ಕೆಂಪು ಸಮುದ್ರದಲ್ಲಿ 14 ಡ್ರೋನ್ ಹೊಡೆದುರುಳಿಸಿದ ಅಮೆರಿಕದ ಸಮರ ನೌಕೆ
ವಾಷಿಂಗ್ಟನ್: ಕೆಂಪು ಸಮುದ್ರದ ವ್ಯಾಪ್ತಿಯಲ್ಲಿ ವಾಣಿಜ್ಯ ಸರಕುಗಳನ್ನು ಗುರಿಯಾಗಿಸಿದ 14 ಡ್ರೋನ್‍ಗಳನ್ನು ಅಮೆರಿಕದ ಸಮರನೌಕೆ, ಒಂದು ಡ್ರೋನ್ ಅನ್ನು ಬ್ರಿಟನ್‍ನ ಸಮರನೌಕೆ ಶನಿವಾರ ಹೊಡೆದುರುಳಿಸಿದೆ ಎಂದು ಅಮೆರಿಕ ಮತ್ತು ಬ್ರಿಟನ್ ನೌಕಾಪಡೆಗಳು ಹೇಳಿವೆ.
ವಿಶ್ವದ ಅತ್ಯಂತ ಕಾರ್ಯನಿರತ ಸಮುದ್ರ ಮಾರ್ಗವಾಗಿರುವ ಕೆಂಪುಸಮುದ್ರದ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿ ಯೆಮನ್‍ನಲ್ಲಿನ ಹೌದಿ ಬಂಡುಗೋರರು ಸರಣಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡ ಬಳಿಕ ಈ ದಾಳಿಯ ಪ್ರಮಾಣ ಹೆಚ್ಚಿದೆ. ದಾಳಿಯನ್ನು ಹಿಮ್ಮೆಟ್ಟಿಸಲು ಅಮೆರಿಕ ಮತ್ತು ಬ್ರಿಟನ್ ತಮ್ಮ ಸಮರನೌಕೆಯನ್ನು ಕೆಂಪು ಸಮುದ್ರದಲ್ಲಿ ನಿಯೋಜಿಸಿವೆ.
ಶನಿವಾರ ಯುಎಸ್‍ಎಸ್ ಕಾರ್ನೆ ಸಮರನೌಕೆ 14 ಡ್ರೋನ್‍ಗಳನ್ನು ಹೊಡೆದುರುಳಿಸಿದ್ದು ಈ ಕಾರ್ಯಾಚರಣೆಯಲ್ಲಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಯಾವುದೇ ಹಡಗುಗಳಿಗೆ ಹಾನಿಯಾಗಿಲ್ಲ ಎಂದು ಅಮೆರಿಕ ಹೇಳಿದೆ. ಬ್ರಿಟನ್‍ನ ಎಚ್‍ಎಮ್‍ಎಸ್ ಡೈಮಂಡ್ ಸಮರನೌಕೆ ವಾಣಿಜ್ಯ ಹಡಗಿನತ್ತ ಧಾವಿಸುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಬ್ರಿಟನ್‍ನ ರಕ್ಷಣಾ ಸಚಿವ ಗ್ರ್ಯಾಂಟ್ ಶಾಪ್ಸ್ ಟ್ವೀಟ್ ಮಾಡಿದ್ದಾರೆ.