ಬಿಜೆಪಿ - ಜೆಡಿಎಸ್ ಮೈತ್ರಿ ಖಚಿತ. ವಿಲೀನದ ಪ್ರಸ್ತಾವ ಇದೆಯೇ ?

Update: 2023-07-20 13:59 GMT
Editor : Althaf | Byline : ಆರ್. ಜೀವಿ

ಆರ್. ಜೀವಿ

ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾತ್ರ ಮಾಡಿಕೊಳ್ಳೋದು ಪಕ್ಕಾ ಆಗಿದೆಯೇ ? ಕುಮಾರಸ್ವಾಮಿ ರಾಜ್ಯದ ವಿಪಕ್ಷ ನಾಯಕ ಆಗ್ತಾರಾ ? ಜೆಡಿಎಸ್ ಬಿಜೆಪಿ ಜೊತೆ ವಿಲೀನ ಆಗುತ್ತಾ ? ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸೇರ್ತಾರಾ ?

ಬಿಜೆಪಿಯನ್ನು ಕಟ್ಟಿಹಾಕಲು ವಿಪಕ್ಷ ನಾಯಕರು ಬೆಂಗಳೂರಿನಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದ್ರೆ, ದಳಪತಿ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ಹೊರಟು ನಿಂತಿದ್ದಾರೆ. ಅಂದ್ರೆ ಅವರು ಬೆಂಗಳೂರಿನ ವಿಪಕ್ಷ ಸಭೆಯಲ್ಲಿ ಭಾಗವಹಿಸಲ್ಲ. ಬಿಜೆಪಿ, ಜೆಡಿಎಸ್ ದೋಸ್ತಿ ಆಗೋದು ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿ ಈ ಮೈತ್ರಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಇಂದು ಅಥವಾ ನಾಳೆ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, NDA ಸಭೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಅಲ್ಲಿಗೆ ಮಾಜಿ ಸಿಎಂ ಕುಮಾರಸ್ವಾಮಿ, ಕಮಲ ಪಕ್ಷದ ಜೊತೆ ಹೋಗೋದು ಪಕ್ಕಾ. ಅಧಿವೇಶನ ಶುರುವಾಗಿ ವಾರ ಎರಡು ಮುಗಿದರೂ ಬಿಜೆಪಿ ಏಕೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿರಲಿಲ್ಲ ಎಂಬುದಕ್ಕೂ ಈಗ ಉತ್ತರ ಸ್ಪಷ್ಟವಾಗಿದೆ.

ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಎರಡನೇ ಮಹತ್ವದ ಸಭೆ ನಡೆಸುತ್ತಿವೆ. ಇದರ ಮಧ್ಯೆ ಬಿಜೆಪಿ ಸಹ ತನ್ನ ಬಲ ಹೆಚ್ಚಿಸಿಕೊಳ್ಳಲು ಜುಲೈ 18ರಂದು ಎನ್ ಡಿ ಎ ಸಭೆ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದ ಬಳಿಕ ಮೈತ್ರಿಕೂಟದ ಪಕ್ಷಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಬಿಜೆಪಿ ಈಗ ಎನ್‌ಡಿಎ ಮೈತ್ರಿಕೂಟವನ್ನ ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಎನ್‌ಡಿಎ ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಚರ್ಚೆ ನಡೆದಿರುವುದು ಇದೇ ಹಿನ್ನೆಲೆಯಲ್ಲಿ. ಈಗಾಗಲೇ ಇದಕ್ಕೆ ರಾಷ್ಟ್ರೀಯ ನಾಯಕರು ತಾತ್ವಿಕ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.​

