ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ಕಳವಳ

Update: 2024-07-26 16:40 GMT

Photo:X/@ndtv

ವಿಶ್ವಸಂಸ್ಥೆ : ಭಾರತದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತ ಗುಂಪುಗಳು ಎದುರಿಸುತ್ತಿರುವ ಹಿಂಸಾಚಾರ, ತಾರತಮ್ಯದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಗುರುವಾರ ಕಳವಳ ವ್ಯಕ್ತಪಡಿಸಿದ್ದು ಅಂತಹ ತಾರತಮ್ಯಗಳನ್ನು ನಿಷೇಧಿಸಲು ಸಮಗ್ರ ಕಾನೂನಿಗೆ ಕರೆ ನೀಡಿದೆ.

` ತಾರತಮ್ಯವನ್ನು ಪರಿಹರಿಸಲು ಭಾರತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸುವಂತೆಯೇ, ಸಮಿತಿಯು ಅಲ್ಪಸಂಖ್ಯಾತ ಗುಂಪುಗಳ ವಿರುದ್ಧದ ತಾರತಮ್ಯ ಮತ್ತು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಮಿತಿಯ ಇತ್ತೀಚಿನ ಸಭೆಯಲ್ಲಿ ಕ್ರೊಯೇಷಿಯಾ, ಹೊಂಡುರಾಸ್, ಭಾರತ, ಮಾಲ್ದೀವ್ಸ್, ಮಾಲ್ಟಾ, ಸುರಿನಾಮ್ ಮತ್ತು ಸಿರಿಯಾ ದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಬಿಡುಗಡೆಗೊಳಿಸಿದ ವರದಿಯಲ್ಲಿ ಈ ಉಲ್ಲೇಖವಿದೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರಾಷ್ಟ್ರೀಯ ಒಪ್ಪಂದದ ಅನುಷ್ಟಾನದ ಕುರಿತು ತಜ್ಞರ ಸಂಸ್ಥೆಯ ಕಾಳಜಿ ಮತ್ತು ಶಿಫಾರಸುಗಳನ್ನು ವರದಿ ತಿಳಿಸುತ್ತದೆ.

ತಾರತಮ್ಯವನ್ನು ನಿಷೇಧಿಸುವ ಸಮಗ್ರ ಕಾನೂನನ್ನು ಅಳವಡಿಸಿಕೊಳ್ಳಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು , ಕಾನೂನು ಜಾರಿ ಅಧಿಕಾರಿಗಳು, ನ್ಯಾಯಾಂಗ ಮತ್ತು ಸಮುದಾಯದ ನಾಯಕರಿಗೆ ವೈವಿಧ್ಯತೆಯ ಗೌರವವನ್ನು ಉತ್ತೇಜಿಸಲು ತರಬೇತಿ ನೀಡುವಂತೆ ತಜ್ಞರ ಸಂಸ್ಥೆ ಭಾರತವನ್ನು ಆಗ್ರಹಿಸಿದೆ. ಭಾರತದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ಕೆಲವು ನಿಬಂಧನೆಗಳು ಮತ್ತು ಇತರ ಭಯೋತ್ಪಾದನಾ ನಿಗ್ರಹ ಶಾಸನಗಳ ಬಗ್ಗೆಯೂ ಸಮಿತಿ ಕಳವಳ ವ್ಯಕ್ತಪಡಿಸಿದೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು ಗಲಭೆ ಪೀಡಿತ ಪ್ರದೇಶಗಳಲ್ಲಿ ಶೋಧ, ಬಂಧನ ಮತ್ತು ಅಗತ್ಯಬಿದ್ದರೆ ಗುಂಡು ಹಾರಿಸುವ ಅಧಿಕಾರ ನೀಡುತ್ತದೆ. ಈ ಕಾಯ್ದೆಯು ಈಗ ಜಮ್ಮು-ಕಾಶ್ಮೀರ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಜಾರಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News