ನೀಲಿಚಿತ್ರ ನಟಿಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ದೋಷಿ | ನ್ಯೂಯಾರ್ಕ್ ನ್ಯಾಯಮಂಡಳಿ ತೀರ್ಪು
ನ್ಯೂಯಾರ್ಕ್ : ನೀಲಿಚಿತ್ರಗಳ ನಟಿಯೊಬ್ಬರ ಬಾಯಿ ಮುಚ್ಚಿಸಲು ಹಣ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ತನ್ನ ವಿರುದ್ಧದ ಎಲ್ಲಾ ಆರೋಪಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೋಷಿಯಾಗಿದ್ದಾರೆ ಎಂದು ನ್ಯೂಯಾರ್ಕ್ ನ್ಯಾಯಮಂಡಳಿಯೊಂದು ಗುರುವಾರ ಹೇಳಿದೆ.
ಇದರೊಂದಿಗೆ ಪ್ರಕರಣವೊಂದರಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರಾಗಿ ಟ್ರಂಪ್ ಇತಿಹಾಸ ಸೇರಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಈ ಬೆಳವಣಿಗೆ ನಡೆದಿದೆ.
ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ರ ಬಾಯಿ ಮುಚ್ಚಿಸುವುದಕ್ಕಾಗಿ ನೀಡಲಾಗಿರುವ ಹಣವನ್ನು ಅಡಗಿಸಿಡುವುದಕ್ಕಾಗಿ ತನ್ನ ವ್ಯವಹಾರಗಳ ತಪ್ಪು ಲೆಕ್ಕಗಳನ್ನು ನೀಡಿರುವುದಕ್ಕೆ ಸಂಬಂಧಿಸಿದ 34 ಆರೋಪಗಳ ಪೈಕಿ ಪ್ರತಿಯೊಂದರಲ್ಲೂ ಟ್ರಂಪ್ ತಪ್ಪಿತಸ್ಥರಾಗಿದ್ದಾರೆ ಎನ್ನುವುದನ್ನು ನ್ಯಾಯಮಂಡಳಿಯು ಕಂಡುಕೊಂಡಿದೆ. ಕಾನೂನಿನ ಪ್ರಕಾರ, ಅವರಿಗೆ ಪ್ರತಿಯೊಂದು ಆರೋಪಕ್ಕೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ನ್ಯಾಯಾಲಯವು ಅವರನ್ನು ನಿಗಾ (ಪ್ರೊಬೇಶನ್)ದಲ್ಲಿ ಇಡುವ ಸಾಧ್ಯತೆ ಹೆಚ್ಚಾಗಿದೆ.
77 ವರ್ಷದ ರಿಪಬ್ಲಿಕನ್ ಪಕ್ಷದ ನಾಯಕ ಟ್ರಂಪ್ ಈಗ ಜೈಲಿನಿಂದ ಹೊರಗಿದ್ದಾರೆ. ಅವರು ಈಗ ದೋಷಿಯಾಗಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲೇ ಪ್ರಥಮವಾಗಿದೆ.
ಆದರೆ, ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅವರನ್ನು ನಿಷೇಧಿಸಲಾಗುವುದಿಲ್ಲ. ಒಂದು ವೇಳೆ, ಅವರು ಜೈಲಿಗೆ ಹೋದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಹಾಲಿ ಅಧ್ಯಕ್ಷ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ರನ್ನು ಎದುರಿಸಲಿದ್ದಾರೆ.
ಶಿಕ್ಷೆಯ ಪ್ರಮಾಣವನ್ನು ಜುಲೈ 11ರಂದು ಘೋಷಿಸುವುದಾಗಿ ನ್ಯಾಯಾಧೀಶ ಜುವಾನ್ ಮರ್ಚನ್ ಹೇಳಿದರು. ಅದಕ್ಕಿಂತ ನಾಲ್ಕು ದಿನಗಳ ಬಳಿಕ, ಮಿಲ್ವಾಕೀಯಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಅಲ್ಲಿ ಟ್ರಂಪ್ರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸಲಾಗುತ್ತದೆ.
12 ಸದಸ್ಯರ ನ್ಯಾಯಮಂಡಳಿಯು ಎರಡು ದಿನಗಳ ಅವಧಿಯಲ್ಲಿ 11 ಗಂಟೆಗಳಿಗೂ ಹೆಚ್ಚು ಸಮಯ ಸಮಾಲೋಚನೆ ನಡೆಸಿ ಸರ್ವಾನುಮತದ ತೀರ್ಪು ನೀಡಿತು.
ವಿಚಾರಣೆಯ ಉದ್ದಕ್ಕೂ ನ್ಯಾಯಮಂಡಳಿ ಸದಸ್ಯರ ಗುರುತನ್ನು ರಹಸ್ಯವಾಗಿಡಲಾಗಿತ್ತು. ಇದು ಅಪರೂಪದ ವಿದ್ಯಮಾನವಾಗಿದೆ. ಸಾಮಾನ್ಯವಾಗಿ ಮಾಫಿಯ ಅಥವಾ ಇತರ ಹಿಂಸಾತ್ಮಕ ಆರೋಪಿಗಳು ಒಳಗೊಂಡಿರುವ ಪ್ರಕರಣಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತದೆ.
