ಬ್ರಿಟನ್ ಚುನಾವಣೆ: 12 ಸಿಖ್ಖರ ಸಹಿತ ಭಾರತ ಮೂಲದ ಸಹಿತ 28 ಮಂದಿ ಆಯ್ಕೆ
ಲಂಡನ್: ಬ್ರಿಟನ್ ಸಂಸತ್ತಿಗೆ ಶುಕ್ರವಾರ ದಾಖಲೆ ಸಂಖ್ಯೆಯಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಾರ್ಟಿ ಹೀನಾಯ ಸೋನು ಅನುಭವಿಸಿದ್ದರೂ, ಕೆಲ ಭಾರತೀಯ ಮೂಲದವರು ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಸತ್ತಿಗೆ ಆಯ್ಕೆಯಾದ 28 ಮಂದಿಯ ಪೈಕಿ 12 ಮಂದಿ ಸಿಖ್ ಸಮುದಾಯಕ್ಕೆ ಸೇರಿದವರು. ಇವರಲ್ಲಿ ಆರು ಮಂದಿ ಮಹಿಳೆಯರೂ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾಗಿದ್ದಾರೆ. ಎಲ್ಲ ಸಿಖ್ ಸಂಸದರು ಲೇಬರ್ ಪಕ್ಷಕ್ಕೆ ಸೇರಿದವರು. ಇವರಲ್ಲಿ ಒಂಬತ್ತು ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, ಇಬ್ಬರು ಮೂರನೇ ಬಾರಿ ಹಾಗೂ ಒಬ್ಬರು ಎರಡನೇ ಬಾರಿ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾಗಿದ್ದಾರೆ.
ಟೋರಿ ಅಶ್ವೀರ್ ಸಂಘಾ ಅವರನ್ನು ಸೋಲಿಸಿರುವ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್‍ಜೀತ್ ಸಿಂಗ್ ಧೇಸಿ ಲೇಬರ್ ಪಕ್ಷದ ಅಭ್ಯರ್ಥಿಗಳಾಗಿ ಬರ್ಮಿಂಗ್‍ಹ್ಯಾಮ್ ಎಡ್ಜ್‍ಬಾಸ್ಟನ್‍ನಿಂದ ಸತತ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ನಾದಿಯಾ ವಿಠೋಮ್ ಅವರು ನಾಟ್ಟಿಂಗ್‍ಹ್ಯಾಂ ಪೂರ್ವ ಕ್ಷೇತ್ರದಿಂದ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. 2019ರ ಚುನಾವಣೆಯಲ್ಲಿ ಅವರು 23ನೇ ವಯಸ್ಸಿನಲ್ಲೇ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿದ್ದರು.
ಕಿರಿತ್ ಎಂಟ್ವಿಸ್ಟೈಲ್ ಅವರು ಬಾಲ್ಟನ್ ನಾರ್ಥ್‍ಈಸ್ಟ್ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳಾ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಸೋನಿಯಾ ಕುಮಾರ್ ಅವರು ಡಡ್ಲಿ ಸಂಸದೀಯ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ. ಅಂತೆಯೇ ಹರ್‍ಪ್ರೀತ್ ಕೌರ್ ಉಪ್ಪಲ್ ಹಡ್ಡರ್ಸ್‍ಫೀಲ್ಡ್ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದಿದ್ದಾರೆ.