‘ವಾಲ್ಮೀಕಿ ಜಯಂತಿ’ಯಿಂದ ಆದ ಬದಲಾವಣೆಗಳೇನು?

ವಾಲ್ಮೀಕಿ ಜಯಂತಿಯ ಪರಿಣಾಮವಾಗಿ ರಾಮನ ಜತೆ ವಾಲ್ಮೀಕಿ ಸಮುದಾಯವನ್ನು ಭಾವನಾತ್ಮಕವಾಗಿ ಬೆಸೆಯುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಈ ಜಯಂತಿಯು ಹಿಂದುತ್ವವಾದಿ ಸಂಘಟನೆಗಳಿಗೆ ನೆರವಾಗಿದೆ. ಕರ್ನಾಟಕದ ಬಹು ಭಾಗಗಳಲ್ಲಿ ವಾಲ್ಮೀಕಿ ಸಮುದಾಯದ ಯುವಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೇಸರೀಕರಣಕ್ಕೆ ಈ ಜಯಂತಿ ನೆರವಾಗುತ್ತಿದೆ. ಸಂವಿಧಾನಬದ್ಧ ಸರಕಾರದ ಅವಕಾಶಗಳನ್ನು ಪಡೆಯಲು ಈ ಜಯಂತಿ ಸಮುದಾಯವನ್ನು ಎಚ್ಚರಿಸಬೇಕಿತ್ತು. ಕೋಮು ಸೌಹಾರ್ದಕ್ಕೆ ಜತೆಯಾಗಬೇಕಿತ್ತು. ಬದಲಾಗಿ ಸಂವಿಧಾನ ವಿರೋಧಿ ಕೋಮುದ್ವೇಷಕ್ಕೆ ಸಮುದಾಯದ ಕೆಲವು ಯುವಕರನ್ನು ಅಣಿಗೊಳಿಸುತ್ತಿರುವುದು ಆತಂಕದ ಸಂಗತಿಯಾಗಿದೆ.

Update: 2024-10-22 06:51 GMT

ಕಳೆದ ಹದಿನಾಲ್ಕು ವರ್ಷಗಳಿಂದ ಕರ್ನಾಟಕ ಸರಕಾರ ಅಧಿಕೃತವಾಗಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದೆ. ಈ ಜಯಂತಿ ಆರಂಭಕ್ಕೆ ಕೇವಲ ವಾಲ್ಮೀಕಿ/ಬೇಡ/ನಾಯಕ ಸಮುದಾಯದ ಆಚರಣೆಯಾಗಿತ್ತು. ಆದರೆ ಈಗ ವಾಲ್ಮೀಕಿ ಸಮುದಾಯವನ್ನು ಒಳಗೊಂಡಂತೆ ಉಳಿದ 50 ಬುಡಕಟ್ಟು ಆದಿವಾಸಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಪ್ರಾತಿನಿಧಿಕ ಆಚರಣೆಯಾಗಿ ಬದಲಾಗಿದೆ. ಹಾಗಾಗಿ ಈ ಆಚರಣೆಯ ಫಲಾನುಭವಿಗಳು ಕೇವಲ ಬೇಡ/ನಾಯಕ/ವಾಲ್ಮೀಕಿ ಸಮುದಾಯವೇ? ಅಥವಾ ಉಳಿದ 50 ಬುಡಕಟ್ಟುಗಳೂ ಇದರಿಂದೇನಾದರೂ ಲಾಭ ಪಡೆದಿವೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ.

2011ರ ಜನಗಣತಿ ಪ್ರಕಾರ ವಾಲ್ಮೀಕಿ/ನಾಯಕ/ಬೇಡ ಸಮುದಾಯ 32,96,354 ರಷ್ಟಿದೆ. ಉಳಿದಂತೆ ಗೊಂಡರು 1,58,243, ಟೋಕ್ರೆಕೋಳಿ 1,12,190, ಮರಾಠಿ 82,449, ಜೇನುಕುರುಬ ಮತ್ತು ಕೊರಗ 50,870, ಪರಿಶಿಷ್ಟ ಪಂಗಡದ 23 ಸಮುದಾಯಗಳು ಸೇರಿ 2,58,144, ಆದಿವಾಸಿಗಳಾದ ಸೋಲಿಗ 33,819, ಸಿದ್ಧಿ 10,477, ಕಾಡುಕುರುಬ 11,953, ಆಡಿಯನ್ 758, ತೋಡ 147, ಮಲೇರು 440, ಆದಿವಾಸಿ ಅರಣ್ಯವಾಸಿ 15 ಬುಡಕಟ್ಟುಗಳು ಸೇರಿ 2,33,143 ಇದು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆಯಾಗಿದೆ. ಇದೀಗ ಈ ಎಲ್ಲಾ ಸಮುದಾಯಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ ಇದೀಗ ಇತರ ಬುಡಕಟ್ಟುಗಳು ನಾವೇಕೆ ವಾಲ್ಮೀಕಿ ಗುರುತಿನಿಂದ ಗುರುತಿಸಿಕೊಳ್ಳಬೇಕು, ನಮಗೆ ನಮ್ಮದೇ ಸಮುದಾಯದ ಗುರುತುಗಳಿವೆ ಎನ್ನುವ ಭಿನ್ನ ಧ್ವನಿಯೂ ಕೇಳಿಬರುತ್ತಿದೆ. ಬುಡಕಟ್ಟು ಆಶ್ರಮ ಶಾಲೆಗಳಿಗೆ ‘ವಾಲ್ಮೀಕಿ ಆಶ್ರಮ ಶಾಲೆಗಳು’ ಎಂದು ಕರ್ನಾಟಕ ಸರಕಾರ ಹೆಸರು ಬದಲಿಸಿದಾಗ ಇತರ ಎಲ್ಲಾ ಬುಡಕಟ್ಟುಗಳು ಈ ನಾಮಕರಣವನ್ನು ವಿರೋಧಿಸಿದ್ದನ್ನು ಗಮನಿಸಬಹುದು. ಇದರ ಪರಿಣಾಮವಾಗಿ ಸರಕಾರವು ‘ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳು’ ಎಂದು ಬದಲಿಸಿದೆ. ಈ ವಿದ್ಯಮಾನ ಮುಂದೆ ಪರಿಶಿಷ್ಟ ಪಂಗಡದಲ್ಲಿಯೂ ಒಳಮೀಸಲಾತಿ ದನಿ ದೊಡ್ಡದಾಗುವ ಸೂಚನೆಯಾಗಿದೆ.

ಮೊದಲನೆಯದಾಗಿ ಆಚರಣೆಗೆ ಒಂದು ಜನಪ್ರಿಯ ಆಯಾಮವಿದೆ. ಸರಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರ ಕಾಣುತ್ತಿದೆ. ಆ ದಿನ ರಜೆ ಇರುವ ಕಾರಣಕ್ಕೆ ವಾಲ್ಮೀಕಿ ಜಯಂತಿ ಎಲ್ಲರ ಗಮನ ಸೆಳೆಯುತ್ತಿದೆ. ಇದು ಕಲಿಯುವ ವಿದ್ಯಾರ್ಥಿಗಳಲ್ಲಿ ವಾಲ್ಮೀಕಿ ಬಗೆಗೆ ಕುತೂಹಲ ಮೂಡಿಸುತ್ತಿದೆ. ಆಚರಣೆಯ ಪರಿಣಾಮವಾಗಿ ವಾಲ್ಮೀಕಿ ನಗರಗಳು, ವಾಲ್ಮೀಕಿ ಕಾಲನಿಗಳು, ವಾಲ್ಮೀಕಿ ವೃತ್ತಗಳು, ವಾಲ್ಮೀಕಿ ಪ್ರತಿಮೆಗಳು, ವಾಲ್ಮೀಕಿ ಪತ್ರಿಕೆಗಳು, ವಾಲ್ಮೀಕಿ ನಿಲಯದಂತಹ ಹೆಸರುಗಳು ಬರುತ್ತಿವೆ. ಹೀಗೆ ಬೇರೆ ಬೇರೆ ನೆಲೆಗಳಲ್ಲಿ ವಾಲ್ಮೀಕಿಯ ಗುರುತು ಅಚ್ಚಾಗುತ್ತಿದೆ. ಇದು ವಾಲ್ಮೀಕಿ ಸಮುದಾಯದ ಒಳಗೆ ಒಂದು ಬಗೆಯ ಗುರುತನ್ನೂ, ಸ್ವಾಭಿಮಾನವನ್ನೂ ಮೂಡಿಸಿದೆ. ಇದರಿಂದಾಗಿ ಇತರ ಬುಡಕಟ್ಟುಗಳ ಗುರುತುಗಳು ಮುನ್ನಲೆಗೆ ಬರದೆ ಕಣ್ಮರೆಯಾಗಿವೆ.

