ಉಕ್ರೇನ್ ನಲ್ಲಿ ರಶ್ಯದಿಂದ ಯುದ್ಧಾಪರಾಧ: ವಿಶ್ವಸಂಸ್ಥೆ ವರದಿ
ಜಿನೆವಾ, ಮಾ.15: ಉಕ್ರೇನ್ನಲ್ಲಿ ರಶ್ಯವು ವ್ಯವಸ್ಥಿತ ಚಿತ್ರಹಿಂಸೆ ಮತ್ತು ಅತ್ಯಾಚಾರ ಸೇರಿದಂತೆ ಹಕ್ಕುಗಳ ಗಂಭೀರ ಉಲ್ಲಂಘನೆ ಹಾಗೂ ಯುದ್ಧಾಪರಾಧಗಳನ್ನು ಮುಂದುವರಿಸಿದೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಎರಡು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಶ್ಯ, ಇತ್ತೀಚಿನ ದಿನಗಳಲ್ಲಿ ಯುದ್ಧಭೂಮಿಯಲ್ಲಿ ಮುನ್ನಡೆ ಸಾಧಿಸಿದೆ. ಉಕ್ರೇನ್ ಮೇಲಿನ ಪೂರ್ಣಪ್ರಮಾಣದ ಆಕ್ರಮಣ ಆರಂಭವಾದಂದಿನಿಂದ ಅಲ್ಲಿನ ಮಾನವ ಹಕ್ಕು ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ನೇಮಿಸಿರುವ ಉನ್ನತ ಮಟ್ಟದ ತನಿಖಾ ಆಯೋಗ(ಸಿಒಐ) ` ಕಳೆದ ಸುಮಾರು 2 ವರ್ಷಗಳಿಂದ ಉಕ್ರೇನ್ನಲ್ಲಿ ವ್ಯಾಪಕ ದೌರ್ಜನ್ಯ ನಡೆದಿರುವ ಬಗ್ಗೆ ಹೊಸ ಪುರಾವೆ ಲಭ್ಯವಾಗಿದೆ' ಎಂದಿದೆ. ನಾಗರಿಕ ಪ್ರದೇಶಗಳಲ್ಲಿ ಸ್ಫೋಟಕ ಶಸ್ತ್ರಾಸ್ತ್ರಗಳ ನಿರಂತರ ಬಳಕೆಯ ಬಗ್ಗೆ ಸಿಒಐ ಮುಖ್ಯಸ್ಥ ಎರಿಕ್ ಮೋಸ್ ಕಳವಳ ವ್ಯಕ್ತಪಡಿಸಿದ್ದು ನಾಗರಿಕರಿಗೆ ಸಂಭಾವ್ಯ ಹಾನಿಯ ಬಗ್ಗೆ ರಶ್ಯದ ಸಶಸ್ತ್ರ ಪಡೆಗಳ ನಿರ್ಲಕ್ಷ್ಯದ ವರ್ತನೆಯನ್ನು ಇದು ದೃಢೀಕರಿಸುತ್ತದೆ. ಯುದ್ಧಾಪರಾಧಕ್ಕೆ ಸಂಬಂಧಿಸಿದ ಅಂತಾರ್ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಅಂತಾರ್ ರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ರಶ್ಯದ ಅಧಿಕಾರಿಗಳು ಉಲ್ಲಂಘಿಸಿರುವುದನ್ನು ಈ ಪುರಾವೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಗುರುತಿಸಲಾದ ಕೆಲವು ಸನ್ನಿವೇಶಗಳು ಮಾನವೀಯತೆಯ ವಿರುದ್ಧದ ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ದೃಢಪಡಿಸಲು ಇನ್ನಷ್ಟು ತನಿಖೆಯ ಅಗತ್ಯವಿದೆ ಎಂದವರು ಹೇಳಿದ್ದಾರೆ. ಈ ಹಿಂದಿನ ವರದಿಯನ್ನು ದೃಢಪಡಿಸಿರುವ ವಿಶ್ವಸಂಸ್ಥೆ, ಉಕ್ರೇನ್ ಮತ್ತು ರಶ್ಯ ಎರಡೂ ಕಡೆ ರಶ್ಯನ್ ಅಧಿಕಾರಿಗಳಿಂದ ವ್ಯಾಪಕ ಮತ್ತು ವ್ಯವಸ್ಥಿತ ದೌರ್ಜನ್ಯ ನಡೆದಿದೆ ಎಂದಿದೆ. ಉಕ್ರೇನ್ಗೆ 16 ಪ್ರತ್ಯೇಕ ಭೇಟಿಗಳಲ್ಲಿ 800ಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ತಯಾರಿಸಲಾಗಿದೆ. ಉಕ್ರೇನ್ನ ಯುದ್ಧಕೈದಿಗಳನ್ನು ರಶ್ಯದ ಅಧಿಕಾರಿಗಳು ನಡೆಸಿಕೊಳ್ಳುವ ರೀತಿ ಭಯಾನಕವಾಗಿದೆ. ಮಹಿಳೆಯರ ವಿರುದ್ಧ ಅತ್ಯಾಚಾರ ಹಾಗೂ ಇತರ ಲೈಂಗಿಕ ಹಿಂಸೆಯ ಪ್ರಕರಣಗಳನ್ನೂ ವಿಶ್ವಸಂಸ್ಥೆಯ ತನಿಖಾಧಿಕಾರಿಗಳ ತಂಡ ಸಂಗ್ರಹಿಸಿದೆ.
