ಕಲಬುರಗಿ | ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಗುಂಡಿಕ್ಕಿ ಹತ್ಯೆ
Update: 2024-09-13 17:34 GMT
ಕಲಬುರಗಿ : ಗ್ರಾಮ ಪಂಚಾಯತಿ ಮಾಜಿ ಸದಸ್ಯನನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ಆಳಂದ ತಾಲ್ಲೂಕಿನ ಖಾನಾಪುರ ಜಿಟ್ಗಾ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಪಡಸಾವಳಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ವಿಶ್ವನಾಥ್ ಕಲ್ಯಾಣಿ ಜಮಾದಾರ್ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಊರಿನಿಂದ ಬೈಕ್‌ನಲ್ಲಿ ಆಳಂದಕ್ಕೆ ಹೊಗುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ವಿಶ್ವನಾಥ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮತ್ತು ಡಿವೈಎಸ್ಪಿ, ಪಿಎಸ್ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.