ಕೋವಿಡ್ ಲಸಿಕೆಯ ಪೇಟೆಂಟ್ ಮನ್ನಾ ಮಾಡಲುಶ್ರೀಮಂತ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಸಮಿತಿ ಆಗ್ರಹ
ಜಿನೆವಾ: ಶ್ರೀಮಂತ ದೇಶಗಳು, ನಿರ್ದಿಷ್ಟವಾಗಿ ಬ್ರಿಟನ್, ಜರ್ಮನಿ, ಸ್ವಿಝರ್ಲ್ಯಾಂಡ್ ಮತ್ತು ಅಮೆರಿಕ ಕೋವಿಡ್ ಲಸಿಕೆಯ ಪೇಟೆಂಟ್‌ಗಳನ್ನು ಮನ್ನಾ ಮಾಡಬೇಕು ಎಂದು ವಿಶ್ವಸಂಸ್ಥೆಯ ಜನಾಂಗೀಯ ನೀತಿ ವಿರೋಧಿ ಸಮಿತಿ ಆಗ್ರಹಿಸಿದ್ದು ಶ್ರೀಮಂತ ದೇಶಗಳು ಜನಾಂಗೀಯ ತಾರತಮ್ಯದ ವಿರುದ್ಧ ಖಾತರಿಯನ್ನು ಉಲ್ಲಂಘಿಸಿವೆ ಎಂದು ಟೀಕಿಸಿದೆ.
ಜೂನ್ 2022ರಲ್ಲಿ ವಿಶ್ವವ್ಯಾಪಾರ ಸಂಘಟನೆಯ ಸದಸ್ಯ ರಾಷ್ಟçಗಳು ಐದು ವರ್ಷಗಳವರೆಗೆ ಕೋವಿಡ್ ಲಸಿಕೆಯ ಪೇಟೆಂಟ್ ಅನ್ನು ತೆಗೆದುಹಾಕಲು ಅಭಿವೃದ್ಧಿಶೀಲ ದೇಶಗಳಿಗೆ ಅಧಿಕಾರ ನೀಡುವ ಒಪ್ಪಂದಕ್ಕೆ ಬಂದಿದ್ದವು. ಆದರೆ ಈ ನಿಟ್ಟಿನಲ್ಲಿ ಮತ್ತಷ್ಟು ಮಾತುಕತೆ ಸ್ಥಗಿತಗೊಂಡಿವೆ.
ಅಸಮಾನತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಒಪ್ಪಂದ ಸಾಕಷ್ಟು ಪ್ರಗತಿ ಸಾಧಿಸಿಲ್ಲ ಎಂದು 18 ಸ್ವತಂತ್ರ ಮಾನವ ಹಕ್ಕುಗಳ ತಜ್ಞರ ಗುಂಪಾಗಿರುವ ಜನಾಂಗೀಯ ತಾರತಮ್ಯ ನಿವಾರಣೆಗಾಗಿನ ವಿಶ್ವಸಂಸ್ಥೆಯ ಸಮಿತಿ ಅಭಿಪ್ರಾಯ ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿಅಂಶದ ಪ್ರಕಾರ, ವಿಶ್ವದ ಜನಸಂಖ್ಯೆಯ 32%ದಷ್ಟು ಜನತೆ ಕನಿಷ್ಟ 1 ಬೂಸ್ಟರ್ ಅಥವಾ ಹೆಚ್ಚುವರಿ ಲಸಿಕೆ ಡೋಸ್ ಪಡೆದಿದ್ದಾರೆ. ಆದರೆ ಕೆಲವು ಅಭಿವೃದ್ಧಿಶೀಲ ದೇಶಗಳಲ್ಲಿ ಈ ಪ್ರಮಾಣ 1%ಕ್ಕಿಂತಲೂ ಕಡಿಮೆಯಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮನ್ನಾ ಮಾಡಲು ಶ್ರೀಮಂತ ರಾಷ್ಟ್ರಗಳ ನಿರಂತರ ನಿರಾಕರಣೆ ಎಲ್ಲಾ ರೀತಿಯ ಜನಾಂಗೀಯ ತಾರತಮ್ಯದ ನಿರ್ಮೂಲನದ ಅವರ ಜವಾಬ್ದಾರಿಗಳ ಬಗ್ಗೆ ಕಳವಳ ಮೂಡಿಸಿದೆ ಎಂದು ಸಮಿತಿ ಹೇಳಿದೆ.
ಆಫ್ರಿಕನ್ ಅಥವಾ ಏಶ್ಯನ್ ಮೂಲದ ಜನರು, ಜನಾಂಗೀಯ ಅಲ್ಪಸಂಖ್ಯಾತರು, ರೋಮಾ ಸಮುದಾಯ ಹಾಗೂ ಬುಡಕಟ್ಟು ಜನರ ಮೇಲೆ ಅಸಮಾನ ವಿನಾಶಕಾರಿ ಪರಿಣಾಮ ಬೀರುವ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕೋವಿಡ್ ಸೋಂಕು ಗುರುತಿಸಿಕೊಂಡಿದೆ. ಈಗ ಕೆಲವು ದೇಶಗಳು ಕಾಯ್ದಿರಿಸಿಕೊಂಡಿರುವ ಜೀವ ರಕ್ಷಕ ಲಸಿಕೆಯ, ತಂತ್ರಜ್ಞಾನದ ಮತ್ತು ಪೇಟೆಂಟ್‌ಗಳನ್ನು ಮನ್ನಾ ಮಾಡುವ ಮೂಲಕ ಈ ಅಸಮಾನತೆಯನ್ನು ಗಮನಾರ್ಹವಾಗಿ ತಗ್ಗಿಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.