ಇರಾನ್ ಸುಪ್ರೀಂಕೋರ್ಟ್‌ನಲ್ಲಿ ಗುಂಡಿಕ್ಕಿ ಇಬ್ಬರು ನ್ಯಾಯಾಧೀಶರ ಹತ್ಯೆ

ಸಾಂಧರ್ಬಿಕ ಚಿತ್ರ
ಟೆಹರಾನ್: ಇರಾನ್ ರಾಜಧಾನಿ ಟೆಹರಾನ್‌ನಲ್ಲಿನ ಸುಪ್ರೀಂಕೋರ್ಟ್ ಕಟ್ಟಡದಲ್ಲಿ ಶನಿವಾರ ಅಪರಿಚಿತನೊಬ್ಬನ ಗುಂಡಿನ ದಾಳಿಗೆ ಇಬ್ಬರು ನ್ಯಾಯಾಧೀಶರು ಸಾವನ್ನಪ್ಪಿದ್ದಾರೆಂದು ಸರಕಾರಿ ಸ್ವಾಮ್ಯದ ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.
‘‘ಬಂದೂಕುಧಾರಿಯೊಬ್ಬ ಸುಪ್ರೀಂಕೋರ್ಟ್‌ನೊಳಗೆ ನುಸುಳಿ ದಿಟ್ಟ ಹಾಗೂ ಅನುಭವಿ ನ್ಯಾಯಾಧೀಶರಿಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಕೃತ್ಯದಲ್ಲಿ ಇಬ್ಬರು ನ್ಯಾಯಾಧೀಶರು ಹುತಾತ್ಮರಾಗಿದ್ದಾರೆ’’ ಎಂದು ಇರಾನ್ ನ್ಯಾಯಾಂಗದ ಆನ್‌ಲೈನ್ ಜಾಲತಾಣ ಮಿಝಾನ್ ವರದಿ ಮಾಡಿದೆ.
ಗುಂಡುಹಾರಾಟ ನಡೆಸಿದ ಬಳಿಕ ಹಂತಕನು ತನಗೆ ತಾನೇ ಗುಂಡಿಕ್ಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಳಿಯಲ್ಲಿ ಇನ್ನೋರ್ವ ವ್ಯಕ್ತಿ ಕೂಡಾ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಹತ್ಯೆಯಾದ ನ್ಯಾಯಾಧೀಶರನ್ನು ಅಲಿ ರಝಾನಿ ಹಾಗೂ ಮೊಹಮ್ಮದ್ ಮೊಗಿಸ್ಸೆಹ್ ಎಂದು ಮಿಝಾನ್ ಗುರುತಿಸಿದೆ. ರಾಷ್ಟ್ರೀಯ ಭದ್ರತೆ, ಬೇಹುಗಾರಿಕೆ ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಅವರು ನಡೆಸುತ್ತಿದ್ದರು ಎಂದು ಅದು ಹೇಳಿದೆ.
ಹ್ಯಾಂಡ್‌ಗನ್ ಹಿಡಿದ ವ್ಯಕ್ತಿಯೊಬ್ಬನು ಈ ನ್ಯಾಯಾಧೀಶರುಗಳಿದ್ದ ಕೊಠಡಿಯನ್ನು ಪ್ರವೇಶಿಸಿ ಅವರಿಗೆ ಗುಂಡಿಕ್ಕಿದ್ದಾನೆಂದು ನ್ಯಾಯಾಂಗ ಇಲಾಖೆಯ ವಕ್ತಾರ ಅಸ್ಗರ್ ಜಹಾಂಗೀರ್ ತಿಳಿಸಿದ್ದಾರೆ.