ಬೆಂಗಳೂರಿನ ವಿಪಕ್ಷಗಳ ಸಭೆಗೆ ಜೆಡಿಎಸ್ ಭಾಗವಹಿಸುತ್ತಿಲ್ಲ. ​ ಹೆಚ್‌ಡಿ ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಈ ಮೈತ್ರಿ ಬಹುತೇಕ ಫಿಕ್ಸ್ ಆಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಮಹಾರಾಷ್ಟ್ರದ ಶಿವಸೇನೆಯ ಏಕನಾಥ್‌ ಶಿಂಧೆ ಬಣ, ಎನ್‌ಸಿಪಿಯ ಅಜಿತ್‌ ಪವಾರ್‌ ಬಣ ಎನ್‌ಡಿಎ ಕಡೆ ವಾಲಿದ್ದಾರೆ. ಹಳೇ ಮಿತ್ರಪಕ್ಷಗಳಾದ ಶಿರೋಮಣಿ ಅಖಾಲಿದಳ, ತೆಲುಗುದೇಶಂ ಪಾರ್ಟಿಗೂ ನಡ್ಡಾ ಆಹ್ವಾನ ಕಳಿಸಿದ್ದಾರೆ. ಇನ್ನು, ಹೊಸ ಪಕ್ಷ ಪವನ್‌ ಕಲ್ಯಾಣ್‌ರ ಜನಸೇನಾ ಕೂಡಾ ಎನ್‌ಡಿಎ ಜತೆ ಗುರುತಿಸಿಕೊಂಡಿದೆ. ಆದ್ರೆ, ಜೆಡಿಎಸ್‌ ನಾಯಕ ಕುಮಾರಸ್ವಾಮಿ ಈವರೆಗೆ ತಮ್ಮ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.. ಆದ್ರೆ, ರಾಜ್ಯ ಬಿಜೆಪಿ ನಾಯಕರು ಒಬ್ಬೊಬ್ಬರೇ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ, ಸಿ ಟಿ ರವಿ , ಶೋಭಾ ಕರಂದ್ಲಾಜೆ ಮತ್ತಿತರ ನಾಯಕರು ಜೆಡಿಎಸ್ ಜೊತೆ ವರಿಷ್ಠರು ಮಾತುಕತೆ ನಡೆಸಿರಬಹುದು ಎಂದೇ ಹೇಳುತ್ತಿದ್ದಾರೆ.

ಅಷ್ಟಕ್ಕೂ ಕುಮಾರಸ್ವಾಮಿ ಭಾರೀ ಲೆಕ್ಕಾಚಾರ ಮಾಡಿಯೇ ಇಂತಹದೊಂದು ಹೆಜ್ಜೆ ಇಡುತ್ತಿದ್ದಾರೆ. ಬಿಜೆಪಿ ಹಾಗು ಜೆಡಿಎಸ್ ಎರಡೂ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿವೆ. ಈ ಎರಡೂ ಪಕ್ಷಗಳು ಏಕಾಂಗಿಯಾಗಿ ಹೋದ್ರೆ ಸ್ಪಷ್ಟ ಬಹುಮತ ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ಕಷ್ಟ. ಬಿಜೆಪಿ ಜೆಡಿಎಸ್ ಸೇರಿದ್ರೆ ಚುನಾವಣೆಯಲ್ಲಿ ಮತ್ತಷ್ಟು ಬಲ ಸಿಗಲಿದೆ, 2 ಪಕ್ಷಗಳು ಮೈತ್ರಿಯಾದ್ರೆ ಕಾಂಗ್ರೆಸ್ ಅನ್ನು ​ ಎದುರಿಸುವುದು ಸುಲಭವಾಗಲಿದೆ ಅನ್ನೋದು ಬಿಜೆಪಿ ಹಾಗು ಕುಮಾರಸ್ವಾಮಿ ಇಬ್ಬರದೂ ಲೆಕ್ಕಾಚಾರ.

ಹಳೇ ಮೈಸೂರು ಭಾಗದಲ್ಲಿ 3-4 ಸ್ಥಾನ ಹೇಗಾದರೂ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಕುಮಾರಸ್ವಾಮಿ ತಿಂಗಳ ಹಿಂದೆ ಬಿಜೆಪಿ ನಾಯಕರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದೀಗ ಮತ್ತೆ ದೆಹಲಿ ಬಿಜೆಪಿ ನಾಯಕರನ್ನ ಹೆಚ್‌ಡಿಕೆ ಭೇಟಿಯಾಗುತ್ತಿರುವುದು ತೀವ್ರು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ನಾಯಕರಿಗೆ ಇದರಲ್ಲಿ ಹೆಚ್ಚಿನ ಪಾತ್ರವಿಲ್ಲ. ಅವರು ಎಲ್ಲವನ್ನೂ ವರಿಷ್ಠರಿಗೆ ಬಿಟ್ಟು ಏನಾಗಲಿದೆ ಎಂದು ಕಾದು ನೋಡುತ್ತಿದ್ದಾರೆ.

