ಅನಧಿಕೃತ ಕಟ್ಟಡಗಳ ತೆರವಿಗೆ ಪ್ರಿಯಾಂಕ್ ಖರ್ಗೆ ಬುಲ್ಡೋಜರ್ ಬಾಬಾ ಆಗಲಿ : ಸಿದ್ಧಲಿಂಗ ಸ್ವಾಮೀಜಿ
ಕಲಬುರಗಿ: 'ನಗರದಲ್ಲಿ ಇರುವ ನಮ್ಮ ಶಾಖಾ ಮಠದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಲ್ಡೋಜರ್ ಬಾಬಾ ಆಗಬೇಕಾಗುತ್ತದೆ ಎಂದು ಹೇಳಿದ್ದರು. ಇದೀಗ ನಗರದಲ್ಲಿ ತಮ್ಮದೇ ಪಕ್ಷದ ನಾಯಕರ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ, ಅವುಗಳನ್ನು ತೆರವಿಗೆ ತಾವೇ ಬುಲ್ಡೋಜರ್ ಬಾಬಾ ಆಗಲಿ, ನಾವೇ ಅವರಿಗೆ ಖಾವಿ(ಕಾಷಾಯ) ಬಟ್ಟೆ ಕಳುಹಿಸುತ್ತಿದ್ದೇವೆ' ಎಂದು ಆಂದೋಲಾಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಸ್ಥಾಪಿತವಾದ ನಮ್ಮ ಶಾಖಾ ಮಠದ ಕಟ್ಟಡವು ನೀಲನಕ್ಷೆಯ ಪ್ರಕಾರ ನಿರ್ಮಾಣವಾಗಿಲ್ಲ, ಪರವಾನಗಿ ಯಾಕೆ ರದ್ದು ಮಾಡಬಾರದು ಎಂದು ಖುದ್ದು ಸಚಿವರ ಕುಮ್ಮಕ್ಕಿನಿಂದ ಪಾಲಿಕೆಯ ಅಧಿಕಾರಿಗಳು ಮಠಕ್ಕೆ ನೋಟಿಸ್ ಕೊಟ್ಟಿದ್ದಾರೆ. ನಾವು ಕೆಎಂಸಿ ಕಾಯ್ದೆ ಅಡಿಯಲ್ಲಿ ನಿಮೋದನೆ ಮಾಡಿದ್ದೇವೆ, ನಮ್ಮದು ತಪ್ಪಾಗಿದೆ, ಅದಕ್ಕೆ ನಾವು ದಂಡ ಕಟ್ಟಲು ತಯಾರಿದ್ದೇವೆ. ಅದರ ಕುರಿತಾಗಿ ಮನವಿ ಕೊಟ್ಟಿದ್ದೆವು. ಆದರೆ ಅವರು ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪಿಸಿದರು.
ಮೇಲಿಂದ ಮೇಲೆ ನೋಟಿಸ್ ಕೊಡುತ್ತಿರುವುದರಿಂದ ಕಲಬುರಗಿ ಹೈಕೋರ್ಟ್ ಗೆ ಹೋಗಿದ್ದೆವು, ಆದರೆ ಹೈಕೋರ್ಟ್ ಪೀಠ, ಪಾಲಿಕೆಯ ಅಧಿಕಾರಿಗಳು ಏನನ್ನೂ ಸೂಚಿಸುತ್ತಾರೋ ಅದನ್ನು ತೆರವು ಮಾಡಿ, ಇಲ್ಲದಿದ್ದರೆ ಪಾಲಿಕೆಯೇ ತೆರವುಗೊಳಿಸಿದರೆ ಅದರ ಹಣವನ್ನು ಭರಿಸಬೇಕೆಂದು ಆದೇಶಿಸಿದೆ. ಅದಕ್ಕೆ ನಾವು ಮತ್ತೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.
ಶಾಂತಿ ನಗರದಲ್ಲಿರುವ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ, ಅದೇ ಏರಿಯದಲ್ಲಿರುವ ಇಲಿಯಾಸ್ ಅಹ್ಮದ್ ಭಗವಾನ್ ಅವರ ಪತ್ನಿಯ ಹೆಸರಿನ ಮೂರಂತಸ್ತಿನ ಕಟ್ಟಡದ ಮನೆಗಳು ಸೆಟ್ ಬ್ಯಾಕ್ ಇಲ್ಲದೆ ನಿರ್ಮಿಸಲಾಗಿದೆ. ಖರ್ಗೆ ಆಪ್ತ ರಾಜೀವ ಜಾನೆ ಅವರ ಪತ್ನಿಯ ಹೆಸರಿನಲ್ಲಿ ಕಟ್ಟಿಸುತ್ತಿರುವ ಕಟ್ಟಡಗಳು ನಿಯಮ ಉಲ್ಲಂಘಿಸಿವೆ, 100 ಕೋಟಿ ರೂ. ಗೂ ಹೆಚ್ಚು ಬೆಲೆ ಬಾಳುವ ಖ್ವಾಜಾ ಬಂದೇ ನವಾಜ್ (ಕೆಬಿಎನ್) ಆಸ್ಪತ್ರೆಗೂ ಕೂಡ ಪರವಾನಗಿ ಇಲ್ಲ ಎಂದು ವಿವರಿಸಿದರು.
ಇವುಗಳನ್ನೆಲ್ಲ ಅನಧಿಕೃತವಾಗಿ ಕಟ್ಟಲಾಗಿದೆ, ಇವುಗಳನ್ನು ತೆರವುಗೊಳಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಖಾವಿ ತೊಟ್ಟು ಬುಲ್ಡೋಜರ್ ಬಾಬಾ ಆಗಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಗುಡ್ಡದ್, ಈಶ್ವರ್ ಹಿಪ್ಪರಗಿ, ರಾಕೇಶ್ ಜಮಾದಾರ್, ಮಡಿವಾಳಪ್ಪ ಅಮರಾವತಿ, ಮಲಕಣ್ಣ ಹೀರೆಪೂಜಾರಿ, ಸತೀಶ್ ಮಾಗೂರ್ ಸೇರಿದಂತೆ ಹಲವರು ಇದ್ದರು.