ಇದು ಯಕ್ಷಗಾನ ಕಲೆಯೋ? ಯಕ್ಷಗಾನದ ಕೊಲೆಯೋ?

Update: 2023-11-04 04:14 GMT

ಜಾನಪದ ಅಕಾಡಮಿಯಿಂದ ಯಕ್ಷಗಾನವನ್ನು ಹೊರಗಿಟ್ಟು ಅದಕ್ಕೆ ಪ್ರತ್ಯೇಕ ಅಕಾಡಮಿಯನ್ನು ಪ್ರಕಟಿಸಿದಾಗ ಹಲವು ಜಾನಪದ ತಜ್ಞರು ಅದರ ವಿರುದ್ಧ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಒಂದು ಕಲಾಪ್ರಕಾರಕ್ಕೆ ಪ್ರತ್ಯೇಕ ಅಕಾಡಮಿಯನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ? ಅಥವಾ ಇದು ಯಕ್ಷಗಾನ ಪ್ರಕಾರವನ್ನು ಈ ಮೂಲಕ ಜಾನಪದ ಪ್ರಕಾರದಿಂದ ಹೊರಗಿಡುವ ಮತ್ತು ಶಾಸ್ತ್ರೀಯತೆಯನ್ನು ಅದರ ಮೇಲೆ ಹೇರುವ ಪ್ರಯತ್ನದ ಭಾಗವೆೆ? ಎನ್ನುವುದರ ಬಗ್ಗೆ ಹಲವು ವಿದ್ವಾಂಸರು ಚರ್ಚಿಸಿದ್ದರು. ಕರಾವಳಿಯಲ್ಲಿ ಯಕ್ಷಗಾನ ತನ್ನ ಜಾನಪದೀಯ ಗುಣಲಕ್ಷಣಗಳನ್ನು ಕಳೆದುಕೊಳ್ಳುತ್ತಾ ನಿಧಾನಕ್ಕೆ ವೈದಿಕ ಪ್ರಚಾರಕ್ಕೆ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆಗೆ ಮಹತ್ವ ಬಂದಿತ್ತು. ಇಂದು ಯಕ್ಷಗಾನಕ್ಕೆ ಶಾಸ್ತ್ರ, ಧರ್ಮಗಳ ಬಣ್ಣಗಳ ಜೊತೆಗೆ ರಾಜಕೀಯದ ಬಣ್ಣವನ್ನೂ ಬಳಿದು ಅದನ್ನು ಇನ್ನಷ್ಟು ವಿಕಾರಗೊಳಿಸಲಾಗಿದೆ. ಒಂದು ಕಾಲದಲ್ಲಿ ಯಕ್ಷಗಾನ ವಾಣಿಜ್ಯೀಕರಣವಾಗುತ್ತಿರುವ ಬಗ್ಗೆ ಹಲವು ಯಕ್ಷಗಾನ ವಿದ್ವಾಂಸರು, ಹಿರಿಯ ಕಲಾವಿದರು ಆತಂಕ ವ್ಯಕ್ತಪಡಿಸುತ್ತಿದ್ದರು. ಆದರೆ ಈ ವಾಣಿಜ್ಯೀಕರಣದ ಹಿಂದಿದ್ದದ್ದು  ‘ಕಲಾವಿದರ ಹೊಟ್ಟೆಪಾಡು’. ಇಂದು ಯಕ್ಷಗಾನ ಪ್ರಸಂಗಗಳು ವಾಣಿಜ್ಯೀಕರಣಗೊಂಡ ಕಾರಣದಿಂದ ವೃತ್ತಿಪರ ಮೇಳಗಳು ಒಂದಿಷ್ಟು ಉಸಿರಾಡುತ್ತಿವೆ. ಜನಸಾಮಾನ್ಯರನ್ನು ಯಕ್ಷಗಾನದ ಕಡೆಗೆ ಸೆಳೆಯಲು ಕೆಲವು ವೃತ್ತಿ ಪರ ಮೇಳಗಳು ಬಗೆ ಬಗೆಯ ಪ್ರಯೋಗಗಳನ್ನು ಮಾಡಿದಾಗ ‘ಯಕ್ಷಗಾನವನ್ನು ಕೆಡಿಸಲಾಗುತ್ತದೆ’ ಎಂದು ಹಲವು ಗಣ್ಯರು ವೇದಿಕೆಯಲ್ಲಿ ನಿಂತು ಗೋಳಾಡಿದ್ದರು. ಈಗಲೂ ವೃತ್ತಿಪರ ಯಕ್ಷಗಾನ ಮೇಳಗಳ ಬಗ್ಗೆ ವಿದ್ವಾಂಸರು, ಸಜ್ಜನ ಹಿರಿಯ ಕಲಾವಿದರೆಂದು ಕರೆಸಿಕೊಂಡವರು ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. 

