ಚೀನಾಕ್ಕೆ ಅಮೆರಿಕ ರಾಯಭಾರಿಯ ಇ-ಮೇಲ್ ಖಾತೆ ಹ್ಯಾಕ್: ವರದಿ
ಬೀಜಿಂಗ್ : ಚೀನಾಕ್ಕೆ ಅಮೆರಿಕದ ರಾಯಭಾರಿ ನಿಕೊಲಾಸ್ ಬನ್ರ್ಸ್ ಅವರ ಇ-ಮೇಲ್ ಖಾತೆಯನ್ನು ಚೀನಾ ಮೂಲದ ಹ್ಯಾಕರ್ಸ್ಗಳು ಹ್ಯಾಕ್ ಮಾಡಿದ್ದಾರೆ ಎಂದು `ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಸೈಬರ್ ಬೇಹುಗಾರಿಕೆ ದಾಳಿ ಇದಾಗಿದ್ದು ಅಮೆರಿಕ ಸರಕಾರದ ಪೂರ್ವ ಏಶ್ಯಾ ವ್ಯವಹಾರಗಳಿಗೆ ಸಂಬಂಧಿಸಿದ ಸಹಾಯಕ ಕಾರ್ಯದರ್ಶಿ ಡೇನಿಯಲ್ ಕ್ರಿಟೆನ್ಬ್ರಿಂಕ್ ಅವರ ಇ-ಮೇಲ್ ಖಾತೆಯನ್ನೂ ಹ್ಯಾಕ್ ಮಾಡಲಾಗಿದೆ. ಚೀನಾದ ಹ್ಯಾಂಕಿಂಗ್ ಗುಂಪುಗಳು ವಿಶ್ವದಾದ್ಯಂತದ ಸಂಸ್ಥೆಗಳ ಡಿಜಿಟಲ್ ಮಾಹಿತಿಗೆ ಕನ್ನ ಹಾಕುತ್ತಿವೆ ಎಂದು ಪಾಶ್ಚಿಮಾತ್ಯ ಗುಪ್ತಚರ ಏಜೆನ್ಸಿಗಳು ಹಾಗೂ ಸೈಬರ್ ಸೆಕ್ಯುರಿಟಿ ಗುಂಪುಗಳು ದೂಷಿಸುತ್ತಿವೆ. ಈ ಹ್ಯಾಕರ್ಗಳಿಗೆ ಚೀನಾ ಸರಕಾರದ ಬೆಂಬಲವಿದೆ ಎಂಬ ಆರೋಪವೂ ಇದೆ. ಮೇ ತಿಂಗಳಿಂದ ಚೀನಾದ ಹ್ಯಾಕರ್ಗಳು ಅಮೆರಿಕ ಸರಕಾರದ ಏಜೆನ್ಸಿಗಳು, ಮೈಕ್ರೋಸಾಫ್ಟ್ ಸಂಸ್ಥೆ ಸೇರಿದಂತೆ ಸುಮಾರು 25 ಸಂಸ್ಥೆಗಳ ಇ-ಮೇಲ್ಗಳನ್ನು ಹ್ಯಾಕ್ ಮಾಡಿವೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದಲ್ಲಿನ ಚೀನಾ ರಾಯಭಾರಿ ಕಚೇರಿ ` ಸೈಬರ್ ದಾಳಿಯ ಮೂಲವನ್ನು ಗುರುತಿಸುವುದು ಸಂಕೀರ್ಣ ಕಾರ್ಯವಾಗಿದ್ದು ಯಾವುದೇ ಆಧಾರವಿಲ್ಲದೆ, ಊಹೆಯ ಆಧಾರದಲ್ಲಿ ಆರೋಪ ಮಾಡಬಾರದು' ಎಂದು ಎಚ್ಚರಿಕೆ ನೀಡಿದೆ.