ಏನಿದು ಪ್ರಕರಣ?
ಟ್ರಂಪ್ರ ವಕೀಲ ಮೈಕಲ್ ಕೋಹನ್, 2016ರ ಅಧ್ಯಕ್ಷೀಯ ಚುನಾವಣೆಯ ಮುನ್ನ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ರ ಬಾಯಿ ಮುಚ್ಚಿಸಲು ಅವರಿಗೆ 1,30,000 ಡಾಲರ್ (ಸುಮಾರು 1.08 ಕೋಟಿ ರೂಪಾಯಿ) ಪಾವತಿಸಿದ್ದರು. ಆ ಹಣವನ್ನು ವಕೀಲನಿಗೆ ಮರುಪಾವತಿಸುವುದಕ್ಕಾಗಿ ಟ್ರಂಪ್ ತನ್ನ ವ್ಯಾಪಾರದ ತಪ್ಪು ಲೆಕ್ಕಗಳನ್ನು ನೀಡಿದ್ದರು.
ತಾನು 2006ರಲ್ಲಿ ಗೃಹಸ್ಥ ಟ್ರಂಪ್ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂಬುದಾಗಿ ನೀಲಿಚಿತ್ರ ನಟಿ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದರು. ಈ ಹೇಳಿಕೆಗಳು ತನ್ನ ಅಧ್ಯಕ್ಷೀಯ ಪದವಿಗೆ ಮುಳುವಾಗಬಹುದು ಎಂದು ಭಾವಿಸಿದ ಟ್ರಂಪ್ ನಟಿಗೆ ಹಣ ಕೊಟ್ಟು ಬಾಯಿ ಮುಚ್ಚಿಸಿದ್ದರು. ಆ ಚುನಾವಣೆಯಲ್ಲಿ ಟ್ರಂಪ್ಗೆ ಡೆಮಾಕ್ರಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್ ಎದುರಾಳಿಯಾಗಿದ್ದರು.
ವಿಚಾರಣೆಯ ವೇಳೆ, ನೀಲಿಚಿತ್ರ ನಟಿ ಸುದೀರ್ಘ ಸಾಕ್ಷ್ಯ ನುಡಿದರು. ಪ್ರಕರಣದಲ್ಲಿ ಟ್ರಂಪ್ರ ಮಾಜಿ ವಕೀಲ ಕೋಹನ್ ಕೂಡ ಟ್ರಂಪ್ ವಿರುದ್ಧ ಸಾಕ್ಷ್ಯ ಹೇಳಿದರು.
ಆದರೆ, ತಾನು ಸ್ಟಾರ್ಮಿ ಡೇನಿಯಲ್ಸ್ ಜೊತೆ ಲೈಂಗಿಕ ಸಂಬಂಧ ಹೊಂದಿಯೇ ಇಲ್ಲ ಎಂದು ವಿಚಾರಣೆಯ ವೇಳೆ ಟ್ರಂಪ್ ನಿರಂತರವಾಗಿ ಪ್ರತಿಪಾದಿಸಿದರು. ಆದರೆ, ಅವರು ತನ್ನ ಪರವಾಗಿ ಸಾಕ್ಷ್ಯ ಮಾತ್ರ ನುಡಿಯಲಿಲ್ಲ.
ನೀಲಿಚಿತ್ರ ನಟಿಗೆ ನೀಡಲಾಗಿರುವ ಹಣವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂದು ಟ್ರಂಪ್ರ ವಕೀಲರು ವಾದಿಸಿದರು.
ನಾನು ಅಮಾಯಕ: ಟ್ರಂಪ್
‘‘ನಾನೊಬ್ಬ ಅಮಾಯಕ ವ್ಯಕ್ತಿ’’ ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ನಿಜವಾದ ತೀರ್ಪು ಮತದಾರರಿಂದ ಬರಲಿದೆ’’ ಎಂದು ಹೇಳಿಕೊಂಡರು. ತನ್ನ ವಿರುದ್ಧದ ವಿಚಾರಣೆಯಲ್ಲಿ ಮೋಸ ನಡೆದಿದೆ ಮತ್ತು ಇದು ಅವಮಾನಕರ ಎಂದು ಅವರು ಹೇಳಿದರು.
ಅದೇ ವೇಳೆ, ಬೈಡನ್ನ ಚುನಾವಣಾ ಕಚೇರಿಯು ಹೇಳಿಕೆಯೊಂದನ್ನು ನೀಡಿದ್ದು, ‘‘ಯಾರೂ ಕಾನೂನಿಗಿಂತ ಮೇಲಲ್ಲ’’ ಎನ್ನುವುದನ್ನು ನ್ಯಾಯಾಲಯದ ತೀರ್ಪು ಹೇಳಿದೆ ಎಂದು ತಿಳಿಸಿದೆ. ‘‘ಟ್ರಂಪ್ ನಮ್ಮ ಪ್ರಜಾಪ್ರಭುತ್ವಕ್ಕೆ ಇದಕ್ಕಿಂತಲೂ ದೊಡ್ಡ ಬೆದರಿಕೆಯನ್ನು ಒಡ್ಡಲು ಸಾಧ್ಯವಿಲ್ಲ’’ ಎಂದು ಅದು ಹೇಳಿದೆ.