ಗಾಝಾದಲ್ಲಿ ಮುಂದುವರಿದಿರುವ ಇಸ್ರೇಲ್ ದಾಳಿ: ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್ ನಲ್ಲಿ ಈ ವರ್ಷ ಕ್ರಿಸ್ಮಸ್ ಸಂಭ್ರಮವಿಲ್ಲ
ಹೊಸದಿಲ್ಲಿ: ಪ್ರತಿವರ್ಷ ಕ್ರಿಸ್ಮಸ್ ಸಮಯದಲ್ಲಿ ಸಂಭ್ರಮದಲ್ಲಿ ಮುಳುಗಿರುತ್ತಿದ್ದ ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್ ನಲ್ಲಿ ಈ ವರ್ಷ ಈ ಸಂಭ್ರಮ ಮಾಯವಾಗಿದೆ. ಗಾಝಾದಲ್ಲಿ ಇಸ್ರೇಲ್ ವಿನಾಶಕಾರಿ ದಾಳಿಗಳು ಮುಂದುವರಿದಿರುವುದು ಇದಕ್ಕೆ ಕಾರಣವಾಗಿದೆ.
‘‘ಇದು (ಇಸ್ರೇಲ್ ದಾಳಿ) ಸ್ವಲ್ಪ ಸಮಯ ನಾವು ಎದುರಿಸಿರುವ ದೊಡ್ಡ ಹೊಡೆತವಾಗಿದ್ದರೂ ನಾವು ಫೆಲೆಸ್ತೀನಿಯರು ಎಂದಿನಂತೆ ಈಗಲೂ ಚೇತರಿಸಿಕೊಳ್ಳುತ್ತೇವೆ. ನಾವು ಸಹಜ ಸ್ಥಿತಿಗೆ ಮರಳುತ್ತೇವೆ. ಆದರೆ ಇದರಲ್ಲಿ ಶಾಮೀಲಾದವರಿಗಾಗಿ ನಾವು ಮರುಗುತ್ತೇವೆ. ನೀವು ಇದರಿಂದ ಚೇತರಿಸಿಕೊಳ್ಳಲು ಎಂದಾದರೂ ಸಾಧ್ಯವಿದೆಯೇ? ನರಮೇಧದ ನಂತರ ನಿಮ್ಮ ದಾನಧರ್ಮಗಳು ಮತ್ತು ಆಘಾತದ ಮಾತುಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನಿಮ್ಮ ವಿಷಾದದ ಮಾತುಗಳನ್ನು ಮಾತ್ರವಲ್ಲ, ನರಮೇಧದ ಬಳಿಕ ನಿಮ್ಮ ಕ್ಷಮಾಯಾಚನೆಯನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಏನಾಗಿದೆಯೋ ಅದು ಆಗಿ ಹೋಗಿದೆ. ನಿಮ್ಮನ್ನು ಕನ್ನಡಿಯಲ್ಲಿ ನೋಡಿಕೊಂಡು ‘ಗಾಝಾದಲ್ಲಿ ನರಮೇಧ ನಡೆಯುತ್ತಿದ್ದಾಗ ನಾನೆಲ್ಲಿದ್ದೆ’ ಎಂದು ನೀವು ಪ್ರಶ್ನಿಸಿಕೊಳ್ಳಬೇಕು’’.
ಇವು ಕ್ರಿಸ್ಮಸ್ ಗೆ ಮುನ್ನಾದಿನ ಬೆಥ್ಲೆಹೆಮ್ನ ಕ್ರಿಸ್ಮಸ್ ಇವಾಂಜೆಲಿಕಲ್ ಲುಥೆರಾನ್ ಚರ್ಚ್ ನ ಪ್ಯಾಸ್ಟರ್ ಮುಂಥರ್ ಐಸಾಕ್ ಅವರು ಆಡಿರುವ ಮಾತುಗಳು. ವಿಶ್ವಾದ್ಯಂತ ವೈರಲ್ ಆಗಿರುವ ನೇರ ಟಿವಿ ಪ್ರಸಾರದಲ್ಲಿ ಗಾಝಾದ ಜನರ ಮೇಲೆ ಇಸ್ರೇಲ್ ಸರಕಾರದ ಮುಂದುವರಿದಿರುವ ದಾಳಿಗಳಿಂದಾಗಿ ಸಂಭ್ರಮಾಚರಣೆಗಳು ರದ್ದುಗೊಳ್ಳುವುದರೊಂದಿಗೆ ಬೆಥ್ಲೆಹೆಮ್ ನಲ್ಲಿ ಈ ವರ್ಷ ಕ್ರಿಸ್ಮಸ್ ಸಮಯದಲ್ಲಿಯ ಭಾವನೆಗಳನ್ನು ಹೊರಗೆಡವಿದ್ದಾರೆ.
