ಅಮೆರಿಕ: ಇಸ್ರೇಲ್‍ಗೆ ಶಸ್ತ್ರಾಸ್ತ್ರ ಪೂರೈಸಲು ಬೈಡನ್‍ರನ್ನು ಆಗ್ರಹಿಸುವ ಮಸೂದೆ ಅಂಗೀಕೃತ

Update: 2024-05-17 16:25 GMT

ವಾಷಿಂಗ್ಟನ್: ಇಸ್ರೇಲ್‍ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಅಧ್ಯಕ್ಷ ಜೋ ಬೈಡನ್‍ರನ್ನು ಬಲವಂತಪಡಿಸುವ ಮಸೂದೆಯನ್ನು ರಿಪಬ್ಲಿಕನ್ನರು ಬಹುಮತ ಹೊಂದಿರುವ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಸಂಸತ್‍ನ ಕೆಳಮನೆ) ಅಂಗೀಕರಿಸಿದೆ

`ದಿ ಇಸ್ರೇಲ್ ಸೆಕ್ಯುರಿಟಿ ಅಸಿಸ್ಟೆನ್ಸ್ ಸಪೋರ್ಟ್ ಆ್ಯಕ್ಟ್' ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 224-187 ಮತಗಳಿಂದ ಅಂಗೀಕರಿಸಿದ್ದು 16 ಡೆಮೊಕ್ರಟ್ ಸದಸ್ಯರೂ ಮಸೂದೆಯ ಪರ ಧ್ವನಿ ಎತ್ತಿದ್ದಾರೆ. ಈ ಮಸೂದೆಯು ಕಾಯ್ದೆಯಾಗುವ ನಿರೀಕ್ಷೆಯಿಲ್ಲ, ಆದರೆ ಚುನಾವಣೆ ನಡೆಯುತ್ತಿರುವ ವರ್ಷದಲ್ಲಿ ಇಸ್ರೇಲ್ ಕುರಿತ ಕಾರ್ಯನೀತಿಯಲ್ಲಿ ಅಮೆರಿಕದ ಸಂಸತ್ ಸದಸ್ಯರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಪ್ರತಿಧ್ವನಿಸಿದೆ. ಗಾಝಾ ಪಟ್ಟಿಯ ರಫಾ ನಗರದ ಮೇಲೆ ಭೂದಾಳಿ ನಡೆಸುವ ಇಸ್ರೇಲ್ ನಿರ್ಧಾರವನ್ನು ವಿರೋಧಿಸಿ, ಆ ದೇಶಕ್ಕೆ ಪೂರೈಸಲುದ್ದೇಶಿಸಿದ್ದ ಶಸ್ತ್ರಾಸ್ತ್ರಗಳನ್ನು ಈ ತಿಂಗಳ ಆರಂಭದಲ್ಲಿ ಬೈಡನ್ ತಡೆಹಿಡಿದಿದ್ದರು.

ಈ ನಡೆಯನ್ನು ವಿರೋಧಿಸಿರುವ ರಿಪಬ್ಲಿಕನ್ ಪಕ್ಷ `ಅಮೆರಿಕದ ವಿವಿಗಳಲ್ಲಿ ಫೆಲೆಸ್ತೀನ್ ಪರ ವ್ಯಾಪಕ ಪ್ರತಿಭಟನೆಯ ಬಳಿಕ ಬೈಡನ್ ಇಸ್ರೇಲ್‍ಗೆ ಬೆನ್ನು ತಿರುಗಿಸಿದ್ದಾರೆ ಎಂದು ಟೀಕಿಸಿದೆ. `ಇದು ಜಾಗತಿಕ ಪರಿಣಾಮಕ್ಕೆ ಕಾರಣವಾಗುವ ದುರಂತ ನಿರ್ಧಾರವಾಗಿದ್ದು ರಾಜಕೀಯ ಲೆಕ್ಕಾಚಾರದಿಂದ ಕೈಗೊಂಡಿರುವುದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ' ಎಂದು ಹೌಸ್ ಆಫ್ ರೆಪ್ರಸೆಂಟೇಟಿವ್ಸ್‍ನ ಸ್ಪೀಕರ್(ರಿಪಬ್ಲಿಕನ್ ಮುಖಂಡ) ಮೈಕ್ ಜಾನ್ಸನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಮೊಕ್ರಟಿಕ್ ಪಕ್ಷ `ರಿಪಬ್ಲಿಕನ್ನರು ರಾಜಕೀಯ ಉದ್ದೇಶದಿಂದ ಬೈಡನ್ ಅವರ ನಿಲುವಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಸ್ರೇಲ್ ಕುರಿತ ಬೈಡನ್ ನಿಲುವಿನಲ್ಲಿ ಬದಲಾವಣೆಯಿಲ್ಲ' ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News