ಅಧ್ಯಕ್ಷೀಯ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಟ್ರಂಪ್
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಆಸಕ್ತರಾಗಿರುವ ಸ್ಪರ್ಧಿಗಳ ನಡುವೆ ಈ ವಾರ ನಡೆಯುವ ಟಿವಿ ಚರ್ಚೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ. ಯಾಕೆಂದರೆ ಅಮೆರಿಕದ ಜನತೆಗೆ ನಾನ್ಯಾರೆಂಬುದು ತಿಳಿದಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಧ್ಯಕ್ಷರಾಗಿ ಭಾರೀ ಯಶಸ್ಸು ಸಾಧಿಸಿರುವ ದಾಖಲೆ ಹೊಂದಿರುವುದರಿಂದ ಮತ್ತು ಅಮೆರಿಕನ್ ಜನತೆಯಲ್ಲಿ ಅತ್ಯಂತ ಜನಪ್ರಿಯನಾಗಿರುವುದರಿಂದ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತನ್ನ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್ ಸೋಶಿಯಲ್'ನಲ್ಲಿ ಟ್ರಂಪ್ ಹೇಳಿದ್ದಾರೆ.
2024ರ ರಿಪಬ್ಲಿಕ್ ಅಧ್ಯಕ್ಷೀಯ ನಾಮನಿರ್ದೇಶನದ ಮೊದಲ ಚರ್ಚೆ ವಿಸ್ಕಾನ್ಸಿನ್‍ನಲ್ಲಿ ಬುಧವಾರ ನಿಗದಿಯಾಗಿದೆ. ಇತ್ತೀಚಿನ ಎಲ್ಲಾ ಸಮೀಕ್ಷೆಗಳಲ್ಲೂ ತಾನು ಮುನ್ನಡೆ ಸಾಧಿಸಿರುವ ವರದಿ ಬಂದಿರುವುದರಿಂದ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಸಿಬಿಎಸ್ ನ್ಯೂಸ್ ರವಿವಾರ ಪ್ರಕಟಿಸಿದ ಸಮೀಕ್ಷೆಯ ಫಲಿತಾಂಶದಲ್ಲಿ 62%ದಷ್ಟು ಜನತೆ ಟ್ರಂಪ್ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ. ಟ್ರಂಪ್ ಅವರ ನಿಕಟ ಪ್ರತಿಸ್ಪರ್ಧಿ ಎಂದು ಬಿಂಬಿಸಲಾದ ಫ್ಲೋರಿಡಾದ ಗವರ್ನರ್ ರಾನ್ ಡಿಸ್ಯಾಂಟಿಸ್ 16% ಬೆಂಬಲ ಗಳಿಸಿದ್ದಾರೆ. ಉಳಿದ ಅಭ್ಯರ್ಥಿಗಳು 1 ಅಂಕಿಗೆ ತೃಪ್ತಿಪಟ್ಟುಕೊಂಡಿದ್ದಾರೆ. `ಡಿಸ್ಯಾಂಟಿಸ್ ಅಸ್ವಸ್ಥ ಹಕ್ಕಿಯಂತೆ ನೆಲಕ್ಕೆ ಉರುಳಲಿದ್ದಾರೆ' ಎಂದು ಟ್ರಂಪ್ ಹೇಳಿದ್ದಾರೆ.