ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ
ವಿಶ್ವಸಂಸ್ಥೆ : ಸಿರಿಯಾದ ರಾಜಧಾನಿಯಲ್ಲಿ ಇರಾನ್‍ನ ದೂತಾವಾಸ ಕಟ್ಟಡದ ಮೇಲೆ ಸೋಮವಾರ ನಡೆದ ಮಾರಣಾಂತಿಕ ವಾಯುದಾಳಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಂಗಳವಾರ ಸಭೆ ನಡೆಸಿದೆ.
ಸಿರಿಯಾದ ಮಿತ್ರದೇಶ ರಶ್ಯದ ಕೋರಿಕೆಯ ಮೇರೆಗೆ ಸಭೆ ನಡೆದಿದೆ. ಇಂತಹ ಖಂಡನೀಯ ಕೃತ್ಯಗಳಿಗೆ ನಿರ್ಣಾಯಕ ಪ್ರತಿಕ್ರಿಯೆ ಕೈಗೊಳ್ಳಲು ಇರಾನ್ ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್(ಸನದು)ನಡಿ ತನ್ನ ಕಾನೂನುಬದ್ಧ ಮತ್ತು ಅಂತರ್ಗತ ಹಕ್ಕನ್ನು ಕಾಯ್ದಿರಿಸಿದೆ ಎಂದು ವಿಶ್ವಸಂಸ್ಥೆಗೆ ಇರಾನ್‍ನ ನಿಯೋಗ ಹೇಳಿದೆ. ಈ ದಾಳಿಯಿಂದ ಘರ್ಷಣೆ ಉಲ್ಬಣಿಸಬಹುದು. ಆದ್ದರಿಂದ ಈ ಅಸಮರ್ಥನೀಯ ಕ್ರಿಮಿನಲ್ ಕೃತ್ಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ಈ ಮಧ್ಯೆ, ಇರಾನ್ ದೂತಾವಾಸದ ಮೇಲಿನ ದಾಳಿಯನ್ನು ಚೀನಾ ಖಂಡಿಸಿದ್ದು ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯನ್ನು ಉಲ್ಲಂಘಿಸಲು ಅವಕಾಶವಿಲ್ಲ ಮತ್ತು ಸಿರಿಯಾದ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.