ಗೋಲ್ಡ್ ಕಾರ್ಡ್ ಮೂಲಕ ಅಮೆರಿಕದ ಕಂಪೆನಿಗಳು ಭಾರತೀಯರನ್ನು ನೇಮಿಸಬಹುದು: ಟ್ರಂಪ್

Update: 2025-02-27 20:38 IST
Trump

ಡೊನಾಲ್ಡ್ ಟ್ರಂಪ್ | PTI  

  • whatsapp icon

ವಾಶಿಂಗ್ಟನ್, ಫೆ. 27: ಹೊಸದಾಗಿ ಪರಿಚಯಿಸಲಾಗಿರುವ ‘ಗೋಲ್ಡ್ ಕಾರ್ಡ್’ ಯೋಜನೆಯು, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ಮುಂತಾದ ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದಿರುವ ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಅವಕಾಶ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಬುಧವಾರ ಶ್ರೀಮಂತ ವಿದೇಶೀಯರಿಗಾಗಿ ‘ಗೋಲ್ಡ್ ಕಾರ್ಡ್’ ಯೋಜನೆಯನ್ನು ಪರಿಚಯಿಸಿದ್ದಾರೆ. ಈ ಯೋಜನೆಯು ಅವರಿಗೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುತ್ತದೆ ಹಾಗೂ ಪೌರತ್ವ ಪಡೆಯುವುದಕ್ಕೂ ದಾರಿಯನ್ನು ಕಲ್ಪಿಸುತ್ತದೆ. ಗೋಲ್ಡ್ ಕಾರ್ಡ್‌ಗಾಗಿ 5 ಮಿಲಿಯ ಡಾಲರ್ (ಸುಮಾರು 43.50 ಕೋಟಿ ರೂ.) ಶುಲ್ಕ ಪಾವತಿಸಬೇಕಾಗುತ್ತದೆ.

‘‘ನಾವು ಗೋಲ್ಡ್ ಕಾರ್ಡನ್ನು ಮಾರಾಟ ಮಾಡಲಿದ್ದೇವೆ’’ ಎಂದು ಓವಲ್ ಕಚೇರಿಯಿಂದ ಮಾತನಾಡಿದ ಟ್ರಂಪ್ ಹೇಳಿದರು.

‘‘ಈಗಾಗಲೇ ಗ್ರೀನ್‌ಕಾರ್ಡ್ ಇದೆ. ಇನ್ನು ನಾವು ತರುತ್ತಿರುವುದು ಗೋಲ್ಡ್ ಕಾರ್ಡ್. ಅದಕ್ಕೆ ನಾವು 5 ಮಿಲಿಯ ಡಾಲರ್ ಬೆಲೆ ನಿಗದಿಪಡಿಸುತ್ತೇವೆ. ಅದು ಗ್ರೀನ್‌ಕಾರ್ಡ್‌ನ ಸೌಲಭ್ಯಗಳನ್ನು ಒದಗಿಸುತ್ತದೆ. ಜೊತೆಗೆ, ಪೌರತ್ವ ಪಡೆಯುವ ಮಾರ್ಗವೂ ಆಗುತ್ತದೆ. ಮುಖ್ಯವಾಗಿ, ಈ ಕಾರ್ಡನ್ನು ಖರೀದಿಸಿ ಶ್ರೀಮಂತರು ನಮ್ಮ ದೇಶಕ್ಕೆ ಬರಲಿದ್ದಾರೆ’’ ಎಂದು ಟ್ರಂಪ್ ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

ಹಾಲಿ ವಲಸೆ ವ್ಯವಸ್ಥೆಯು ಶ್ರೇಷ್ಠ ಅಂತರ್‌ರಾಷ್ಟ್ರೀಯ ಪ್ರತಿಭೆಗಳು, ಅದರಲ್ಲೂ ಮುಖ್ಯವಾಗಿ ಭಾರತೀಯ ಪ್ರತಿಭೆಗಳು ಅಮೆರಿಕದಲ್ಲಿ ನೆಲೆಸುವುದನ್ನು ಮತ್ತು ಕೆಲಸ ಮಾಡುವುದನ್ನು ತಡೆಯುತ್ತದೆ ಎಂದು ಟ್ರಂಪ್ ನುಡಿದರು.

‘‘ಭಾರತ, ಚೀನಾ, ಜಪಾನ್ ಮತ್ತು ಇತರ ದೇಶಗಳ ಜನರು ಅಮೆರಿಕಕ್ಕೆ ಬಂದು ಹಾರ್ವರ್ಡ್ ಅಥವಾ ವಾರ್ಟನ್ ಸ್ಕೂಲ್ ಆಫ್ ಫೈನಾನ್ಸ್‌ನಲ್ಲಿ ಕಲಿಯುತ್ತಾರೆ. ಅವರಿಗೆ ಕೆಲಸದ ಪ್ರಸ್ತಾವಗಳೂ ಬರುತ್ತವೆ. ಆದರೆ, ಅವರು ಅಮೆರಿಕದಲ್ಲಿ ವಾಸಿಸಬಹುದೇ ಎನ್ನುವ ಬಗ್ಗೆ ನಿಶ್ಚಿತತೆಯಿಲ್ಲದ ಕಾರಣ ಆ ಪ್ರಸ್ತಾವಗಳು ತಕ್ಷಣ ರದ್ದಾಗುತ್ತವೆ’’ ಎಂದು ಅವರು ಹೇಳಿದರು.

ಈ ಕಾರಣದಿಂದಾಗಿ, ಅಮೆರಿಕವನ್ನು ತೊರೆಯಬೇಕಾಗಿ ಬಂದ ಹಲವು ಪ್ರತಿಭಾವಂತ ಪದವೀಧರರು ತಮ್ಮ ದೇಶಗಳಲ್ಲಿ ಯಶಸ್ವಿ ಉದ್ಯಮಿಗಳಾಗಿದ್ದಾರೆ ಎಂದು ಟ್ರಂಪ್ ಹೇಳಿದರು.

ಅಂಥ ಪದವೀಧರರನ್ನು ಅಮೆರಿಕದಲ್ಲೇ ಉಳಿಸಿಕೊಳ್ಳಬಹುದಾದ ವ್ಯವಸ್ಥೆಯೊಂದನ್ನು ನಾವು ಜಾರಿಗೊಳಿಸುತ್ತಿದ್ದೇವೆ ಎಂದು ಅವರು ನುಡಿದರು.

‘‘ಇಂಥ ಪದವೀಧರರು ಅಮೆರಿಕದಲ್ಲೇ ಉಳಿಯಲು ಸಾಧ್ಯವಾಗಲು, ಕಂಪೆನಿಗಳು ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ. ಅವುಗಳನ್ನು ಉದ್ಯೋಗ ನೇಮಕಾತಿಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಈ ಹಣದಿಂದ ನಾವು ನಮ್ಮ ಹೆಚ್ಚಿನ ಸಾಲಗಳನ್ನು ತೀರಿಸಬಹುದಾಗಿದೆ’’ ಎಂದು ಟ್ರಂಪ್ ಹೇಳಿದರು.

ಗೋಲ್ಡ್ ಕಾರ್ಡ್‌ಗಳ ಮಾರಾಟ ಇನ್ನೆರಡು ವಾರಗಳಲ್ಲಿ ಆರಂಭಗೊಳ್ಳುತ್ತದೆ ಎಂದು ಹೇಳಿದ ಅವರು, ಲಕ್ಷಾಂತರ ಕಾರ್ಡ್‌ಗಳು ಮಾರಾಟವಾಗುವ ಸಾಧ್ಯತೆಯಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News