ಇದೇ ಸಂದರ್ಭದಲ್ಲಿ ಕಳೆದ ಎರಡು ದಶಕಗಳಿಂದ ಯಕ್ಷಗಾನ ಕಲೆಯ ಮೇಲೆ ಜಾತೀಯ ಶಕ್ತಿಗಳು ದಾಳಿ ಮಾಡುತ್ತಾ ಬಂದಿದೆಯಾದರೂ, ಇವುಗಳ ಬಗ್ಗೆ ಸಜ್ಜನ ಹಿರಿಯ ಕಲಾವಿದರು ಜಾಣ ಮೌನವನ್ನು ತಾಳುತ್ತಾ ಬಂದಿದ್ದಾರೆ. ಬಿಲ್ಲವರೆನ್ನುವ ಕಾರಣಕ್ಕಾಗಿ ಕಲಾವಿದರ ಜೊತೆಗೆ ಅಸ್ಪಶ್ಯತೆಯಿಂದ ವರ್ತಿಸಿದ ಪ್ರಕರಣವೊಂದು ಕೆಲವು ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಷ್ಟೇ ಅಲ್ಲ, ಈ ಯಕ್ಷಗಾನ ಕಲೆಯನ್ನು ರಾಜಕೀಯ ಪಕ್ಷಗಳು ಸಮಾಜದಲ್ಲಿ ಒಂದು ಧರ್ಮದ ವಿರುದ್ಧ ದ್ವೇಷವನ್ನು ಬಿತ್ತಲು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತಾ ಬರುತ್ತಿವೆ. ಇಂದು ಕರಾವಳಿಯಲ್ಲಿ ಗ್ರಾಮೀಣ ಮಟ್ಟಕ್ಕೆ ಕೋಮುದ್ವೇಷಗಳನ್ನು ಹರಡುವಲ್ಲಿ ಈ ಯಕ್ಷಗಾನ ಮೇಳಗಳ ಕೆಲವು ನಿರ್ದಿಷ್ಟ ಕಲಾವಿದರ ಪಾತ್ರ ಬಹುದೊಡ್ಡದು. ಕಲಾವಿದರೆನ್ನುವುದು ಮರೆತು ಅಪ್ಪಟ ರಾಜಕೀಯ ಕಾರ್ಯಕರ್ತರಂತೆ ವೇದಿಕೆಯಲ್ಲಿ ಮಾತನಾಡುತ್ತಾರೆ.  ತಮಾಷೆ, ವ್ಯಂಗ್ಯದಹೆಸರಿನಲ್ಲಿ ಇನ್ನೊಂದು ಧರ್ಮವನ್ನು ಹೀಯಾಳಿಸುತ್ತಾ ಜನರನ್ನು ಭಾವನಾತ್ಮಕವಾಗಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಗೂ, ಸಮಾಜಕ್ಕೂ ಏಕಕಾಲಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕಳೆದ ವರ್ಷ ಬಿಜೆಪಿಯು ತನ್ನ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ‘ಪಕ್ಷದ ಪ್ರಚಾರಕ್ಕೆ ಯಕ್ಷಗಾನವನ್ನು ಸಮರ್ಥವಾಗಿ ಬಳಸಿಕೊಳ್ಳಿ’ ಎಂದು ಕರೆ ಕೊಟ್ಟಿರುವ ವೀಡಿಯೊ ವೈರಲ್ ಆಯಿತು. ಯಕ್ಷಗಾನ ವಾಣಿಜ್ಯೀಕರಣವಾಗುತ್ತಿರುವ ಬಗ್ಗೆ ಗೋಳಾಡುತ್ತಿದ್ದ ಯಾವುದೇ ಸಜ್ಜನ, ಹಿರಿಯ ಯಕ್ಷಗಾನ ಕಲಾವಿದರು, ವಿದ್ವಾಂಸರು ಈ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಲಿಲ್ಲ. ಕಳೆದ ಮೂರು ದಶಕಗಳಿಂದ ಯಕ್ಷಗಾನ ಆರೆಸ್ಸೆಸ್‌ನ ದ್ವೇಷ ರಾಜಕಾರಣಕ್ಕೆ ದುರ್ಬಳಕೆಯಾಗುತ್ತಿರುವುದನ್ನು ಇವರೆಲ್ಲ ಮೌನವಾಗಿ ಪೋಷಿಸಿಕೊಂಡು ಬಂದಿದ್ದಾರೆ.