ಸಾಮಾನ್ಯವಾಗಿ ಕ್ರಿಸ್ಮಸ್ ಸಮಯದಲ್ಲಿ ಸಂದರ್ಶಕರು ಮತ್ತು ಪ್ರವಾಸಿಗಳಿಂದ ತುಂಬಿರುವ ಬೆಥ್ಲೆಹೆಮ್ ನಗರದ ಮ್ಯಾಂಗರ್ ಸ್ಕ್ವೇರ್ ಈ ವರ್ಷ ನಿರ್ಜನವಾಗಿದೆ. ಹಬ್ಬದ ದೀಪಗಳನ್ನು ಬೆಳಗಿಸಲಾಗಿಲ್ಲ. ನಗರವು ಸಂತೋಷದಿಂದ, ಮಕ್ಕಳಿಂದ, ಸಾಂತಾನಿಂದ ವಂಚಿತವಾಗಿದೆ. ಈ ವರ್ಷ ಯಾವುದೇ ಸಂಭ್ರಮಾಚರಣೆಯಿಲ್ಲ ಎಂದು ಬೆಥ್ಲೆಹೆಮ್ ನಿವಾಸಿ ಮೆಡೆಲೀನ್ ಸುದ್ದಿಸಂಸ್ಥೆಗೆ ತಿಳಿಸಿದರು.
ನೇಟಿವಿಟಿ ಚರ್ಚ್ ನ ಫಾ. ಈಸಾ ಥಲ್ಜಿಯಾ ಅವರೂ ಐಸಾಕ್ ಅವರ ಭಾವನೆಗಳನ್ನೇ ಪ್ರತಿಧ್ವನಿಸಿದರು. ‘ಹಿಂದೆಂದೂ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯೂ, ಈ ರೀತಿಯ ಕ್ರಿಸ್ಮಸ್ ಅನ್ನು ನಾನು ನೋಡಿಲ್ಲ. ಗಾಝಾದಲ್ಲಿ ಇರುವವರು ನಮ್ಮ ಸೋದರರು ಮತ್ತು ಸೋದರಿಯರು. ಹೀಗಾಗಿ ಕ್ರಿಸ್ಮಸ್ ಆಚರಿಸುವುದು ಕಷ್ಟವಾಗುತ್ತದೆ. ಆದರೆ ಪ್ರಾರ್ಥನೆಯಲ್ಲಿ ಒಂದಾಗಿರುವುದು ಒಳ್ಳೆಯದು’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.
‘ಕ್ರಿಸ್ಮಸ್ ಎಂದರೆ ಸಂತೋಷ, ಪ್ರೀತಿ ಮತ್ತು ಶಾಂತಿ. ನಮಗೆ ಯಾವುದೇ ಶಾಂತಿಯಿಲ್ಲ, ಯಾವುದೇ ಸಂತೋಷವಿಲ್ಲ’ ಎಂದು ಹೇಳಿದ ಚರ್ಚ್ ಆಫ್ ದಿ ನೇಟಿವಿಟಿಯ ಗ್ರೀಕ್ ಆರ್ಥೊಡೆಕ್ಸ್ ಧರ್ಮಗುರು ಫಾ.ಸ್ಪ್ರಿಡಾನ್ ಸ್ಯಾಮರ್ ಅವರು, ‘ಇದು ನಮ್ಮ ಕೈಗಳನ್ನು ಮೀರಿದೆ. ವಿಶ್ವಾದ್ಯಂತದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕರಿಗೆ ನೆರವಾಗುವಂತೆ, ಇಲ್ಲಿ ಮತ್ತು ವಿಶ್ವಾದ್ಯಂತ ಶಾಂತಿಯನ್ನು ಕಲ್ಪಿಸಲು ಅವರಿಗೆ ಬೆಳಕು ನೀಡುವಂತೆ ನಾವು ದೇವರನ್ನು ಪ್ರಾರ್ಥಿಸುತ್ತೇವೆ’ ಎಂದು ಹೇಳಿದರು.
ಜೆರುಸ್ಲೇಮ್ ನಲ್ಲಿಯ ಚರ್ಚ್ ಗಳ ಮುಖ್ಯಸ್ಥರೂ ಇಸ್ರೇಲ್ ಸರಕಾರದ ಕ್ರಮಗಳ ವಿರುದ್ಧ ಮಾತನಾಡಿದ್ದಾರೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರೊಂದಿಗಿನ ಮಾತುಕತೆಯಲ್ಲಿ ಅವರು ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಮತ್ತೊಮ್ಮೆ ಕರೆ ನೀಡಿದ್ದಾರೆ ಎಂದು ವ್ಯಾಟಿಕನ್ ನ್ಯೂಸ್ ವರದಿ ಮಾಡಿದೆ.
ಕೃಪೆ: thewire.in