ಉಕ್ರೇನ್ನ ಮಕ್ಕಳನ್ನು ಅಕ್ರಮವಾಗಿ ರಶ್ಯ ನಿಯಂತ್ರಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವ ಬಗ್ಗೆ ಹೆಚ್ಚುವರಿ ಪುರಾವೆ ಲಭಿಸಿದೆ. ಜತೆಗೆ, ಉಕ್ರೇನ್ನ ಸಾಂಸ್ಕøತಿಕ ವಸ್ತುಗಳು ಮತ್ತು ಸರಕಾರದ ದಾಖಲೆಗಳನ್ನೂ ರಶ್ಯ ಲೂಟಿ ಮಾಡಿದೆ. 2022ರ ಮಾರ್ಚ್ನಿಂದ ಸುಮಾರು 8 ತಿಂಗಳು ರಶ್ಯ ಪಡೆಗಳ ವಶದಲ್ಲಿದ್ದ ಖೆರ್ಸಾನ್ ನಗರದಲ್ಲಿನ `ಖೆರ್ಸಾನ್ ಪ್ರಾದೇಶಿಕ ಕಲಾಗ್ಯಾಲರಿ'ಯಿಂದ ಅಮೂಲ್ಯ ಸಾಂಸ್ಕೃತಿಕ ವಸ್ತುಗಳು ಹಾಗೂ ಖೆರ್ಸಾನ್ ಪ್ರಾಂತದ ಸರಕಾರಿ ದಾಖಲೆಗಳನ್ನು ರಶ್ಯ ಆಕ್ರಮಿತ ಕ್ರಿಮಿಯಾಕ್ಕೆ ಸಾಗಿಸಲಾಗಿದೆ. ಎರಡೂ ಸಂಸ್ಥೆಗಳ ಸಿಬಂದಿಯ ಅಂದಾಜಿನ ಪ್ರಕಾರ, ಮ್ಯೂಸಿಯಂನಿಂದ 10,000ಕ್ಕೂ ಅಧಿಕ ವಸ್ತುಗಳನ್ನು ಮತ್ತು ಸರಕಾರಿ ಪತ್ರಾಗಾರದ ಸುಮಾರು 70%ದಷ್ಟು ದಾಖಲೆಗಳನ್ನು ಸ್ಥಳಾಂತರಿಸಲಾಗಿದೆ. ಸಾಂಸ್ಕೃತಿಕ ವಸ್ತುಗಳನ್ನು ಸ್ಥಳಾಂತರಿಸಿರುವುದನ್ನು ಯುದ್ಧಾಪರಾಧವೆಂದು ಪರಿಗಣಿಸಬಹುದು ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
► ಮಿಲಿಟರಿ ಮಾಹಿತಿಗೆ ಕೈದಿಗಳಿಗೆ ಚಿತ್ರಹಿಂಸೆ
ರಶ್ಯದ ವಶದಲ್ಲಿದ್ದ 203 ಉಕ್ರೇನ್ ಯುದ್ಧಕೈದಿಗಳ ಸಂದರ್ಶನವನ್ನು ಆಧರಿಸಿ ಕಳೆದ ವರ್ಷದ ಮಾರ್ಚ್ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ವರದಿಯೊಂದನ್ನು ಬಿಡುಗಡೆಗೊಳಿಸಿತ್ತು. ರಶ್ಯದ ವಶದಲ್ಲಿರುವ ಉಕ್ರೇನ್ ಯುದ್ಧಕೈದಿಗಳ ಸ್ಥಿತಿ ಆಘಾತಕಾರಿಯಾಗಿದೆ. ರಶ್ಯದ ಯೋಧರು ಮತ್ತು ಫೆಡರಲ್ ಸೆಕ್ಯುರಿಟಿ ಸರ್ವಿಸ್ನ ಅಧಿಕಾರಿಗಳು ಮಿಲಿಟರಿ ಮಾಹಿತಿ ಪಡೆಯಲು, ಅಥವಾ ಸೇಡು ತೀರಿಸಿಕೊಳ್ಳಲು ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.