ಇದೀಗ ಯಕ್ಷಗಾನದ ಮೂಲಕ ದ್ವೇಷವನ್ನು ಹಂಚುತ್ತಾ ಬಂದ ಕಲಾವಿದನೊಬ್ಬನಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನ್ನು ನೀಡುವ ಮೂಲಕ, ದ್ವೇಷ ಹಂಚುವಿಕೆಯೂ ಒಂದು ಕಲೆ ಎನ್ನುವುದನ್ನು ಸರಕಾರವೇ ಅಧಿಕೃತವಾಗಿ ಘೋಷಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಹಲವು ಸಮರ್ಥರಿಗೆ, ನಿಜವಾದ ಸಾಧಕರಿಗೆ ನೀಡಲಾಗಿದೆಯಾದರೂ ಒಂದೆರಡು ಆಯ್ಕೆಗಳ ಬಗ್ಗೆ ತೀವ್ರ ಆಕ್ಷೇಪಗಳೆದ್ದಿವೆ. ಅವುಗಳಲ್ಲಿ ಮುಖ್ಯವಾಗಿ ಕರಾವಳಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ ದಾಸ್ ಶೆಣೈ ಎಂಬವರಿಗೆ ನೀಡಿರುವ ಪ್ರಶಸ್ತಿ, ಕನ್ನಡದ ಸೌಹಾರ್ದ ಮೌಲ್ಯಗಳಿಗೆ ಮಾಡಿರುವ ಅವಮಾನ ಎಂದು ಪ್ರಜ್ಞಾವಂತರು ಆರೋಪಿಸುತ್ತಿದ್ದಾರೆ. ಇವರಿಗೆ ಪ್ರಶಸ್ತಿ ಘೋಷಣೆಯಾದ ಬೆನ್ನಿಗೇ, ಇವರ ವಿಕ್ರಮಾದಿತ್ಯನ ಪಾತ್ರವೊಂದರ ಸಂಭಾಷಣೆಯ ವೀಡಿಯೊ ವೈರಲ್ ಆಗಿವೆ. ಅದರಲ್ಲಿ ಮುಸ್ಲಿಮ್ ಸಮುದಾಯದ ಬಗ್ಗೆ ಅತ್ಯಂತ ಕೀಳಾಗಿ, ಹೀನಾಯವಾಗಿ ಇವರು ಮಾತನಾಡಿದ್ದಾರೆ. ಪಾತ್ರಕ್ಕನುಗುಣವಾಗಿ ನಾನು ಮಾತನಾಡಿದ್ದೇನೆ ಎಂದು ಕಲಾವಿದ ಇದನ್ನು ಸಮರ್ಥಿಸಬಹುದು. ಆದರೆ ಇಲ್ಲಿ ಮುಸ್ಲಿಮ್ ಪಾತ್ರವನ್ನು ಉದ್ದೇಶಪೂರ್ವಕವಾಗಿ ಎಳೆದುತರಲಾಗಿದೆ ಮಾತ್ರವಲ್ಲ, ಪ್ರಸಂಗಕ್ಕೆ ಯಾವೊಂದು ಸಂಬಂಧವೂ ಇಲ್ಲದ ಸಂಭಾಷಣೆಗಳನ್ನು ತುರುಕಿಸಲಾಗಿದೆ. ಮುಖ್ಯವಾಗಿ ಇದೊಂದು ಪುರಾಣ ಪ್ರಸಂಗ. ಈ ಪ್ರಸಂಗದಲ್ಲಿ ಅರೇಬಿಯದ ಕುದುರೆ ವ್ಯಾಪಾರಿಯೊಬ್ಬ ಬರುತ್ತಾನೆ.  ವಿಕ್ರಮಾದಿತ್ಯನ ಕಾಲದಲ್ಲಿ ಅರಬ್ ವ್ಯಾಪಾರಿಗಳು ಭಾರತಕ್ಕೆ ಬಂದಿದ್ದರೆ ಎನ್ನುವುದು ಇನ್ನೊಂದು ಪ್ರಶ್ನೆ. ವಿಕ್ರಮಾದಿತ್ಯನಿಗೆ ಮುಸ್ಲಿಮ್ ಧರ್ಮೀಯರ ಬಗ್ಗೆ ಅರಿವಿತ್ತೆ? ಅವನು ಮುಸ್ಲಿಮ್ ದ್ವೇಷಿಯಾಗಿದ್ದನೆ? ಈ ಎಲ್ಲ ವಿವರಗಳನ್ನು ಪ್ರಸಂಗಕರ್ತರು ಯಾವ ಇತಿಹಾಸ ಪುಸ್ತಕದಿಂದ ಅಥವಾ ಪುರಾಣ ಕೃತಿಗಳಿಂದ ಸಂಪಾದಿಸಿದರು? ಯಕ್ಷಗಾನದಲ್ಲಿ ಆಶು ಸಂಭಾಷಣೆಗಳಿರುತ್ತವೆ. ಅಂದರೆ ಇಲ್ಲಿ ಕಲಾವಿದ ತನ್ನ ಯೋಗ್ಯತೆ, ಸಂಸ್ಕೃತಿ, ಅಧ್ಯಯನ, ವಿವೇಕದ ಮಟ್ಟಕೆ ತಕ್ಕಂತೆ ಮಾತನಾಡುತ್ತಾನೆ. ಆರ್ಗೋಡು ಮೋಹನ್ ದಾಸ್ ಶೆಣೈ ಎಂಬ ಕಲಾವಿದನ ಸಂಭಾಷಣೆ ಕೇಳಿದರೆ ಆತನ ಯೋಗ್ಯತೆ, ತಿಳಿವು, ಸಂಸ್ಕೃತಿ ಎಲ್ಲವೂ ಬಟಾ ಬಯಲಾಗುತ್ತದೆ. ಇಂತಹ ಕೀಳು ಮನಸ್ಥಿತಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದದ್ದು ಹೇಗೆ ? ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ.

ಕಲೆ ಸಮಾಜಕ್ಕೆ ಒಳಿತಿನ ದಾರಿಯನ್ನು ತೋರಿಸಬೇಕು. ಸಹೃದಯತೆಯನ್ನು ಪೋಷಿಸಬೇಕು. ಒಡೆದ ಮನಸ್ಸುಗಳನ್ನು ಬೆಸೆಯಬೇಕು. ಆದರೆ ಈತ ಮನಸ್ಸುಗಳನ್ನು ಒಡೆಯುವ ಸಂಭಾಷಣೆಗಳ ಮೂಲಕ ವಿಕೃತ ಖುಷಿ ಪಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ರಾಜ್ಯೋತ್ಸವ ಪ್ರಶಸ್ತಿಗೆ ನಿಜಕ್ಯೂ ಅರ್ಹತೆಯುಳ್ಳ ಹಿರಿಯ, ಯೋಗ್ಯ ಹಲವು ಯಕ್ಷಗಾನ ಕಲಾವಿದರು ಕರಾವಳಿಯಲ್ಲಿದ್ದರು. ಅವರನ್ನೆಲ್ಲ ಬದಿಗಿಟ್ಟು ಈ ವ್ಯಕ್ತಿಯನ್ನೇ ಗುರುತಿಸಿ ಪ್ರಶಸ್ತಿಯನ್ನು ನೀಡುವ ಮೂಲಕ ಯಕ್ಷಗಾನ ಕಲೆಯನ್ನು, ಜೊತೆಗೆ ಕನ್ನಡದ ಸೌಹಾರ್ದ ಪರಂಪರೆಯನ್ನು ಸರಕಾರ ಅವಮಾನಿಸಿದೆ. ಸರಕಾರ ಈತ ಪ್ರದರ್ಶಿಸಿದ ಪಾತ್ರದ ಸಂಭಾಷಣೆಯ ವೀಡಿಯೊವನ್ನು ವೀಕ್ಷಿಸಿ, ಈತ ಆಡಿದ ಮಾತುಗಳನ್ನು ಆಲಿಸಿ,  ತಕ್ಷಣ ಈತನಿಗೆ ನೀಡಿರುವ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕಾಗಿದೆ. ಈ ಮೂಲಕ ಯಕ್ಷಗಾನದ ಮಾನವನ್ನೂ, ರಾಜ್ಯೋತ್ಸವ ಪ್ರಶಸ್ತಿಯ ಹಿರಿಮೆಯನ್ನು ಜೊತೆಯಾಗಿ ಕಾಪಾಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News