ಪಿಒಕೆ ಗೆ ಅಮೆರಿಕದ ರಾಯಭಾರಿ ಭೇಟಿ
ಇಸ್ಲಮಾಬಾದ್ : ಪಾಕಿಸ್ತಾನಕ್ಕೆ ಅಮೆರಿಕದ ರಾಯಭಾರಿ ಡೊನಾಲ್ಡ್ ಬ್ಲೋಮ್ ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಗಿಲ್ಗಿಟ್-ಬಾಲ್ಟಿಸ್ತಾನ್‍ಗೆ ಭೇಟಿ ನೀಡಿದ್ದು, ಈ ರಹಸ್ ಭೇಟಿಯ ಬಗ್ಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತೀಯ ಅಸೆಂಬ್ಲಿಯ ವಿಪಕ್ಷ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು `ಡಾನ್' ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತಕ್ಕೆ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟಿ `ಪಿಒಕೆಗೆ ಅಮೆರಿಕದ ರಾಯಭಾರಿ ಭೇಟಿಯು ಭಾರತ ಮತ್ತು ಪಾಕ್ ನಡುವೆ ಪರಿಹರಿಸಬೇಕಾದ ವಿಷಯವಾಗಿದೆ, ಅಮೆರಿಕ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯಿಂದ ಅಲ್ಲ' ಎಂದಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ 6 ದಿನಗಳ ಭೇಟಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಬ್ಲೋಮ್ ಹಲವು ಪ್ರದೇಶಗಳನ್ನು ಸಂದರ್ಶಿಸಿದ್ದರು ಮತ್ತು ಸ್ಥಳೀಯ ಪ್ರತಿನಿಧಿಗಳು, ಗಿಲ್ಗಿಟ್-ಬಾಲ್ಟಿಸ್ತಾನ್ ಸರಕಾರದ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಈ ಭೇಟಿಯನ್ನು ಎರಡೂ ದೇಶಗಳ ರಾಯಭಾರಿ ಕಚೇರಿಗಳು ಮತ್ತು ಸ್ಥಳೀಯ ಸರಕಾರ ರಹಸ್ಯವಾಗಿಟ್ಟಿದೆ. ಗಿಲ್ಗಿಟ್‍ನ ಆಹಾರ ಮತ್ತು ಪ್ರವಾಸೋದ್ಯಮ ಸಚಿವ ಗುಲಾಂ ಮುಹಮ್ಮದ್‍ರನ್ನೂ ಬ್ಲೋಮ್ ಭೇಟಿಯಾಗಿ ಚರ್ಚಿಸಿದ್ದಾರೆ. ಜತೆಗೆ ಬಂದರು ನಗರ ಗ್ವದರ್‍ಗೂ ಭೇಟಿ ನೀಡಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಗ್ವದರ್‍ನಲ್ಲಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ)ಯ ಭಾಗವಾದ ಮೂಲಸೌಕರ್ಯ ಯೋಜನೆಯನ್ನು ಚೀನಾ ನಿರ್ವಹಿಸುತ್ತಿದೆ.
ಆದರೆ ಅಮೆರಿಕದ ರಾಯಭಾರಿಯ ರಹಸ್ಯ ಭೇಟಿ ಮತ್ತು ಅವರು ನಡೆಸಿದ `ನಿಗೂಢ ಚಟುವಟಿಕೆಗಳು' ಹಲವಾರು ಪ್ರಶ್ನೆಗಳನ್ನು ಎತ್ತಿದೆ. ಗಿಲ್ಗಿಟ್-ಬಾಲ್ಟಿಸ್ತಾನ ಸರಕಾರಕ್ಕೂ ಈ ಭೇಟಿಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪ್ರಾಂತೀಯ ಅಸೆಂಬ್ಲಿಯ ವಿಪಕ್ಷ ಮುಖಂಡ ಕಾಝಿಮ್ ಮೆಸೂಮ್ ಆಕ್ಷೇಪಿಸಿದ್ದಾರೆ.
`ಯಾವುದೇ ದೇಶದ ರಾಯಭಾರಿ ಒಂದು ಪ್ರಾಂತಕ್ಕೆ ಭೇಟಿ ನೀಡುವ ಬಗ್ಗೆ ನಿಗದಿತ ಕಾರ್ಯವಿಧಾನವಿದೆ. ಬ್ಲೋಮ್ ಗ್ವದರ್ ಬಂದರಿಗೆ ಭೇಟಿ ನೀಡಿದ ಬಳಿಕ ಗಿಲ್ಗಿಟ್‍ಗೆ ಆಗಮಿಸಿರುವುದು ಸಂಶಯಾಸ್ಪದವಾಗಿದೆ. ಸಿಪಿಇಸಿಯ ಎರಡು ಪ್ರಮುಖ ಭಾಗಗಳಿಗೆ ಭೇಟಿಯು ಸಿಪಿಇಸಿಯನ್ನು ನಿಗ್ರಹಿಸುವ ಅಮೆರಿಕದ ಕಾರ್ಯನೀತಿಯ ಒಂದು ಭಾಗವಾಗಿದೆ. ಸಿಪಿಇಸಿ ಅಡಿಯಲ್ಲಿ ಹಲವು ಬೃಹತ್ ನಿರ್ಮಾಣ ಕಾಮಗಾರಿ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಈ ರಹಸ್ಯ ಭೇಟಿ ಎಚ್ಚರಿಕೆಯ ಕರೆಗಂಟೆಯಾಗಿದೆ' ಎಂದವರು ಟೀಕಿಸಿದ್ದಾರೆ.