BJP ಸಂಸದ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದ ದಿಲ್ಲಿ ಪೊಲೀಸರು

Update: 2023-07-14 16:17 GMT

- ಆರ್. ಜೀವಿ

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗು ಪಕ್ಷ ಮುಖ ಮುಚ್ಚಿಕೊಳ್ಳೋದು ಹೇಗೆ ಎಂಬ ತೀವ್ರ ಮುಜುಗರದಲ್ಲಿದೆ. ಯಾವ ವ್ಯಕ್ತಿಯನ್ನು ಇಡೀ ದೇಶ ವಿರೋಧಿಸುತ್ತಿರುವಾಗಲೂ ತಿಂಗಳುಗಳಿಂದ ರಕ್ಷಿಸಿಕೊಂಡು, ಆತನನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡು ಬಂದಿದ್ದರೋ ಆತ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದು ಹೌದು, ಆತ ಶಿಕ್ಷೆಗೆ ಅರ್ಹ ಎಂದು ಸ್ವತಃ ಅವರದೇ ಪೊಲೀಸರು ದಾಖಲೆಯಲ್ಲಿ ಹೇಳಿದ್ದಾರೆ.

ಯಾವ ವ್ಯಕ್ತಿಯನ್ನು ರಕ್ಷಿಸಲು ಈ ದೇಶದ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳನ್ನು ದಿಲ್ಲಿಯ ಬೀದಿಯಲ್ಲಿ ಈ ಬಿಜೆಪಿ ಸರಕಾರ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತೋ, ಅದೇ ವ್ಯಕ್ತಿ ಇವತ್ತು ಹಗಲು ರಾತ್ರಿ ಅದೇ ಸರಕಾರದ ಭಟ್ಟಂಗಿತನ ಮಾಡುವ ಚಾನಲ್ ನ ಮಹಿಳಾ ಪತ್ರಕರ್ತೆಯ ಮೈಕ್ ಕಿತ್ತು ಹೋಗುವಂತೆ ಮಾಡಿ ಆಕೆಗೆ " ಚುಪ್" ಎಂದು ಅಬ್ಬರಿಸಿದ್ದನ್ನು ಇಡೀ ವಿಶ್ವವೇ ನೋಡುತ್ತಿದೆ.

ಇಷ್ಟಾದ ಮೇಲಾದರೂ ಈ ಸರಕಾರ ಪಾಠ ಕಲಿಯಿತೇ ? ಇನ್ನೂ ಹಾಗೆ ಕಾಣುತ್ತಿಲ್ಲ. ಮಹಿಳಾ ಕುಸ್ತಿಪಟುಗಳು ತಮ್ಮ ಪಕ್ಷದ ಸಂಸದನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ತಿಂಗಳುಗಟ್ಟಲೆ ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ, ಕಣ್ಣೀರು ಹಾಕಿದರೂ ಆತನ ರಕ್ಷಣೆಗೆ ನಿಂತ ಮೋದಿ ಮತ್ತವರ ಸರ್ಕಾರಕ್ಕೆ ಈಗಲಾದರೂ ನಾಚಿಕೆಯಾಗಬೇಕಿತ್ತು.

ಇಡೀ ದೇಶದಲ್ಲಿ ಈ ಬಿಜೆಪಿ ಸಂಸದನ ವಿರುದ್ಧ ತೀವ್ರ ವಿರೋಧ ಹಾಗು ಆಕ್ರೋಶ ವ್ಯಕ್ತವಾಗಿದ್ದರೂ, ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರೂ, ಮೋದಿ ಮತ್ತವರ ಬಿಜೆಪಿ ಈತನನ್ನು ರಕ್ಷಿಸುವುದೊಂದೇ ತನಗಿರುವ ಏಕೈಕ ಜವಾಬ್ದಾರಿ ಎಂಬಂತೆ ವರ್ತಿಸಿತು.

ಈಗ ದೆಹಲಿಯ ಅಮಿತ್ ಶಾ ಅವರ ಪೊಲೀಸರೇ ಈತ ಲೈಂಗಿಕ ಕಿರುಕುಳ ನೀಡಿರೋದು ನಿಜ, ಶಿಕ್ಷೆಗೆ ಅರ್ಹ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಆದರೂ ಈತನ ಬಂಧನವಾಗಿಲ್ಲ ಎಂದ ಮೇಲೆ ಈ ಸರ್ಕಾರದ ನಿಲುವೇನು ? ಆತನನ್ನು ತಕ್ಷಣ ಬಿಜೆಪಿಯಿಂದ ಅಮಾನತು ಮಾಡಿಲ್ಲ ಏಕೆ ?

ಒಂದು ಪ್ರಶ್ನೆ ಕೇಳಿದರೆ ಪ್ರಾಣಬೆದರಿಕೆ ಒಡ್ಡುವ, ದೇಶದ್ರೋಹದ ಕೇಸು ಹಾಕುವ, ಜೈಲಿಗೆ ಅಟ್ಟುವ ಇವರಿಗೆ ತಮ್ಮದೇ ಪಕ್ಷದ ಸಂಸದನೊಬ್ಬ ಇಂಥ ಹೇಸಿಗೆಯ ಕೆಲಸ ಮಾಡಿದ್ದಾನೆ ಎಂದು ಗೊತ್ತಿದ್ದರೂ, ಕಡೆಗೆ ಅದನ್ನು ಪೊಲೀಸರೇ ತನಿಖೆ ನಡೆಸಿ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದರೂ ಅವನ ಬಂಧನವಾಗುತ್ತಿಲ್ಲ ಎಂದರೆ ಈ ಸರ್ಕಾರ ಜನರಿಗೆ ಕೊಡುತ್ತಿರುವ ಸಂದೇಶವೇನು? ಇವರು ಶ್ವೇತಭವನದಲ್ಲಿ ನಿಂತು ಪ್ರಜಾಪ್ರಭುತ್ವ ಎಂದು 12 ಸಲ ಹೇಳಿದ್ದು ಎಂಥ ಲೊಳಲೊಟ್ಟೆ ?

ಭಾರತೀಯ ಕುಸ್ತಿ ಫೆಡರೇಷನ್ ನ ಅಧ್ಯಕ್ಷ ಹಾಗು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಲ್ಲಿಸಿರೋ ಮೊದಲ ಸ್ಪಷ್ಟ ದೋಷಾರೋಪಣೆಯಲ್ಲಿ, ಕುಸ್ತಿಪಟುಗಳಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿರೋದು ನಿಜ ಎಂದು ದೆಹಲಿ ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.

ಬ್ರಿಜ್ ಭೂಷಣ್ ಕೃತ್ಯ ಶಿಕ್ಷೆಗೆ ಅರ್ಹ ಎಂದಿರೋ ಪೊಲೀಸರು, ಈವರೆಗಿನ ತನಿಖೆ ಆಧರಿಸಿ, ಆರು ಪ್ರಮುಖ ಕುಸ್ತಿಪಟುಗಳು ಮಾಡಿರೋ ಆರೋಪಗಳಿಗಾಗಿ ಬ್ರಿಜ್ ಭೂಷಣ್ ವಿಚಾರಣೆಗೆ ಮತ್ತು ಲೈಂಗಿಕ ಕಿರುಕುಳ ಅಪರಾಧಕ್ಕೆ ನೀಡಲಾಗುವ ಶಿಕ್ಷೆಗೆ ಅರ್ಹ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರೋದು ವರದಿಯಾಗಿದೆ.

ಜೂನ್ 13ರ ಆರೋಪಪಟ್ಟಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 354 (ಮಹಿಳೆಯರ ಘನತೆಗೆ ಧಕ್ಕೆ), 354ಎ (ಲೈಂಗಿಕ ಕಿರುಕುಳ) ಹಾಗೂ 354ಡಿ (ಹಿಂಬಾಲಿಸುವುದು) ಅಡಿ ಆರೋಪ ಹೊರಿಸಿರೋ ದೆಹಲಿ ಪೊಲೀಸರು, ಒಂದು ಪ್ರಕರಣದಲ್ಲಿ, ಸಿಂಗ್‌ ಲೈಂಗಿಕ ದೌರ್ಜನ್ಯ ಪುನರಾವರ್ತನೆಯಾಗಿತ್ತು ಮತ್ತು ಮುಂದುವರಿದಿತ್ತು ಎಂದು ಹೇಳಿದ್ದಾರೆ.