ಜೆಡಿಎಸ್ ಪ್ರಾಬಲ್ಯ ಜಾಸ್ತಿ ಇರೋದು ಹಳೇ ಮೈಸೂರು ಭಾಗದಲ್ಲಿ . ಹೀಗಾಗಿ ಈ ಭಾಗದ ಲೋಕಸಭಾ ಕ್ಷೇತ್ರಗಳನ್ನೇ ತನಗೆ ಬಿಟ್ಟುಕೊಡುವಂತೆ ಕೇಳುವುದು ಬಹುತೇಕ ಖಚಿತ. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಆದ್ರೆ, ಇಲ್ಲೇ ಇರೋದು ಪ್ರಾಬ್ಲಮ್. ಜೆಡಿಎಸ್‌ ಕೇಳಲಿರುವ ಈ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿಯ ಹಾಲಿ ಸಂಸದರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರಿನಲ್ಲೂ ಗೆದ್ದಿದೆ. ಮೈಸೂರಿನ ಪ್ರತಾಪ್‌ ಸಿಂಹ ಮತ್ತು ಕೋಲಾರದ ಮುನಿಸ್ವಾಮಿ ಅವರು ಮತ್ತೊಮ್ಮೆ ಸ್ಪರ್ಧಿಸಲು ಮುಂದಾಗಿದ್ದರೆ, ಚಿಕ್ಕಬಳ್ಳಾಪುರದ ಬಿ.ಎನ್‌.ಬಚ್ಚೇಗೌಡ ಮತ್ತು ತುಮಕೂರಿನ ಜಿಎಸ್‌ ಬಸವರಾಜು ವಯಸ್ಸಿನ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ.

ಈಗ ಮೈಸೂರು, ಕೋಲಾರದ ಹಾಲಿ ಬಿಜೆಪಿ ಸಂಸದರು ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಹಲವು ಬಿಜೆಪಿ ಮುಖಂಡರು ಈಗ ಲೋಕಸಭಾ ಟಿಕೆಟ್ ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಗೆದ್ದವರಲ್ಲೂ ಕೆಲವರಿಗೆ ಎಂಪಿ ಸ್ಥಾನದ ಮೇಲೆ ಕಣ್ಣಿದೆ. ರಾಜ್ಯ ಬಿಜೆಪಿ ನಾಯಕರು ಈಗ ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಎಂಪಿ ಎಲೆಕ್ಷನ್ ಗೆ ಹೇಗೋ ಸುಧಾರಿಸಿಕೊಳ್ಳಬಹುದು. ಆಮೇಲೆ ಜೆಡಿಎಸ್ ಜೊತೆ ಹೋದ್ರೆ ಎಲ್ಲೆಲ್ಲಿ ತಮ್ಮ ಪ್ರಾಬಲ್ಯಕ್ಕೆ ಧಕ್ಕೆ ಬರಲಿದೆ ಎಂಬ ಕಳವಳ ರಾಜ್ಯ ಬಿಜೆಪಿ ನಾಯಕರಲ್ಲಿದೆ. ಹಾಗಾಗಿ ಮೈತ್ರಿಗಿಂತಲೂ ಜೆಡಿಎಸ್ ಅನ್ನು ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳುವ ಪ್ರಸ್ತಾವ ಇಡಬೇಕು ಎಂಬುದು ರಾಜ್ಯ ಬಿಜೆಪಿ ನಾಯಕರ ಬಯಕೆ. ಆದರೆ ಕುಮಾರಸ್ವಾಮಿ ನೇರವಾಗಿ ವರಿಷ್ಠರ ಜೊತೆ ಮಾತಾಡುತ್ತಿದ್ದಾರೆ. ವರಿಷ್ಠರು ರಾಜ್ಯ ಬಿಜೆಪಿ ನಾಯಕರಲ್ಲಿ ಈ ಬಗ್ಗೆ ಯಾವುದೇ ಸಮಾಲೋಚನೆ ಮಾಡುವ ಹಾಗೆ ಕಾಣುತ್ತಿಲ್ಲ. ಯಡಿಯೂರಪ್ಪ ಅವರಿಂದಲೂ ಸಲಹೆ ಪಡೆದಿಲ್ಲ ಎಂಬ ವರದಿಗಳಿವೆ.