2019ರ ಪಂಜಾಬ್ ಹೈಕೋರ್ಟ್ ತೀರ್ಪಿನ ನಂತರ ವಾಲ್ಮೀಕಿ ಮಹರ್ಷಿಯು ಕಳ್ಳನಾಗಿ ದರೋಡೆ ಮಾಡುತ್ತಿದ್ದ ಎನ್ನುವ ಕಟ್ಟುಕತೆ ಹೇಳುವುದು ಕಡಿಮೆಯಾಗಿದೆ. ಈ ಹದಿನಾಲ್ಕು ವರ್ಷಗಳ ಆಚರಣೆಯಲ್ಲಿ ವಾಲ್ಮೀಕಿ ಮಹರ್ಷಿ ಬಗೆಗೆ, ಪಾಳೆಗಾರರನ್ನು ಒಳಗೊಂಡಂತೆ ಪುರಾಣ ಚರಿತ್ರೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಪರಿಶಿಷ್ಟ ಪಂಗಡಗಳ ಬುಡಕಟ್ಟುಗಳ ಗುರುತುಗಳ ಬಗ್ಗೆ ವರ್ತಮಾನದ ಬಿಕ್ಕಟ್ಟುಗಳ ಬಗ್ಗೆ ಅಧ್ಯಯನಗಳು ಸಂವಾದಗಳು ನಡೆಯಲಿಲ್ಲ. ಸರಕಾರವು ಪರಿಶಿಷ್ಟ ಪಂಗಡಗಳಿಗೆ ರೂಪಿಸಿದ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿವೆಯೇ ಎನ್ನುವ ಪರಿಶೀಲನೆ ನಡೆಯುತ್ತಿಲ್ಲ. ಹಾಗೆ ನಡೆದಿದ್ದರೆ ಸರಕಾರದ ಯೋಜನೆಯ ಮಟ್ಟದಲ್ಲಿ ಇನ್ನಷ್ಟು ಬದಲಾವಣೆಗೆ ಕಾರಣವಾಗುತ್ತಿತ್ತು. ಅಂದರೆ ಜಯಂತಿಯಿಂದ ವೈಚಾರಿಕ ಎಚ್ಚರ, ಹೋರಾಟ, ಹಕ್ಕೊತ್ತಾಯಗಳ ಮಂಡನೆಗೆ ಪ್ರೇರಣೆ ದೊರೆತದ್ದಕ್ಕಿಂತ ಸಂಭ್ರಮಾಚರಣೆಯಲ್ಲಿಯೇ ಉಳಿದಿದೆ. ಇತ್ತೀಚಿನ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪರಿಶಿಷ್ಟ ಪಂಗಡದ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತದೆ ಇರುವುದನ್ನು ಗಮನಿಸಬಹುದು. ಹೀಗಾಗಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣ ದೀರ್ಘಕಾಲೀನ ಬದಲಾವಣೆಗೆ ಬೇಕಾದ ಯೋಜನೆಗಳಿಗಿಂತ ಅಲ್ಪಕಾಲೀನ ಪ್ರಯೋಜನದ ಯೋಜನೆಗಳಿಗೆ ಹೆಚ್ಚು ಬಳಕೆಯಾಗುತ್ತಿದೆ.