ಆರು ಪ್ರಕರಣಗಳಲ್ಲಿ ಎರಡನ್ನು - ಸೆಕ್ಷನ್ 354, 354ಎ ಮತ್ತು 354ಡಿ ಅಡಿಯಲ್ಲಿ ಹಾಗೂ ನಾಲ್ಕು ಪ್ರಕರಣಗಳನ್ನು - ಸೆಕ್ಷನ್ 354 ಮತ್ತು 354ಎ ಅಡಿ ದಾಖಲಿಸಲಾಗಿದೆ. ಈ ಅಪರಾಧಗಳಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಕುಸ್ತಿಪಟುಗಳು ನೀಡಿರೋ ದೂರುಗಳಲ್ಲಿ ಲೈಂಗಿಕ ಕಿರುಕುಳದ 15 ಘಟನೆಗಳು ಉಲ್ಲೇಖಗೊಂಡಿವೆ. ಅನುಚಿತ ಸ್ಪರ್ಶದ 10 ಘಟನೆಗಳಲ್ಲದೆ, ಹಿಂಬಾಲಿಸುವಿಕೆ, ಬೆದರಿಕೆಯ ಘಟನೆಗಳೂ ಇವುಗಳಲ್ಲಿ ಸೇರಿವೆ.

ಈಗ ಪ್ರಶ್ನೆಯಿರೋದು ಇಷ್ಟೆಲ್ಲ ಆದ ಮೇಲೂ ತಕ್ಷಣ ಆ ಬಿಜೆಪಿ ಸಂಸದನ ಬಂಧನವೇಕೆ ಆಗಿಲ್ಲ ಎಂಬುದು. ಬಿಜೆಪಿಯಲ್ಲದೆ ಬೇರೆ ಯಾವುದೇ ಪಕ್ಷದ ಸಂಸದನ ವಿರುದ್ಧ ಇಂತಹದೊಂದು ಆರೋಪ ಕೇಳಿ ಬಂದಿದ್ದರೆ ಕೂಡಲೇ ಆತನ ಬಂಧನವಾಗುತ್ತಿರಲಿಲ್ಲವೇ ? ಇಷ್ಟೆಲ್ಲ ಆದ ಮೇಲೂ ಬ್ರಿಜ್ ಭೂಷಣ್ ನ ದರ್ಪವಿನ್ನೂ ತಗ್ಗಿಲ್ಲ ಎಂದ ಮೇಲೆ ಆತನಿಗಿರುವ ಬೆಂಬಲ ಎಂಥದಾಗಿರಬಹುದು ?

ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಬಗ್ಗೆ ಪತ್ರಕರ್ತರು ಕೇಳಿದರೆ ಕೆಂಡಾಮಂಡಲವಾಗುವ ಆತ, ವರದಿಗಾರರ ಮೈಕ್ ಮುರಿಯುವಷ್ಟು ದಬ್ಬಾಳಿಕೆ ಮಾಡಬಲ್ಲ ಎಂದಾದರೆ, ಸಂಸದನ ರೂಪದಲ್ಲಿರುವವನ ಗೂಂಡಾಗಿರಿಗೆ ಏನು ಕಾರಣ ? ವರದಿಗಾರರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಿದರೆ, ಸಿಟ್ಟಿಗೆದ್ದ ಸಿಂಗ್, " ನಾನೇಕೆ ರಾಜೀನಾಮೆ ನೀಡಲಿ? ನೀವೇಕೆ ರಾಜೀನಾಮೆ ಕೇಳುತ್ತಿದ್ದೀರಿ ? " ಎಂದು ಮರುಪ್ರಶ್ನೆ ಹಾಕುವುದು ನೋಡಿದರೆ, ಇದಕ್ಕಿಂತ ಭಂಡತನ ಬೇರೆ ಇರಲಾರದು.

ಸಂಸದ ಎದುರಿಸುತ್ತಿರುವ ಗಂಭೀರ ಆರೋಪಗಳ ಬಗ್ಗೆ ವರದಿಗಾರರು ಒತ್ತಿ ಹೇಳಿದರೆ " ಚುಪ್ " ಎಂದು ಅವರನ್ನೇ ಬಾಯಿಮುಚ್ಚಿಸುವ ದರ್ಪ. ಉತ್ತರ ಪಡೆಯಲು ವರದಿಗಾರ್ತಿ ಸಿಂಗ್ ಕಾರಿನವರೆಗೂ ಹಿಂಬಾಲಿಸಿದಾಗ ಮೈಕ್ ಮುರಿಯುವ ಮಟ್ಟಿನ ದಬ್ಬಾಳಿಕೆ. ಈ ವರ್ತನೆಗಾಗಿ ಆರೋಪಿ ಸಂಸದನನ್ನು ಗೂಂಡಾ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕರೆದಿದ್ದಾರೆ.

ಕ್ಯಾಮೆರಾ ಎದುರಲ್ಲಿಯೇ ಪ್ರತಿಷ್ಠಿತ ಚಾನಲ್ ಒಂದರ ವರದಿಗಾರ್ತಿಯೊಬ್ಬರ ಜೊತೆ ಈ ರೀತಿ ವರ್ತಿಸುವ ಭಂಡ ಧೈರ್ಯವಿರುವಾಗ, ಕ್ಯಾಮರಾ ಇಲ್ಲದೇ ಇರುವಲ್ಲಿ ಮಹಿಳೆಯರೊಂದಿಗೆ ಆತ ಹೇಗೆ ವರ್ತಿಸುತ್ತಾನೆಂದು ಊಹಿಸಿ ನೋಡಿ ! ಈ ಮನುಷ್ಯ ಇರಬೇಕಾಗಿರೋದು ಜೈಲಿನಲ್ಲಿ, ಸಂಸತ್ತಿನಲ್ಲಲ್ಲ ಎಂದಿದ್ದಾರೆ ಸ್ವಾತಿ ಮಲಿವಾಲ್.

ನೋಡುವ ಎಲ್ಲರ ಕಣ್ಣಿಗೂ ಆತ ಎಂಥವನೆಂಬುದು ಕಾಣಿಸುತ್ತಿರುವಾಗ, ತಾವು ಪ್ರಜಾಪ್ರಭುತ್ವದ ರಕ್ಷಕರೆಂಬಂತೆ ತೋರಿಸಿಕೊಳ್ಳುವವರಿಗೆ ಮಾತ್ರ ಇದಾವುದೂ ಕಾಣಿಸುತ್ತಲೇ ಇಲ್ಲ. ಎಲ್ಲಿ ಬೇಕಾಗಿಲ್ಲವೊ ಅಲ್ಲೆಲ್ಲ ಮಾತನಾಡುವ ಪ್ರಧಾನಿ, ಎಲ್ಲಿ ನಿಜವಾಗಿಯೂ ಮಾತಾಡಬೇಕಿದೆಯೊ ಅಲ್ಲಿ ಮಹಾ ಮೌನಿಯಾಗಿಬಿಡುವುದು ವಿಪರ್ಯಾಸ.

ಇನ್ನು, ಟೈಮ್ಸ್ ನೌ ಚಾನಲ್ ನ ವರದಿಗಾರ್ತಿ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಬ್ರಿಜ್ ಭೂಷಣ್. ಇದು ಅತ್ಯಂತ ಖಂಡನೀಯ. ಆದರೆ ಈ ಟೈಮ್ಸ್ ನೌ ಈ ದೇಶದಲ್ಲಿ ಅದೆಷ್ಟೋ ಮಹಿಳೆಯರ ವಿರುದ್ಧ ದಾಳಿ, ಟ್ರೋಲಿಂಗ್ ನಡೆದಾಗ ಪ್ರಧಾನಿ ಮೋದಿಯನ್ನು, ಅವರ ಸರಕಾರವನ್ನು ಪ್ರಶ್ನಿಸಿತ್ತೇ ? ಸ್ವತಃ ಈ ಟೈಮ್ಸ್ ನೌ ಚಾನಲ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಹೇಗೆ ಆಕೆಯೇ ಆರೋಪಿ ಎಂದು ಘೋಷಿಸಿ, ಆಕೆಯೇ ಅಪರಾಧಿ ಎಂದು ತೀರ್ಪು ಕೂಡ ನೀಡಿ ಆಕೆಗೆ ಚಿತ್ರಹಿಂಸೆ ನೀಡಿತು ?

ತಿಂಗಳುಗಟ್ಟಲೆ ಆ ಹೆಣ್ಣುಮಕ್ಕಳು ಹೋರಾಡುತ್ತಿರುವಾಗ ಅಲ್ಲೊಂದು ಇಲ್ಲೊಂದು ಪ್ರಶ್ನೆ ಕೇಳಿ ಉಳಿದಂತೆ ದಿನವಿಡೀ ಸರಕಾರದ ಭಟ್ಟಂಗಿತನ ಮಾಡುತ್ತಾ, ಈಗ ಎಲ್ಲ ಮುಗಿದ ಮೇಲೆ ಬಂದು ದಿಢೀರನೇ ಪತ್ರಕರ್ತರಾಗಿಬಿಟ್ಟರೆ ಬ್ರಿಜ್ ಭೂಷಣ್ ಗೆ ಅಚ್ಚರಿಯಾಗಿರಬಹುದು. ಅರೇ... ಟೈಮ್ಸ್ ನೌ ನವರು ಯಾಕೆ ನನ್ನಲ್ಲಿ ಪ್ರಶ್ನೆ ಕೇಳ್ತಾ ಇದ್ದಾರೆ ಎಂದು ಅಬ್ಬರಿಸಿದ್ದಾನೆ ಬ್ರಿಜ್ ಭೂಷಣ್. ಹಾಗಾಗಿ ಆತನ ವರ್ತನೆಯನ್ನು ನಾವೆಲ್ಲರೂ ಖಂಡಿಸೋಣ. ಆದರೆ ಟೈಮ್ಸ್ ನೌ ಚಾನಲ್ ಈಗ ತೀರಾ ಆಘಾತ ಆದಂತೆ ವರ್ತಿಸುವ ಅಗತ್ಯವಿಲ್ಲ. ಏಕೆಂದರೆ ಇದನ್ನು ಅದೇ ಕೇಳಿ ಪಡೆದಿದೆ.

ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರಧಾನಿ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಮೋದಿ ಅವರು ಯಾವಾಗ ಬಿಜೆಪಿಯಿಂದ ಬ್ರಿಜ್ ಭೂಷಣ್ ರನ್ನು ಉಚ್ಚಾಟನೆ ಮಾಡುತ್ತಾರೆ, ಯಾವಾಗ ಬಂಧಿಸುತ್ತಾರೆ, ಸಿಂಗ್ ಗೆ ರಕ್ಷಣೆ ನೀಡುವುದನ್ನು ಸರ್ಕಾರ ಯಾವಾಗ ನಿಲ್ಲಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಕೇಳಿದ್ದಾರೆ.

ಇಲ್ಲಿಯೇ ಇನ್ನೂ ಒಂದು ವಿಷಯ ಕೇಳಬೇಕು. ಮೋದಿ ಉಪನಾಮದ ವಿಚಾರದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ಘೋಷಣೆಯಾದದ್ದೇ ತಡ, ಅವರ ಸಂಸತ್ ಸದಸ್ಯತ್ವದಿಂದ ಕ್ಷಣವೂ ಪುರಸೊತ್ತಿಲ್ಲದಂತೆ ಅನರ್ಹಗೊಳಿಸಲಾಯಿತು. ಅಲ್ಲಿ ತೋರುವಷ್ಟೇ ಅವಸರವನ್ನು ಸಿಂಗ್ ವಿರುದ್ಧ ಹಲವಾರು ತಿಂಗಳುಗಳಿಂದ ಆರೋಪ ಕೇಳಿಬರುತ್ತಿದ್ದರೂ ಯಾಕೆ ತೋರಿಸುತ್ತಿಲ್ಲ ? ಯಾಕೆ ತಕ್ಷಣ ಬ್ರಿಜ್ ಭೂಷಣ್ ಬಂಧನವಾಗಿಲ್ಲ ? ಯಾಕೆ ಅವರನ್ನು ತಕ್ಷಣ ಪಕ್ಷದಿಂದ ಅಮಾನತು ಮಾಡಿಲ್ಲ ?

ಈಗ ಪೊಲೀಸರೇ ಆರೋಪಪಟ್ಟಿಯಲ್ಲಿ ಶಿಕ್ಷೆಗೆ ಅರ್ಹರು ಎಂದಿರುವಾಗಲೂ ನಿನ್ನೆಯೇ ಆತನ ಬಂಧನವಾಗದಿರುವುದಕ್ಕೆ ಏನು ಸಮರ್ಥನೆ?

ದೊಡ್ಡ ದೊಡ್ಡ ಮಾತನಾಡುವ, ಶ್ವೇತಭವನದಲ್ಲಿ ನಿಂತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪಾಠ ಮಾಡುವ ಪ್ರಧಾನಿ ಮೋದಿ , ದೇಶಕ್ಕಾಗಿ ಪದಕ ಗೆದ್ದು ತಂದ ಹೆಣ್ಣುಮಕ್ಕಳು ದೆಹಲಿಯ ನಡುಬೀದಿಯಲ್ಲಿ ಕಣ್ಣೀರು ಹಾಕುತ್ತ ನಿಂತಾಗ ತಾನೇನು ಮಾಡಿದೆ ಮತ್ತು ಈಗಲಾದರೂ ಏನು ಮಾಡುತ್ತಿದ್ದೇನೆ ಎಂದು ಕೇಳಿಕೊಳ್ಳಲೇಬೇಕು. ಅಲ್ಲವೇ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News