ಕಲಬುರಗಿ ಜಿಲ್ಲಾ ಕಸಾಪದಿಂದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ
ಕಲಬುರಗಿ : ಸಾಹಿತ್ಯ ಮನುಷ್ಯತ್ವ, ಮೋಕ್ಷ ಹಾಗೂ ಸಂಬoಧಗಳ ಬೆಸುಗೆಯಾಗಿ ಹೊಸ ಭಾಷ್ಯ ಬರೆಯುತ್ತದೆ. ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಆಯುಕ್ತರಾದ ರವೀಂದ್ರ ಢಾಕಪ್ಪ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಡಿನ ಸಾಹಿತಿಗಳ ಆಚಾರ ವಿಚಾರಗಳು ನಮ್ಮ ಮೇಲೆ ಪ್ರಭಾವ ಬೀರಬೇಕಾದರೆ, ಸಾಹಿತ್ಯ ಕೃತಿಗಳನ್ನು ಹೆಚ್ಚು ಓದಬೇಕು. ಕುವೆಂಪು, ದ.ರಾ. ಬೇಂದ್ರೆ ಮತ್ತಿತರರ ಕಾವ್ಯ ಸ್ಪೂರ್ತಿ ದೊರೆಯಬೇಕಾಗಿದೆ. ಅವರನ್ನು ತುಂಬಾ ಹತ್ತಿರದಿಂದ ನೋಡಿ ಖುಷಿ ಪಡಲಾಗಿದೆ. ನುಡಿದಂತೆ ನಡೆದಾಗ ಇಂಥ ಕಾರ್ಯಕ್ರಮಗಳು ಯಶಸ್ವಿಗೊಳ್ಳುತ್ತವೆ. ಕವಿಗಳಿಗೆ ಭಾವ ಜೀವ ತುಂಬುತ್ತದೆ. ಈ ನಿಟ್ಟಿನಲ್ಲಿ ಪರಿಷತ್ತು ಜಿಲ್ಲೆಯಲ್ಲಿ ನವೆಂಬರ್ ತಿಂಗಳಾದ್ಯoತ ವೈವಿಧ್ಯಮಯ ಕಾರ್ಯಕ್ರಮಗಳು ರೂಪಿಸುವ ಮೂಲಕ ಹೊಸ ಪೀಳಿಗೆಯಲ್ಲಿ ಹೊಸ ಚೈತನ್ಯವನ್ನು ತುಂಬಿದoತಾಗುತ್ತಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ತೊನಸನಹಳ್ಳಿಯ ಅಲ್ಲಮಪ್ರಭು ಪೀಠದ ಡಾ. ಮಲ್ಲಣ್ಣಪ್ಪ ಸ್ವಾಮಿಜಿ, ಮನುಷ್ಯನ ಬದುಕಿನಲ್ಲಿ ಭಾಷೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಇದು ನಾವು-ನಮ್ಮವರು ಎಂಬ ಭಾವನೆ ಮೂಡಿಸಿ ಮನುಷ್ಯನ ಬದುಕನ್ನು ಬೆಸೆಯುವ ಒಂದು ಕೊಂಡಿಯಾಗಿದ್ದು, ಕನ್ನಡ ನಾಡು-ನುಡಿ ಮತ್ತು ಭಾಷೆ ಕಟ್ಟುವ ಕಾರ್ಯದಲ್ಲಿ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸೇವೆ ಮಾಡುತ್ತಿದೆ. ಪರಿಷತ್ತು ಹಮ್ಮಿಕೊಳ್ಳುತ್ತಿರುವ ಹೊಸ ಪ್ರಯೋಗದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಬಣ್ಣಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ವಿಶ್ವದ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇದು ನಮ್ಮ ಬದುಕು ಕಟ್ಟಿಕೊಡುವ ಜೀವಂತ ಭಾಷೆಯಾಗಿದ್ದು, ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಇದನ್ನು ಪ್ರೀತಿಸುವದರೊಂದಿಗೆ ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ. ಕನ್ನಡ ಕಟ್ಟುವ ಕಾಯಕದಲ್ಲಿ ಪರಿಷತ್ತು ಜಿಲ್ಲೆಯಲ್ಲಿ ಅವಿರತವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ, ಹಿರಿಯ ಲೇಖಕಿ ಡಾ. ಇಂದುಮತಿ ಪಾಟೀಲ ಮಾತನಾಡಿದರು.
ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಸಿದ್ಧಲಿಂಗ ಬಾಳಿ, ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಡಾ. ರೆಹಮಾನ್ ಪಟೇಲ್, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಶಕುಂತಲಾ ಪಾಟೀಲ, ರಮೇಶ ಡಿ ಬಡಿಗೇರ, ಕಲ್ಯಾಣಕುಮಾರ ಶೀಲವಂತ, ಜಗದೀಶ ಮರಪಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಧಕರಿಗೆ ರಾಜ್ಯೋತ್ಸವ ಗೌರವ ಪುರಸ್ಕಾರ :
ಜಿಲ್ಲೆಯ ವಿವಿಧ ಕ್ಷೇತ್ರದ ಪ್ರಮುಖರಾದ ಗುರಣ್ಣ ಪಡಶೆಟ್ಟಿ ಉಡಚಣ, ಡಾ. ಪ್ರಹ್ಲಾದ ಬುರ್ಲಿ, ಮುಹಮ್ಮದ್ ಇಬ್ರಾಹಿಂ, ಅಮೃತಪ್ಪ ಅಣೂರ ಕವಿಗಳು, ಡಾ. ಮಂಜುಳಾ ಬಿ ಜಾನೆ, ಶಾರದಾಮಣಿ ಪಾಟೀಲ,. ಅಮೃತ ಪೂಜಾರಿ, ಡಾ. ಸೋಮಶೇಖರ ರೂಳಿ, ಅಶೋಕ ತೊಟ್ನಳ್ಳಿ, ಹಣಮಂತರಾಯ ಕಣ್ಣಿ, ಬನ್ನಪ್ಪ ಬಿ.ಕೆ. ಸೇಡಮ್, ಜಟಿಂಗರಾಯ ಶಾಖಾಪುರೆ, ಖಾಜಾ ಫರಿದೋದ್ದಿನ್, ಮಹೇಶ ಚಿಂಚೋಳಿ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.