ಕೆಂಪು ಸಮುದ್ರದಲ್ಲಿ ಹೌದಿಗಳ ದೋಣಿ ಮುಳುಗಿಸಿದ ಅಮೆರಿಕ: ವರದಿ
ವಾಷಿಂಗ್ಟನ್: ಯೆಮನ್ ನಲ್ಲಿ ಹೌದಿಗಳ ನಿಯಂತ್ರಣ ಪ್ರದೇಶದಿಂದ ಸಾಗಿಬಂದ ಸಣ್ಣ ದೋಣಿಗಳು ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಹಡಗಿನತ್ತ ಗುಂಡಿನ ದಾಳಿ ನಡೆಸಿದ್ದು ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್ ಗಳು ದಾಳಿಯನ್ನು ಹಿಮ್ಮೆಟ್ಟಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ರವಿವಾರ ವರದಿ ಮಾಡಿದೆ.
4 ದೋಣಿಗಳ ಮೂಲಕ ಸಾಗಿ ಬಂದ ಹೌದಿಗಳು ಸಿಂಗಾಪುರದ ಧ್ವಜ ಹೊಂದಿದ್ದ `ಮೆಯರ್ಸ್ ಹ್ಯಾಂಗ್ಝೌ' ಎಂಬ ಕಂಟೈನರ್ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಮೂರು ದೋಣಿಗಳಲ್ಲಿದ್ದವರು ಹಡಗಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಹಡಗಿನಿಂದ ಅಪಾಯದ ಸಂದೇಶ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಅಮೆರಿಕದ ಸಮರನೌಕೆ ಮತ್ತು ಹೆಲಿಕಾಪ್ಟರ್ ಗಳ ಮೇಲೆ ದೋಣಿಯಲ್ಲಿದ್ದವರು ದಾಳಿ ನಡೆಸಿದರು. ಪ್ರತಿದಾಳಿ ನಡೆಸಿದ ಹೆಲಿಕಾಪ್ಟರ್ ಗಳು ಹೌದಿಗಳ ಮೂರು ದೋಣಿಗಳನ್ನು ಮುಳುಗಿಸಿತಲ್ಲದೆ ದೋಣಿಯಲ್ಲಿದ್ದ ಮೂರು ಸಿಬಂದಿಗಳನ್ನು ಹತ್ಯೆ ಮಾಡಿದೆ. ನಾಲ್ಕನೇ ದೋಣಿ ಅಲ್ಲಿಂದ ಪರಾರಿಯಾಗಿದೆ. ಘಟನೆಯಲ್ಲಿ ಕಂಟೈನರ್ ಹಡಗು ಅಥವಾ ಅಮೆರಿಕದ ಸಮರ ನೌಕೆಯ ಸಿಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಹೇಳಿದೆ.