ಐತಿಹಾಸಿಕ ಭಾರತ- ಅಮೆರಿಕ ಯುದ್ಧವಿಮಾನ ಎಂಜಿನ್ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಅಸ್ತು

Update: 2023-08-31 04:47 GMT

ವಾಷಿಂಗ್ಟನ್: ಭಾರತದ ಜತೆ ಜಿಇ ಜೆಟ್ ಎಂಜಿನ್ ಒಪ್ಪಂದವನ್ನು ಮುಂದುವರಿಸಲು ಅವಕಾಶ ನೀಡುವ ಅಧ್ಯಕ್ಷ ಜೋ ಬೈಡೇನ್ ಆಡಳಿತದ ನಿರ್ಧಾರಕ್ಕೆ ಅಮೆರಿಕದ ಸಂಸತ್ತು (ಕಾಂಗ್ರೆಸ್) ಒಪ್ಪಿಗೆ ನೀಡಿದೆ. ಈ ನಿರ್ಧಾರಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಅಮೆರಿಕದ ಕಾಂಗ್ರೆಸ್ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‍ಎಎಲ್)ಗೆ ತಂತ್ರಜ್ಞಾನ ವರ್ಗಾವಣೆ, ಭಾರತದಲ್ಲಿ ಜೆಟ್ ಎಂಜಿನ್‍ಗಳ ಉತ್ಪಾದನೆ ಮತ್ತು ಲೈಸೆನ್ಸಿಂಗ್ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲು ಕಂಪನಿಗೆ ಅವಕಾಶವಾಗಲಿದೆ.

"ಶಾಸನಸಭೆಯ ಕಡೆಯಿಂದ ಈ ವಿಷಯಕ್ಕೆ ಒಪ್ಪಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಮಾರಾಟಕ್ಕೆ ಅನುಮೋದನೆ ದೊರಕಿತ್ತು. ಆದರೆ ವಿಧಿವಿಧಾನಗಳ ಪ್ರಕಾರ, ರಕ್ಷಣಾ ಇಲಾಖೆಯು ಈ ಬಗ್ಗೆ ಸದನ ಹಾಗೂ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಜುಲೈ 28ರಂದು ಈ ಬಗ್ಗೆ ಅಧಿಸೂಚನೆ ನೀಡಿದೆ. ಈ ಅಧಿಸೂಚನೆ ನೀಡಿದ ಬಳಿಕ ಅಮೆರಿಕ ಕಾಂಗ್ರೆಸ್‍ನ ಪ್ರತಿನಿಧಿಗಳು ಹಾಗೂ ಸೆನೆಟ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸದೇ ಇದ್ದರೆ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ" ಎಂದು ಕ್ಯಾಪಿಟಲ್ ಹಿಲ್ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ಹೇಳಿವೆ.

"ಇದುವರೆಗೆ ಯಾವುದೇ ಆಕ್ಷೇಪ ಬಂದಿಲ್ಲ. ಆದ್ದರಿಂದ ಬೈಡನ್ ಆಡಳಿತ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಭೇಟಿ ನೀಡುವ ವೇಳೆ ಉಭಯ ದೇಶಗಳು ಈ ಒಪ್ಪಂದವನ್ನು ಮುಂದಕ್ಕೆ ಒಯ್ಯುವ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಈ ಐತಿಹಾಸಿಕ ಒಪ್ಪಂದದ ವಿಚಾರದಲ್ಲಿ ಮುಂದುವರಿಯಲು ಉಭಯ ದೇಶಗಳು ಇದೀಗ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News