ವೆನೆಝುವೆಲಾ | ಹಿಂಸಾಚಾರದಲ್ಲಿ ಕನಿಷ್ಠ 11 ಮಂದಿ ಮೃತ್ಯು

Update: 2024-07-31 16:37 GMT

PC : PTI

ಕ್ಯಾರಕಾಸ್ : ವೆನೆಝುವೆಲಾದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ನಡೆದ ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ ಎಂದು ವರದಿಯಾಗಿದೆ.

ಹಾಲಿ ಅಧ್ಯಕ್ಷ ನಿಕೋಲಸ್ ಮಡುರೊ 51% ಮತ ಪಡೆದು ಮೂರನೇ ಅವಧಿಗೆ ಮರು ಆಯ್ಕೆಗೊಂಡಿದ್ದಾರೆ. ಅವರ ಎದುರಾಳಿ, ವಿರೋಧ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಎಡ್ಮಂಡೊ ಗೊನ್ಸಾಲೆಸ್ ಉರೂಷಿಯಾ 44.2% ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ರವಿವಾರ ಘೋಷಿಸಿತ್ತು. ಆದರೆ ಮಡುರೊ ಅವರ ನಿಯಂತ್ರಣದಲ್ಲಿರುವ ಚುನಾವಣಾ ಆಯೋಗ ಫಲಿತಾಂಶವನ್ನು ತಿರುಚಿದೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದ್ದವು.

ವಿಪಕ್ಷಗಳ ಪ್ರತಿಭಟನೆ `ದಂಗೆಯ ಪ್ರಯತ್ನ' ಎಂದು ವ್ಯಾಖ್ಯಾನಿಸಿರುವ ಸರಕಾರ, ವಿಪಕ್ಷಗಳು ಹಿಂಸಾಚಾರವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದೆ.

ವಿಪಕ್ಷಗಳ ಪ್ರತಿಭಟನೆಯನ್ನು ಖಂಡಿಸಿರುವ ಮಡುರೊ, ಪ್ರತಿಪಕ್ಷಗಳ ಪ್ರತಿಭಟನಾಕಾರರು ನಾಗರಿಕರನ್ನು ಥಳಿಸಿದ್ದರು ಮತ್ತು ಬೆಂಕಿ ಹಚ್ಚಲು ಆರಂಭಿಸಿದರು. ಈ ಕ್ರಿಮಿನಲ್ ಕೃತ್ಯಕ್ಕೆ ವಿಪಕ್ಷಗಳು ಹೊಣೆಯಾಗಿದ್ದು ಗೊನ್ಸಾಲ್ವೆಸ್ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News