ಕಾಂಗ್ರೆಸ್ ಸರಕಾರದಿಂದ ಸಾಮಾಜಿಕ ನ್ಯಾಯ ದೊರೆಯುತ್ತಿದೆ : ಶಾಸಕ ಬಿ.ಆರ್.ಪಾಟೀಲ್
ಕಲಬುರಗಿ : ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದಿಂದ ಸಾಮಾಜಿಕ ನ್ಯಾಯ ದೊರೆಯುತ್ತಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಪ್ರತಿಪಾದಿಸಿದರು.
ಆಳಂದ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ರವಿವಾರ ಆಳಂದ ಹಾಗೂ ಮಾದನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಸಂಸದ ರಾಧಾಕೃಷ್ಣ ದೊಡ್ಡಮನಿ, ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಅವರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ʼಸಿಎಂ ಸಿದ್ದರಾಮಯ್ಯ ಅವರ ಪಂಚ ಗ್ಯಾರಂಟಿಯಿಂದ ಜನರಿಗೆ ಬಹಳ ಅನುಕೂಲವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಜಾರಿಯಾದ ಮೇಲೆ ಈ ಭಾಗದಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳು ದೊರೆಯಲು ಸಾಧ್ಯವಾಗಿದೆ. ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ ಈ ಭಾಗ ಅಭಿವೃದ್ದಿ ಆಗುತ್ತಿದೆʼ ಎಂದರು.
ಕಲಬುರಗಿ ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಈ ಬಾರಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದ್ದಕ್ಕೆ ಗೆಲುವಾಗಿದೆ. ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಆದರೆ ಶಾಸಕ ಬಿ.ಆರ್.ಪಾಟೀಲ್ ಅವರೇ ನನ್ನ ಹೆಸರು ಪ್ರಸ್ತಾವನೆ ಮಾಡಿರುವರು ಎಂದು ನೆನಪಿಸಿದರು. ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಸಹ ಜಿಲ್ಲೆಯ ಮಠಾಧೀಶರ ಮತ್ತು ಲಿಂಗಾಯತ ಸಮುದಾಯದವರ ಮತಗಳು ಹೆಚ್ಚಿಗೆ ಬರಲು ಶ್ರಮಿಸಿದ್ದಾರೆಂದು ಸ್ಮರಿಸಿದರು.
ಬೀದರ್ ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್, ಹೋರಾಟಗಾರ ಡಿ.ಜಿ.ಸಾಗರ, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ ಅವರು ಸಭೆಯಲ್ಲಿ ಮಾತನಾಡಿದರು.
ಕಲಬುರಗಿ-ಬೀದರ್-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್, ಗುರುಶರಣ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ್, ಸೈಯ್ಯದ್ ಮಜರಹುಸೇನ್, ಬಸವರಾಜ ಪವಾಡಶಟ್ಟಿ, ಸಿದ್ರಾಮಪ್ಪ ಪಾಟೀಲ್ ಧಂಗಾಪೂರ, ಕನ್ನಿರಾಮ ರಾಠೋಡ್ ಸೇರಿ ಇತರರು ಇದ್ದರು.