ಸಮವಸ್ತ್ರ ವಿರೋಧಿಸುವವರು ದೇಶ ಬಿಟ್ಟು ಹೋಗಿ: ಕಲ್ಲಡ್ಕ ಪ್ರಭಾಕರ್ ಭಟ್

Update: 2023-12-24 14:33 GMT

ಕಲ್ಲಡ್ಕ ಪ್ರಭಾಕರ್ ಭಟ್

ಮಂಡ್ಯ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ವಿರೋಧಿಸುವವರು ನಮ್ಮ ದೇಶ ಬಿಟ್ಟು ಹೋಗಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ರವಿವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಅವರು, ʼನೀವು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಮ್ಮ ಮಕ್ಕಳು ಕೇಸರು ಶಾಲು, ಟೋಪಿ ಧರಿಸಿ ಬರುತ್ತಾರೆ. ನೀವು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರೆ ನಾವು ಜೈಶ್ರೀರಾಂ ಎಂದು ಕೂಗುತ್ತೇವೆʼ ಎಂದು ಅವರು ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಸರಕಾರ ಹೇಳಿರುವುದು ಸರಿಯಲ್ಲ. ಹಿಜಾಬ್ ವಿರುದ್ಧ ಇರಾನ್, ಇರಾಕ್‍ನ ಮುಸ್ಲಿಂ ಮಹಿಳೆಯರೇ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್‍ಗೆ ಮತ್ತೆ ಅವಕಾಶ ನೀಡುವುದು ಬೇಡ ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಸರಕಾರ ಹಿಜಾಬ್ ಮತ್ತೆ ವಾಪಸ್ ತರುತ್ತೇವೆ ಅಂತಿದ್ದಾರೆ. ಶಾಲಾ ಮಕ್ಕಳಲ್ಲಿ ಮತ್ತೆ ಪ್ರತ್ಯೇಕತೆ ವಿಷಬೀಜ ಬಿತ್ತುತ್ತಿದ್ದಾರೆ. ನೀವೇ ಸಮವಸ್ತ್ರ ಮಾಡಿದ್ದೀರಾ. ಮತ್ತೆ ನೀವೇ ಪ್ರತ್ಯೇಕ ಮಾಡುತ್ತಿದ್ದೀರಾ. ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡುವ ಎಂದು ಅವರು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ಹಿಂಪಡೆಯುವ ಹೇಳಿಕೆಯ ನಂತರ ತಾನು ಮತ್ತೆ ಕಾಲೇಜಿಗೆ ಹೋಗುತ್ತೇನೆ ಎಂದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ವಿರುದ್ಧ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದರು.

“ಮುಸ್ಕಾನ್, ನೀನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು. ಈ ದೇಶದಲ್ಲಿ ಹೇಳಬೇಕಿರೋದು ರಾಮ ರಾಮ ಎಂದು. ಅಲ್ಲಾಹು ಅಕ್ಬರ್ ಎನ್ನಬೇಕಾದರೆ ನೀವು ಮುಸಲ್ಮಾನ ದೇಶಕ್ಕೆ ಹೋಗಿ” ಎಂದು ಹೇಳಿದರು.

ಸಂಕೀರ್ತನಾ ಯಾತ್ರೆ ಅಂಗವಾಗಿ ಶ್ರೀರಂಗಪಟ್ಟಣದ ಹೊರವಲಯದ ನಿಮಿಷಾಂಭ ದೇಗುಲಿ ಬಳಿಯ ಆಂಜನೇಯಸ್ವಾಮಿ ದೇವಾಲಯದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಹನುಮಮಾಲೆಧಾರಿಗಳು ಪಾಲ್ಗೊಂಡಿದ್ದರು.

ಯಾತ್ರೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿತ್ತು. ಡ್ರೋಣ್ ಮೂಲಕ ಚಿತ್ರೀಕರಣ ಮಾಡಲಾಯಿತು. ಸುಮಾರು ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಾಮಿಯಾ ಮಸೀದಿಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News