ಹತ್ಯೆಗಳ ಹಿಂದಿರುವ ಉದ್ದೇಶವೇನೆಂಬುದು ತಕ್ಷಣವೇ ತಿಳಿದುಬಂದಿಲ್ಲ. ಆದರೆ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನ ಮುಂದಿರುವ ಯಾವುದೇ ಪ್ರಕರಣಗಳಲ್ಲಿ ಹಂತಕನು ಒಳಗೊಂಡಿರಲಿಲ್ಲ ಎಂದು ಮಿಝಾನ್ ವರದಿ ತಿಳಿಸಿದೆ. ಆದರೆ ಹಂತಕನ ಬಗ್ಗೆ ಅದು ಇತರ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇಬ್ಬರು ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆಯೆಂದು ಮಿಝಾನ್ ತಿಳಿಸಿದೆ.
ಕೊಲೆಯಾದ ಹಿರಿಯ ನ್ಯಾಯಾಧೀಶ ಮೊಗ್ಹಿಸ್ಸೆಹ್ ಅವರು ಅಸಂಖ್ಯಾತ ನ್ಯಾಯಯುತವಲ್ಲದ ವಿಚಾರಣೆಗಳನ್ನು ನಡೆಸಿದ್ದಾರೆ, ದೃಢೀಕರಿಸಲಾಗದ ಆರೋಪಗಳನ್ನು ಹೊರಿಸಿದ್ದಾರೆ ಹಾಗೂ ಪುರಾವೆಗಳನ್ನು ಕಡೆಗಣಿಸಿದ್ದರು ಎಂದು ಆರೋಪಿಸಿ ಅವರ ವಿರುದ್ಧ 2019ರಲ್ಲಿ ಆಗಿನ ಅಮೆರಿಕ ಸರಕಾರವು ನಿರ್ಬಂಧಗಳನ್ನು ವಿಧಿಸಿತ್ತು.
ಹತ್ಯೆಗೀಡಾದ ಇನ್ನೋರ್ವ ನ್ಯಾಯಾಧೀಶರಾದ ರಝಿನಿ(71) ಅವರು ಇರಾನ್‌ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ವಹಿಸಿದ್ದರು. ಈ ಹಿಂದೆ 1998ರಲ್ಲಿ ಹಂತಕರು ಅವರ ವಾಹನದಲ್ಲಿ ಆಯಸ್ಕಾಂತೀಯ ಬಾಂಬ್ ಇರಿಸಿ ಹತ್ಯೆಗೆ ಯತ್ನಿಸಿದ್ದರಾದರೂ, ಅದು ವಿಫಲಗೊಂಡಿತ್ತು.
ಇರಾನ್‌ನಲ್ಲಿ ನ್ಯಾಯಾಧೀಶರನ್ನು ಗುರಿಯಿರಿಸಿ ದಾಳಿ ನಡೆಸಿದ ಪ್ರಕಣಗಳು ತೀರಾ ವಿರಳವಾದರೂ, ಕಳೆದ ಕೆಲವು ವರ್ಷಗಳಲ್ಲಿ ಗಣ್ಯ ವ್ಯಕ್ತಿಗಳನ್ನು ಗುರಿಯಿರಿಸಿ ಶೂಟೌಟ್‌ಗಳನ್ನು ನಡೆಸಿದ ಹಲವಾರು ಪ್ರಕರಣಗಳು ವರದಿಯಾಗಿವೆ.
ಕಳೆದ ವರ್ಷದ ಆಕ್ಟೋಬರ್‌ನಲ್ಲಿ, ದಕ್ಷಿಣದ ನಗರವಾದ ಕಝೆರೂನ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯ ಶಿಯಾ ಧರ್ಮಗುರುವೊಬ್ಬರನ್ನು ಬ್ಯಾಂಕ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
2005ರ ಆಗಸ್ಟ್‌ನಲ್ಲಿ ಇರಾನ್‌ನ ಖ್ಯಾತ ನ್ಯಾಯಾಧೀಶ ಹಸ್ಸನ್ ಮೊಘಡ್ಡಾಸ್ ಅವರನ್ನು ಇಬ್ಬರು ಬಂದೂಕುಧಾರಿಗಳು ಟೆಹರಾನ್‌ನ ಜನನಿಬಿಡ ಪ್ರದೇಶದಲ್ಲಿ ಗುಂಡಿಕ್ಕಿ ಕೊಂದಿದ್ದರು.