ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆಗೆ ಯುಎನ್ಜಿಎ ಆಗ್ರಹ

Update: 2023-12-15 16:49 GMT

ವಿಶ್ವಸಂಸ್ಥೆ ಭದ್ರತಾ ಮಂಡಳಿ | Photo: pti

ಜಿನೆವಾ: ಬಹುತೇಕ ನಿಷ್ಕ್ರಿಯ ಸ್ಥಿತಿಗೆ ತಲುಪಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಇದು ಸಕಾಲವಾಗಿದ್ದು ಅಭಿವೃದ್ಧಿ ದೇಶಗಳಿಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ(ಯುಎನ್ಜಿಎ)ಯ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಪ್ರತಿಪಾದಿಸಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ` ಸುಧಾರಣೆ ನಮ್ಮ ಸಾಮೂಹಿಕ ಕಾರ್ಯ ಮತ್ತು ಜವಾಬ್ದಾರಿಯಾಗಿದೆ. ಹೆಚ್ಚು ಸಮತೋಲಿತ, ಪ್ರತಿಕ್ರಿಯಾಶೀಲ, ಪ್ರಾತಿನಿಧಿಕ, ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಮಂಡಳಿಯ ಅಗತ್ಯ ನಮಗಿದೆ. ಘರ್ಷಣೆಗಳು ಜಗತ್ತಿನಾದ್ಯಂತ ಹರಡುತ್ತಿರುವ ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿರುವ ಭದ್ರತಾ ಮಂಡಳಿ ನಿಷ್ಕ್ರಿಯ ಸ್ಥಿತಿಯಲ್ಲಿದೆ' ಎಂದರು. ತನ್ನ ಮಹತ್ವದ ಕಾರ್ಯವನ್ನು ಸಮರ್ಪಕವಾಗಿ ಸಾಗಿಸುವಲ್ಲಿ ಭದ್ರತಾ ಮಂಡಳಿಯ ಸಾಧನೆ ತೃಪ್ತಿಕರವಾಗಿಲ್ಲ. ಪರಿಣಾಮವಾಗಿ ಇಡೀ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯನ್ನು ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಫ್ರಾನ್ಸಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ `ದಿ ಅಬ್ಸರ್ವರ್ ರಿಸರ್ಚ್ ಫೌಂಡೇಷನ್(ಒಆರ್ಎಫ್)' ಮತ್ತು ವಿಶ್ವಸಂಸ್ಥೆಗೆ ಭಾರತದ ಕಾಯಂ ನಿಯೋಗದ ವತಿಯಿಂದ ಆಯೋಜಿಸಲಾದ `ಸಮತೋಲನದ ಬದಲಾವಣೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಯ ಬಗ್ಗೆ ಜಾಗತಿಕ ದಕ್ಷಿಣದ ವಿಚಾರವೇದಿಕೆಯ ದೃಷ್ಟಿಕೋನಗಳು' ಎಂಬ ವಿಷಯದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿ ರುಚಿರಾ ಕಂಬೋಜ್ `ನಾವು 21ನೇ ಶತಮಾನದ ಮೂರನೇ ದಶಕದಲ್ಲಿ ನಿಂತಿರುವ ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಪ್ರಸ್ತುತ ಸ್ವರೂಪವು ಕಳೆದ ದಶಕಗಳಲ್ಲಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿನ ಭಾರೀ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸೂಕ್ತವಾಗಿಲ್ಲ. ಇದು ಜಾಗತಿಕ ಭೂದೃಶ್ಯವನ್ನು ಪ್ರತಿಬಿಂಬಿಸುತ್ತಿಲ್ಲ. ಶಾಶ್ವತ ಸದಸ್ಯತ್ವ ಪಡೆದಿರುವ ಜಾಗತಿಕ ಉತ್ತರ ದೇಶಗಳ ಪ್ರಾಬಲ್ಯವು ನಮ್ಮ ಇಂದಿನ ಜಗತ್ತಿನ ವೈವಿಧ್ಯಮಯ ಭಾಗವನ್ನು, ವಿಶೇಷವಾಗಿ ಲ್ಯಾಟಿನ್ ಅಮೆರಿಕ, ಆಫ್ರಿಕಾ, ಸಣ್ಣ ದ್ವೀಪರಾಷ್ಟ್ರಗಳು ಮತ್ತು ಏಶ್ಯಾದ ವಿಶಾಲ ಭಾಗಗಳ ಧ್ವನಿಯನ್ನು ಕಡೆಗಣಿಸುತ್ತಿವೆ ' ಎಂದರು.

ವಸಾಹತುಶಾಹಿ ಗತಕಾಲದ ಕುರುಹು

ನಾವು ಜಾಗತಿಕ ದಕ್ಷಿಣವನ್ನು ಪ್ರತಿನಿಧಿಸುವುದರಿಂದ ನಮ್ಮ ಬೇಡಿಕೆ ಕೇವಲ ಪ್ರಾತಿನಿಧ್ಯಕ್ಕಾಗಿ ಅಲ್ಲ, ನಮ್ಮ ಪ್ರದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರುವ ನಿರ್ಧಾರಗಳಲ್ಲಿ ಸಮಾನವಾದ ಭಾಗವಹಿಸುವಿಕೆಗಾಗಿ. ಭದ್ರತಾ ಮಂಡಳಿಯ ಸಾಂಕೇತಿಕ ಪ್ರಾತಿನಿಧ್ಯ ವಸಾಹತುಶಾಹಿ ಭೂತಕಾಲದ ಕುರುಹಾಗಿದೆ ಎಂದು ಭಾರತ ಪ್ರತಿಪಾದಿಸಿದೆ.

ಭದ್ರತಾ ಮಂಡಳಿಯು ಕೊನೆಯ ವಸಾಹತುಶಾಹಿ ಸಂಸ್ಥೆಯಾಗಿ ಉಳಿದಿದೆ. ವೀಟೊ ಜಾಗತಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಪೂರಕ ಸಾಧನವಾಗಿದೆಯೇ ಅಥವಾ ಕೆಟ್ಟ ನಡವಳಿಕೆಯನ್ನು ರಕ್ಷಿಸುವ ವಿಕೃತ ಸವಲತ್ತು ಆಗಿದೆಯೇ ಎಂಬುದನ್ನು ಅಂತರಾಷ್ಟ್ರೀಯ ಸಮುದಾಯ ಪ್ರಶ್ನಿಸಬೇಕು. ವೀಟೊ ದುರುಪಯೋಗ ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ವೀಟೊ ಶಾಂತಿ ಮತ್ತು ಸ್ಥಿರತೆ ಒದಗಿಸಿರುವುದನ್ನು ಇದುವರೆಗೆ ನೋಡಿಲ್ಲ ಎಂದು ಒಆರ್ಎಫ್ ಅಧ್ಯಕ್ಷ ಸಮೀರ್ ಸರನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News