ಕೆಂಪು ಸಮುದ್ರದಲ್ಲಿ ಇಸ್ರೇಲ್ ನತ್ತ ಸಾಗುತ್ತಿದ್ದ ಹಡಗಿನ ಮೇಲೆ ದಾಳಿ
Update: 2023-12-15 17:06 GMT
ಸನಾ: ಕೆಂಪು ಸಮುದ್ರದಲ್ಲಿ ಇಸ್ರೇಲ್ ನತ್ತ ಸಾಗುತ್ತಿದ್ದ ಸರಕು ನೌಕೆಯ ಮೇಲೆ ಯೆಮನ್ ನಲ್ಲಿ ಹೌದಿ ಬಂಡುಗೋರರ ನಿಯಂತ್ರಣದಲ್ಲಿರುವ ಪ್ರದೇಶದಿಂದ ಕ್ಷಿಪಣಿ ದಾಳಿ ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಯೆಮನ್ ನಲ್ಲಿ ಹೌದಿ ನಿಯಂತ್ರಣದಲ್ಲಿರುವ ಪ್ರದೇಶದಿಂದ ಹಾರಿಬಂದ ಸ್ಫೋಟಕ ಅಪ್ಪಳಿಸಿ ಹಡಗಿಗೆ ಹಾನಿಯಾಗಿದೆ ಮತ್ತು ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ಯೆಮನ್ ನ ಉತ್ತರ ಕರಾವಳಿಯ ಮೋಚಾ ನಗರದ ಬಳಿ ಘಟನೆ ನಡೆದಿದ್ದು ಜರ್ಮನಿಯ ಸಾರಿಗೆ ಸಂಸ್ಥೆಗೆ ಸೇರಿದ ಹಡಗಿಗೆ ಹಾನಿಯಾಗಿದ್ದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರದ ಮೂಲಕ ಇಸ್ರೇಲ್ ನತ್ತ ಸಾಗುವ ಎಲ್ಲಾ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.