ಇನ್ನು, ವಿಲೀನ ಆಗಿ ಬಿಜೆಪಿಯೊಳಗೆ ಹೋದ್ರೆ ಮತ್ತೆ ಪಕ್ಷದ ಶಿಸ್ತು ಪಾಲಿಸಬೇಕು, ಚೌಕಾಸಿಯ ಅವಕಾಶ ಕೈತಪ್ಪುತ್ತದೆ ಎಂಬುದು ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅವರು ಮೈತ್ರಿಗೆ ಮಾತ್ರ ಒಪ್ಪಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಜೊತೆ ಹೋಗೋದೇ ಬೆಟರ್ ಅಂತ ಕುಮಾರಸ್ವಾಮಿ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದವರು. ಹಾಗಾಗಿ ಈಗ ಮತ್ತೊಮ್ಮೆ ಬಿಜೆಪಿ ಹೋಗಲು ಅವರು ಸಜ್ಜಾಗಿದ್ದಾರೆ.

ಈ ಮೈತ್ರಿ ಆಗಿ ಕುಮಾರಸ್ವಾಮಿಯೇ ವಿಪಕ್ಷ ನಾಯಕರಾದರೆ ಕಾಂಗ್ರೆಸ್ ಸರಕಾರ ಸದನದಲ್ಲಿ ಒಂದು ಪ್ರಬಲ ವಿಪಕ್ಷ ಕೂಟವನ್ನು ಎದುರಿಸಲು ಸಜ್ಜಾಗಬೇಕು. ಆದರೆ ಕಾಂಗ್ರೆಸ್ ಗೆ ಜೆಡಿಎಸ್ ವಿರುದ್ಧ ಇನ್ನಷ್ಟು ಆರೋಪ ಮಾಡಲು ಈ ಮೈತ್ರಿ ಸರಕು ಒದಗಿಸಲಿದೆ. BJP ಬಿ ಟೀಂ JDS ಎಂದು ಕಾಂಗ್ರೆಸ್ ನಾಯಕರು ಈ ಹಿಂದೆ ಮಾಡುತ್ತಲೇ ಬಂದ ಆರೋಪವನ್ನು ಈಗ ಆ ಪಕ್ಷ ಮತ್ತೆ ಸಾಬೀತು ಮಾಡುತ್ತಿದೆ ಎಂದು ಹೇಳಬಹುದು.

"ನಾವು ಅನೇಕ ಬಾರಿ ಹೇಳಿದ್ದೆವು. ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ. ಈಗ ಕುಮಾರಸ್ವಾಮಿ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. JDS ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ.‌ ಕೋಮುವಾದಿ ಪಕ್ಷ BJP ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ JDSಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ.‌ ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎನ್ನುತ್ತದೆ. JDS ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ " ಹೀಗಂತಾ ಟ್ವೀಟ್ ಮಾಡಿ ಟೀಕಿಸಿರೋ ದಿನೇಶ್ ಗುಂಡೂರಾವ್, " ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ " ಅಂತಾ ವ್ಯಂಗ್ಯವಾಡಿದ್ದಾರೆ.

ಇನ್ನು ಜೆಡಿಎಸ್ ಬಿಜೆಪಿ ಜೊತೆ ಹೋದರೆ ಆ ಪಕ್ಷದಲ್ಲಿರುವ ಅಲ್ಪಸಂಖ್ಯಾತ ನಾಯಕರು ಹೊಸ ಇಕ್ಕಟ್ಟಿಗೆ ಸಿಲುಕುತ್ತಾರೆ. ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರ ನಡೆ ಏನಿರಲಿದೆ ಎಂದು ಕಾದು ನೋಡಬೇಕು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಣ್ಣನೇ ಮುಂದಿನ ಸಿಎಂ ಆಗ್ತಾರೆ, ಬಿಜೆಪಿ ಜೊತೆ ನಾವು ಹೋಗೋ ಸಾಧ್ಯತೆಯೇ ಇಲ್ಲ ಎಂದು ಭಾಷಣ ಮಾಡಿದ್ದ ಜೆಡಿಎಸ್ ನ ಮುಸಲ್ಮಾನ ನಾಯಕರು ಬಿಜೆಪಿ ಜೊತೆ ಹೋಗೋದನ್ನು ಸಮರ್ಥಿಸಿಕೊಳ್ಳೋದು ಅವರಿಗೆ ಬಹಳ ಕಷ್ಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News