"ನಮಗೆ ಕೈಕೋಳ ತೊಡಿಸಲಾಗಿತ್ತು": ಅಮೆರಿಕದಿಂದ ಗಡಿಪಾರಾದ ಹರ್ಯಾಣದ ವ್ಯಕ್ತಿಯ ಅಳಲು

Update: 2025-02-06 08:15 IST
"ನಮಗೆ ಕೈಕೋಳ ತೊಡಿಸಲಾಗಿತ್ತು": ಅಮೆರಿಕದಿಂದ ಗಡಿಪಾರಾದ ಹರ್ಯಾಣದ ವ್ಯಕ್ತಿಯ ಅಳಲು

PC: screengrab/x.com/PTI_News

  • whatsapp icon

ಹೊಸದಿಲ್ಲಿ: "ನಮಗೆ ಕೈಕೋಳ ತೊಡಿಸಿ, ಕಾಲುಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಇದನ್ನು ಬಿಡಿಸಲಾಯಿತು" ಎಂದು ಅಮೆರಿಕದಿಂದ ಗಡಿಪಾರುಗೊಂಡಿರುವ ಹರ್ಯಾಣ ಮೂಲದ ಜಸ್ ಪಾಲ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಹುಟ್ಟೂರು ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎನ್ನುವ ಅರಿವು ನಮಗೆ ಇರಲಿಲ್ಲ. ನಮ್ಮನ್ನು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಾವು ಭಾವಿಸಿದ್ದೆವು. ಬಳಿಕ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಈ ವೇಳೆ ನಮಗೆ ಕೈಕೋಳ ತೊಡಿಸಿ ಕಾಲುಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ಬಿಡಿಸಲಾಯಿತು" ಎಂದು ವಿವರಿಸಿದರು.

"ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶ ನೀಡುವುದಾಗಿ ಭರವಸೆ ನೀಡಿರುವ ಟ್ರಾವೆಲ್ ಏಜೆಂಟ್ ನಿಂದ ನಾನು ವಂಚನೆಗೆ ಒಳಗಾಗಿದ್ದೇನೆ. ಅಮೆರಿಕದ ವೀಸಾ ಬಂದ ಬಳಿಕ ನನ್ನನ್ನು ಕಳುಹಿಸುವಂತೆ ಕೇಳಿಕೊಂಡಿದ್ದೆ. ಆದರೆ ಆತ ನನಗೆ ವಂಚಿಸಿದ. 30 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿತ್ತು" ಎಂದು ಹೇಳಿದರು.

ಕಳೆದ ವರ್ಷದ ಜುಲೈನಲ್ಲಿ ವಿಮಾನ ಮೂಲಕ ಬ್ರೆಜಿಲ್ ತಲುಪಿದ್ದೆ. ಮುಂದಿನ ಹಂತದಲ್ಲಿ ಅಮೆರಿಕಕ್ಕೆ ಕೂಡಾ ವಿಮಾನದಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ ಟ್ರಾವೆಲ್ ಏಜೆಂಟ್ ನಮ್ಮನ್ನು ವಂಚಿಸಿದರು. ಅಕ್ರಮವಾಗಿ ಗಡಿ ದಾಟುವಂತೆ ಬಲವಂತಪಡಿಸಿದರು ಎಂದು ಅಳಲು ತೋಡಿಕೊಂಡರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ವಲಸೆಗಾರರ ವಿರುದ್ಧ ಸಮರ ಸಾರಿದ್ದು, 104 ಮಂದಿ ಅಕ್ರಮ ವಲಸಿಗರನ್ನು ಕರೆತಂದ ಅಮೆರಿಕದ ಸೇನಾ ವಿಮಾನ ಬುಧವಾರ ಸಂಜೆ ಅಮೃತಸರದಲ್ಲಿ ಬಂದಿಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News