ದೇಶದಲ್ಲಿ ʼಇಂಡಿಯಾʼ ಒಕ್ಕೂಟಕ್ಕೆ ಹೆಚ್ಚಿನ ಸೀಟುಗಳು ಸಿಗಲಿದೆ : ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ : ಈ ಚುನಾವಣೆ ಮೋದಿ ಮತ್ತು ಜನರ ನಡುವಿನ ಚುನಾವಣೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸೀಟುಗಳು ಬರುವ ಸಾಧ್ಯತೆಯಿದ್ದು, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲು ಬೇಕಾಗಿರುವ ಅಂಕಿ ಅಂಶಗಳು ನಮಗೆ ಸಿಕ್ಕಿವೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಕಲಬುರಗಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು, ʼಭ್ರಷ್ಟಾಚಾರದ ತಡೆ ಬಗ್ಗೆ ಮತನಾಡುವ ಮೋದಿಯವರು ಈಡಿ, ಸಿಬಿಐ ಬಳಸಿಕೊಂಡು ಹೆದರಿಸಿ ಎಲ್ಲಾ ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಪೋಷಿಸುತ್ತಿದ್ದಾರೆʼ ಎಂದು ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಇರುವುದಿಲ್ಲ, ನಿಮ್ಮ ಆಸ್ತಿಯನ್ನು ಮುಸ್ಲಿಮರಿಗೆ ಹಂಚುತ್ತಾರೆ ಎಂದು ಹೆದರಿಸಿದ್ದಾರೆ. ಈ ರೀತಿ ಹೇಳೊದನ್ನು ಪ್ರಧಾನಿ ಮೋದಿ ಮೊದಲು ನಿಲ್ಲಿಸಬೇಕು. ಗಾಂಧಿ ಕುಟುಂಬ ಅಧಿಕಾರ ಬಿಟ್ಟು ಸುಮಾರು ವರ್ಷಗಳೇ ಕಳೆದಿವೆ. 1989ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರೂ ಮಂತ್ರಿಯಾಗಿಲ್ಲ. ಆದರೂ ಮೋದಿಯವರು ಗಾಂಧಿ ಕುಟುಂಬದ ಬಗ್ಗೆಯೇ ಮಾತನಾಡುತ್ತಾರೆ" ಎಂದು ಕಿಡಿಕಾರಿದರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಖರ್ಗೆ, ಅದರ ಬಗ್ಗೆ ರಾಜ್ಯ ನಾಯಕರು ಮಾತನಾಡುತ್ತಾರೆ. ತಪ್ಪಿಸ್ಥರು ಯಾರೇ ಆಗಲಿ ಕಾನೂನಿನ ಪ್ರಕಾರ ಕ್ರಮ ಆಗಬೇಕು. ಅದು ಪ್ರಜ್ವಲ್ ಆಗಿರಲಿ, ಕೇಜ್ರಿವಾಲ್ ಸೆಕ್ರೆಟರಿ ಆಗಿರಲಿ ಕಾನೂನು ಎಲ್ಲರಿಗೂ ಒಂದೇ ಎಂದರು.