ಕೇಂದ್ರ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅಪಮಾನ: ಸಚಿವ ಪ್ರಿಯಾಂಕ್ ಖರ್ಗೆ

Update: 2024-02-03 14:45 GMT

ಬೆಂಗಳೂರು: ಕಲ್ಯಾಣ ಕರ್ನಾಟಕದ ಜನರ ಅತ್ಯಂತ ನಿರೀಕ್ಷಿತ ಹಾಗೂ ಇಡೀ ಭಾಗಕ್ಕೆ ಅಭಿವೃದ್ಧಿಯ ಯಂತ್ರವಾಗಬೇಕಿದ್ದ ರೇಲ್ವೆ ವಿಭಾಗಕ್ಕೆ ಬಜೆಟ್ ನಲ್ಲಿ ಕೇಂದ್ರ ಸರಕಾರ ಕೇವಲ ಒಂದು ಸಾವಿರ ರೂಪಾಯಿ ನಿಗದಿಪಡಿಸಿ ನಮ್ಮ ಜನರಿಗೆ ಅಪಮಾನ ಎಸಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಎʼಕ್ಸ್ʼ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 2014ರಲ್ಲಿ ಕೇಂದ್ರದ ಯುಪಿಎ ಸರಕಾರ ರೇಲ್ವೇ ವಿಭಾಗ ಘೋಷಿಸಿ, ಆಡಳಿತ ಕಚೇರಿ, ಮೂಲ ಸೌಕರ್ಯ ಒದಗಿಸಲು 5ಕೋಟಿ ರೂ.ಹಣ ನೀಡಿ, 42.5 ಎಕರೆ ಜಾಗ ಗುರುತಿಸಿ, ಸ್ವಾಧೀನ ಪಡಿಸಿಕೊಂಡು ರೇಲ್ವೆ ಇಲಾಖೆಗೆ ಹಸ್ತಾಂತರಿಸಿತು. ವಿಶೇಷ ಕರ್ತವ್ಯಾಧಿಕಾರಿಯನ್ನೂ ನೇಮಿಸಿ, ಕಲಬುರ್ಗಿ ವಿಭಾಗದ ಕಾರ್ಯವ್ಯಾಪ್ತಿಯನ್ನೂ ನಿರ್ಧರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಬಿಜೆಪಿ ಸರಕಾರ ಬಂದ ನಂತರ ಇಡೀ ಯೋಜನೆಯನ್ನು ಹಳ್ಳ ಹಿಡಿಸಿ ಮೂಲೆಗುಂಪು ಮಾಡಿ ಈಗ ಚುನಾವಣೆ ವರ್ಷ ಬಂದಿರುವಾಗ ಕಲ್ಯಾಣ ಕರ್ನಾಟಕದ ಜನರ ಆಕಾಂಕ್ಷೆಗಳನ್ನೆ ಹಾಸ್ಯ ಮಾಡುವಂತೆ ಒಂದು ಸಾವಿರ ರೂ. ಚಿಲ್ಲರೆ ಹಣವನ್ನು ಕೊಟ್ಟು ನಮ್ಮ ಭಾಗದ ಜನರಿಗೆ ಅಪಮಾನ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ರೈಲ್ವೇ ವಿಭಾಗ ಬಂದರೆ ನಮ್ಮ ಇಡೀ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತಿತ್ತು, ಸಾರಿಗೆ ಹಬ್ ಆಗುವ ಅವಕಾಶವಿತ್ತು, ಅದರಿಂದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿತ್ತು. ಇದು ನಮ್ಮ ಭಾಗದ ಜನರ ಪಾಲಿಗೆ ವರದಾನವಾಗುತ್ತಿತ್ತು. ಅದು ಅಂದು ಖರ್ಗೆ ಸಾಹೇಬರ ದೂರದೃಷ್ಠಿಯ ಫಲದ ಚಿನ್ನದಂತ ಯೋಜನೆ ಎಂದು ಅವರು ತಿಳಿಸಿದ್ದಾರೆ.

ಒಂದು ದೂರದರ್ಶನ ಕೇಂದ್ರವನ್ನು ಉಳಿಸಿಕೊಳ್ಳಲು ಆಗದ ಕಲಬುರಗಿ ಸಂಸದ ಉಮೇಶ್ ಜಾಧವ್, ರೇಲ್ವೇ ವಿಭಾಗ ಕಾರ್ಯರೂಪಕ್ಕೆ ತರಲು ಸಾಧ್ಯವೇ ? ಮೋದಿಯವರ ಮನ್ ಕಿ ಬಾತ್ ಕೇಳುವುದೇ ನಿಮ್ಮ ದೊಡ್ಡ ಸಾಧನೆ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News