ಆಹಾರಧಾನ್ಯ ಒಪ್ಪಂದದಿಂದ ಹೊರಬಂದ ರಶ್ಯಕ್ಕೆ ವಿಶ್ವಸಂಸ್ಥೆ ಖಂಡನೆ
ಜಿನೆವ: ಉಕ್ರೇನ್ನ ಬಂದರುಗಳಿಂದ ಕಪ್ಪು ಸಮುದ್ರದ ಮೂಲಕ ಆಹಾರ ಧಾನ್ಯಗಳ ರಫ್ತಿಗೆ ಸಂಬಂಧಿಸಿದ ಒಪ್ಪಂದದಿಂದ ಹೊರಬಂದ ಹಾಗೂ ಕಪ್ಪುಸಮುದ್ರದ ಬಂದರಿನಲ್ಲಿರುವ ಆಹಾರ ಧಾನ್ಯ ಗೋದಾಮುಗಳ ಮೇಲೆ ದಾಳಿ ನಡೆಸುತ್ತಿರುವ ರಶ್ಯದ ಕ್ರಮದಿಂದಾಗಿ ಆಹಾರ ವಸ್ತುಗಳ ಬೆಲೆಯೇರಿಕೆಯ ಜತೆಗೆ ಸೊಮಾಲಿಯಾದ ಜನರ ಬದುಕಿಗೆ ಭಾರೀ ಪ್ರಹಾರ ನೀಡಿದಂತಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಟೀಕಿಸಿದೆ.
ಜುಲೈಯಲ್ಲಿ ಕಪ್ಪುಸಮುದ್ರ ಧಾನ್ಯ ರಫ್ತು ಒಪ್ಪಂದದಿಂದ ಹೊರಬಂದಿದ್ದ ರಶ್ಯ ಬಳಿಕ ಒಡೆಸಾ ಮತ್ತಿತರ ಬಂದರುಗಳಿಂದ ಆಹಾರ ವಸ್ತುಗಳನ್ನು ಸಾಗಿಸುವ ಹಡಗುಗಳ ಮೇಲೆ ಹಾಗೂ ಆಹಾರಧಾನ್ಯ ಗೋದಾಮುಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಹಲವು ಅಭಿವೃದ್ಧಿಶೀಲ ದೇಶಗಳಲ್ಲಿ ಆಹಾರವಸ್ತುಗಳ ದರ ಗಗನಕ್ಕೇರಿದ್ದು ಬಡಜನರಿಗೆ ಆಹಾರವಸ್ತುಗಳು ಕೈಗೆಟಕದ ಸ್ಥಿತಿಯಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕು ಸಮಿತಿ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ. ಜಿನೆವಾದಲ್ಲಿ ಆರಂಭಗೊಂಡ ಮಾನವಹಕ್ಕುಗಳ ಸಮಿತಿ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಪಂಚದಾದ್ಯಂತ ಮಾನವಹಕ್ಕುಗಳ ಉಲ್ಲಂಘನೆಗೆ ಕಾರಣವಾದ ಬಿಕ್ಕಟ್ಟುಗಳನ್ನು ಉಲ್ಲೇಖಿಸಿದ ಅವರು, ಇದರ ನಿವಾರಣೆಗೆ ಬಲವಾದ ಪರಿಹಾರ ಕ್ರಮದ ಅಗತ್ಯವನ್ನು ಒತ್ತಿಹೇಳಿದರು ಎಂದು ವರದಿಯಾಗಿದೆ.
ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಒಪ್ಪಂದದಿಂದ ಹೊರಬಂದ ಬಳಿಕ ರಶ್ಯವು ಉದ್ದೇಶಪೂರ್ವಕವಾಗಿ ಕಪ್ಪುಸಮುದ್ರದಲ್ಲಿನ ತನ್ನ ಬಂದರುಗಳಲ್ಲಿರುವ ಆಹಾರ ಧಾನ್ಯ ಗೋದಾಮುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಗೋದಾಮುಗಳಲ್ಲಿ ಆಹಾರಧಾನ್ಯದ ಬದಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ರಶ್ಯ ಪ್ರತಿಪಾದಿಸಿದೆ.