ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದ ಟ್ರಕ್: ಕನಿಷ್ಠ 48 ಮಂದಿ ಮೃತ್ಯು
ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ತಿಳಿಸಿರುವ ಅವರು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ.
ನೈರೋಬಿ: ಶುಕ್ರವಾರ ರಾತ್ರಿ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ರಸ್ತೆ ಮೇಲಿನ ಇತರೆ ವಾಹನಗಳು ಹಾಗೂ ಪಾದಚಾರಿಗಳ ಮೇಲೆ ಚಲಿಸಿದ್ದರಿಂದ ಪೂರ್ವ ಕೀನ್ಯಾದ ಜನನಿಬಿಡ ವೃತ್ತವೊಂದರಲ್ಲಿ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.
"ಈವರೆಗೆ 48 ಮಂದಿ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದ್ದು, ಟ್ರಕ್ ಅಡಿ ಇನ್ನೂ ಒಂದಿಬ್ಬರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ" ಎಂದು ಕೆರಿಚೊ ಹಾಗೂ ನಕುರು ಪಟ್ಟಣಗಳ ನಡುವಿನ ಹೆದ್ದಾರಿಯಲ್ಲಿ ಸಂಭವಿಸಿರುವ ಅಪಘಾತದ ಕುರಿತು ಸ್ಥಳೀಯ ಪೊಲೀಸ್ ಕಮಾಂಡರ್ ಜೆಫ್ರಿ ಮೇಯೆಕ್ AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ತಿಳಿಸಿರುವ ಅವರು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ.
"ಕೆರಿಚೊ ಕಡೆಗೆ ಸಾಗುತ್ತಿದ್ದ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಬಸ್ ನಿಲ್ದಾಣವೊಂದರ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಮಟಮಸ್ (ಸ್ಥಳೀಯ ಮಿನಿಬಸ್) ಮೇಲೇರಿ ಹೋಗಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಬಸ್ ನಿಲ್ದಾಣದ ಬಳಿ ನಿಂತಿದ್ದ ಪಾದಚಾರಿಗಳು ಗಾಯಗೊಂಡಿದ್ದಾರೆ" ಎಂದು ಮೇಯೆಕ್ ತಿಳಿಸಿದ್ದಾರೆ.
ನಮ್ಮ ಆಸ್ಪತ್ರೆಗೆ ಈವರೆಗೆ 45 ದೇಹಗಳನ್ನು ತರಲಾಗಿದ್ದು, ಇನ್ನೂ ಹೆಚ್ಚಿನ ಸಂತ್ರಸ್ತರನ್ನು ವಿವಿಧ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಕೆರಿಚೊ ಕೌಂಟಿ ಆಸ್ಪತ್ರೆಯ ಹಿರಿಯ ವೈದ್ಯ ಕಾಲಿನ್ಸ್ ಕಿಪ್ಕೊಯೆಚ್ ಹೇಳಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿರುವ ಚಿತ್ರಗಳಲ್ಲಿ ಲೊಂಡಿಯಾನಿ ಜಂಕ್ಷನ್ ಎಂದು ಕರೆಯಲಾಗುವ ಪ್ರದೇಶದ ಬಳಿ ನಜ್ಜುಗುಜ್ಜಾಗಿರುವ ಹಲವಾರು ವಾಹನಗಳು ಕಂಡು ಬಂದಿವೆ.
ಘಟನಾ ಸ್ಥಳದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.