ಗಾಝಾಗೆ ಸಹಾಯ ಮಾಡಲು ಸಂಘರ್ಷಕ್ಕೆ ಮಾನವೀಯ ವಿರಾಮ ಆಗ್ರಹಿಸಿ ಬ್ರೆಝಿಲ್ ಮಂಡಿಸಿದ ಕರಡು ನಿರ್ಣಯ ವೀಟೋ ಮಾಡಿದ ಅಮೆರಿಕ
ಹೊಸದಿಲ್ಲಿ: ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಕುರಿತಂತೆ ರಷ್ಯಾದ ನಿರ್ಣಯ ತಿರಸ್ಕೃತಗೊಂಡ ಬೆನ್ನಲ್ಲೇ ಬ್ರೆಝಿಲ್ ಮಂಡಿಸಿದ ಕರಡು ನಿರ್ಣಯ ಅಮೆರಿಕಾದಿಂದ ವೀಟೋಗೊಳಗಾಗಿದೆ.
ಗಾಝಾಗೆ ಅಗತ್ಯ ವಸ್ತುಗಳ ಸರಬರಾಜಿಗೆ ಪೂರಕವಾಗುವಂತೆ ಅಲ್ಲಿ ಮಾನವೀಯ ನೆಲೆಯಲ್ಲಿ ಸಂಘರ್ಷಕ್ಕೆ “ವಿರಾಮ”ಗಳನ್ನು ನೀಡಬೇಕೆಂದು ಬ್ರೆಝಿಲ್ ನಿರ್ಣಯ ಹೇಳಿತ್ತು. ಈ ನಿರ್ಣಯವನ್ನು ಅಮೆರಿಕಾ ವೀಟೋ ಮಾಡಿದೆ.
ಭದ್ರತಾ ಮಂಡಳಿಯ 15 ಸದಸ್ಯರ ಪೈಕಿ ಬ್ರೆಝಿಲ್ ಕರಡು ನಿರ್ಣಯಕ್ಕೆ 12 ಮಂದಿಯ ಸಮ್ಮತಿ ದೊರೆಯಿತು. ರಷ್ಯಾ ಮತ್ತು ಇಂಗ್ಲೆಂಡ್ ಮತದಾನದಿಂದ ದೂರವುಳಿದರೆ ಅಮೆರಿಕಾ ತನ್ನ ವೀಟೋ ಅಧಿಕಾರ ಬಳಸಿ ಅದನ್ನು ಅನುಮೋದಿಸುವುದನ್ನು ನಿಲ್ಲಿಸಿದೆ.
ಈ ಕುರಿತು ವಿವರಣೆ ನೀಡಿದ ಅಮೆರಿಕಾ ರಾಯಭಾರಿ ಲಿಂಡಾ ಥಾಮಸ್- ಗ್ರೀನ್‌ಫೀಲ್ಡ್, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ನಲ್ಲಿರುವುದರಿಂದ ಹಾಗೂ ರಾಜತಾಂತ್ರಿಕತೆ ಮುಂದುವರಿಯಬೇಕಿರುವುದರಿಂದ ವೀಟೋ ಮಾಡಿರುವುದಾಗಿ ಹೇಳಿದರಲ್ಲದೆ ಬ್ರೆಝಿಲ್‌ನ ಕರಡು ನಿರ್ಣಯವು ಆತ್ಮರಕ್ಷಣೆಗೆ ಇಸ್ರೇಲ್‌ಗಿರುವ ಹಕ್ಕಿನ ಬಗ್ಗೆ ಉಲ್ಲೇಖಿಸಿಲ್ಲ ಎಂದಿದ್ದಾರೆ.
ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕಾ ತನ್ನ ವೀಟೋ ಅಧಿಕಾರ ಬಳಸಿರುವುದು ಇದು 87ನೇ ಬಾರಿ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ವೀಟೋಗಳು (47) ಪಶ್ಚಿಮ ಏಷ್ಯಾ ಪ್ರಾಂತ್ಯ ಕುರಿತಾದ ವಿಚಾರಗಳಿಗೆ ಸಂಬಂಧಿಸಿದ್ದಾಗಿದೆ.