ರಶ್ಯದ ಎರಡು ತೈಲ ಡಿಪೋಗಳ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ
ಮಾಸ್ಕೊ: ರಶ್ಯದ ವಿರುದ್ಧ ಉಕ್ರೇನ್ ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದ್ದು, ಎರಡು ತೈಲ ಡಿಪೋಗಳಿಗೆ ಹಾನಿ ಮಾಡಿದೆ ಎಂದು ಪ್ರಾಂತೀಯ ಗವರ್ನರ್ ಗಳು ತಿಳಿಸಿದ್ದಾರೆ.
ದಾಳಿಗೊಳಗಾದ ಈ ಎರಡು ತೈಲಘಟಕಗಳು ರಶ್ಯದ ಕಸ್ತೊವೊ ಹಾಗೂ ಒರಿಯೊಲ್ ಪಟ್ಟಣಗಳಿಂದ ನೂರಾರು ಕಿ.ಮೀ. ದೂರದಲ್ಲಿವೆ. ದಾಳಿಯ ಬಳಿಕ ತೈಲ ಘಟಕಗಳಲ್ಲಿ ಭಾರೀ ಬೆಂಕಿ ಕಾಣಿಸಿಕಂಡಿತೆಂದು ಮೂಲಗಳು ತಿಳಿಸಿವೆ.
ತೈಲ ಘಟಕಗಳಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ವಿಶೇಷ ಅಗ್ನಿಶಾಮಕದಳಗಳು ಶ್ರಮಿಸುತ್ತಿವೆ. ಆದರೆ ದಾಳಿಯಲ್ಲಿ ಯಾವುದೇ ಸಾವುನೋವುಗಳಾಗಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿಲ್ಲವೆಂದು ಪ್ರಾಂತೀಯ ಗವರ್ನರ್ ಅವರ ಕಾರ್ಯಾಲಯ ತಿಳಿಸಿದೆ.
ಈ ಮಧ್ಯೆ ಉಕ್ರೇನ್ ಸೇನೆಯ ಡ್ರೋನ್ ಗಳು ಖಾರ್ಕಿವ್ ನಗರದ ಪಕ್ಕದಲ್ಲಿರುವ ರಶ್ಯದ ಪ್ರಾಂತವಾದ ಬೆಲ್ಗೊರೊಡ್ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದೆ ಎಂದು ಪ್ರಾಂತೀಯ ಗವರ್ನರ್ ಅವರ ಕಾರ್ಯಾಲಯ ತಿಳಿಸಿದೆ. ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವಾದರೂ, ವಿದ್ಯುತ್ ತಂತಿಗೆ ಹಾನಿಯಾಗಿದೆ ಎಂದು, ಪ್ರಾಂತೀಯ ಗವರ್ನರ್ ವ್ಯಾಚೆಸ್ಲಾವ್ ಗ್ಲ್ಯಾಡ್ಕೊವ್ ತಿಳಿಸಿದ್ದಾರೆ.