ಪಕ್ಷದ ವರಿಷ್ಠ, ನವಾಝ್ ಶರೀಫ್ ಅವರು 2018ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದರು. ಆದರೆ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಿಟನ್ ಗೆ ತೆರಳಿದವರು ಅಲ್ಲೇ ಅಶ್ರಯ ಪಡೆದಿದ್ದರು. 2022ರಲ್ಲಿ ಇಮ್ರಾನ್ ಸರಕಾರ ಪತನಗೊಂಡ ಆನಂತರ ಮಿಲಿಟಲಿ ಅಧಿಕಾರಿಗಳ ಬೆಂಬಲದೊಂದಿಗೆ 2023ರಲ್ಲಿ ಸ್ವದೇಶಕ್ಕೆ ವಾಪಾಸಾಗಿದ್ದರು.
ಇಮ್ರಾನ್ ಖಾನ್ ಅವರ ಪಕ್ಷವಾದ ಪಿಟಿಐ, ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಹಾಗೂ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಮತದಾರರನ್ನು ಸಮೀಪಿಸಲು ಯತ್ನಿಸುತ್ತಿದೆ.