ಕಲಬುರಗಿ: ಸಿಮೆಂಟ್ ಕಂಪನಿಯ ಕಾರ್ಮಿಕನ ಸಂಶಯಾಸ್ಪದ ಸಾವು; ಕೊಲೆ ಶಂಕೆ
ಕಲಬುರಗಿ: ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ ಕಾರ್ಮಿಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೃತ ದೇಹ ಕಂಪನಿ ಹತ್ತಿರದ ಪ್ರಗತಿ ಕಾಲೊನಿಯ ಬಳಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ನಡೆದಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರ ಪಟ್ಟಣದ ನಾಸರಜಂಗ್ ಬಡಾವಣೆಯ ನಿವಾಸಿ ಶರೀಫ್ ನಿಝಾಮುದ್ದೀನ್ (22) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪಟ್ಟಣದ ಹೊರ ವಲಯದ ದಿಗ್ಗಾಂವ ಸಂಪರ್ಕಿಸುವ ರಸ್ತೆ ಬಳಿ ಶರೀಫ್ ನ ಮೃತದೇಹ ಪತ್ತೆಯಾಗಿದೆ.
ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಶರೀಫ್, ಗುರುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವರು ರಾತ್ರಿ 9 ಗಂಟೆಯಾದರೂ ಮರಳಿ ಬಾರದಿದ್ದಾಗ ಕುಟುಂಬದವರು ಹುಡುಕಾಟ ಪ್ರಾರಂಭಿಸಿದ್ದಾರೆ. ರಾತ್ರಿ 11 ಗಂಟೆಗೆ ಕೆಸಿಎಲ್ ಕಂಪನಿ ಹತ್ತಿರದ ಪ್ರಗತಿ ಕಾಲೊನಿಯ ಪಕ್ಕದಲ್ಲಿ ಶರೀಫ್ ಮೃತದೇಹ ಪತ್ತೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಶರೀಫ್ ನ ತಂದೆ ನಿಝಾಮುದ್ದೀನ್ ಅವರು ತನ್ನ ಮಗನ ಸಾವಿನ ಬಗ್ಗೆ ಸಂಶಯ ಇದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿತ್ತಾಪುರ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.