ಮೇಲುಜಾತಿಗಳ ಪ್ರಾಬಲ್ಯ ಇರುವ ಗ್ರಾಮಗಳಲ್ಲಿ ಈಗಲೂ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿಲ್ಲ. ಅಂತೆಯೇ ವಾಲ್ಮೀಕಿ ಸಮುದಾಯವನ್ನು ಹೊರತು ಪಡಿಸಿದ ಬುಡಕಟ್ಟುಗಳು ವಾಲ್ಮೀಕಿ ಜಯಂತಿಯನ್ನು ತಮ್ಮದೆಂದು ಆಚರಿಸುತ್ತಿಲ್ಲ. ವಾಲ್ಮೀಕಿ ಸಮುದಾಯ ಪ್ರಾಬಲ್ಯ ಇರುವಲ್ಲಿ ಜಯಂತಿಯ ಪರಿಣಾಮವಾಗಿ ವಾಲ್ಮೀಕಿ ಯುವಕ ಸಂಘಗಳು ತಲೆ ಎತ್ತಿವೆ. ಈ ನೆಲೆಯಲ್ಲಿ ಸಮುದಾಯ ಸಂಘಟನೆಗೆ ನೆರವಾಗಿದೆ. ಈ ಸಂಘಟನೆಗಳು ಸದ್ಯಕ್ಕೆ ವರ್ಷಕ್ಕೊಮ್ಮೆ ಎಚ್ಚರವಾಗುತ್ತಿವೆ. ಮುಂದೆ ಸಮುದಾಯದ ಸಮಸ್ಯೆಗಳಿಗೆ ಈ ಸಂಘಟನೆಗಳು ದನಿಯಾಗುವಂತೆ ರೂಪಿಸಬೇಕಾಗಿದೆ.

ವಾಲ್ಮೀಕಿ ಜಯಂತಿಯ ಪರಿಣಾಮವಾಗಿ ರಾಮನ ಜತೆ ವಾಲ್ಮೀಕಿ ಸಮುದಾಯವನ್ನು ಭಾವನಾತ್ಮಕವಾಗಿ ಬೆಸೆಯುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಈ ಜಯಂತಿಯು ಹಿಂದುತ್ವವಾದಿ ಸಂಘಟನೆಗಳಿಗೆ ನೆರವಾಗಿದೆ. ಕರ್ನಾಟಕದ ಬಹು ಭಾಗಗಳಲ್ಲಿ ವಾಲ್ಮೀಕಿ ಸಮುದಾಯದ ಯುವಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೇಸರೀಕರಣಕ್ಕೆ ಈ ಜಯಂತಿ ನೆರವಾಗುತ್ತಿದೆ. ಸಂವಿಧಾನಬದ್ಧ ಸರಕಾರದ ಅವಕಾಶಗಳನ್ನು ಪಡೆಯಲು ಈ ಜಯಂತಿ ಸಮುದಾಯವನ್ನು ಎಚ್ಚರಿಸಬೇಕಿತ್ತು. ಕೋಮು ಸೌಹಾರ್ದಕ್ಕೆ ಜತೆಯಾಗಬೇಕಿತ್ತು. ಬದಲಾಗಿ ಸಂವಿಧಾನ ವಿರೋಧಿ ಕೋಮುದ್ವೇಷಕ್ಕೆ ಸಮುದಾಯದ ಕೆಲವು ಯುವಕರನ್ನು ಅಣಿಗೊಳಿಸುತ್ತಿರುವುದು ಆತಂಕದ ಸಂಗತಿಯಾಗಿದೆ.

ಇನ್ನೊಂದೆಡೆ ವಾಲ್ಮೀಕಿ ಜಯಂತಿ ಆಚರಣೆಯ ಪರಿಣಾಮ ಪರಿಶಿಷ್ಟ ಪಂಗಡದ ಪ್ರತ್ಯೇಕ ಸಚಿವಾಲಯ ಆದ ನಂತರ, ಈ ಸಮುದಾಯಗಳ ಅಭಿವೃದ್ಧಿಗಾಗಿ ಕಾಯ್ದಿರಿಸುವ ಹಣದ ಪ್ರಮಾಣ ಹೆಚ್ಚಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಒಟ್ಟು 389 ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಿವೆ. ವಿದೇಶಿ ಉನ್ನತ ವ್ಯಾಸಂಗಕ್ಕೆ ಪ್ರಬುದ್ಧ ಯೋಜನೆಯಲ್ಲಿ ವಿದ್ಯಾರ್ಥಿಗಳ ಆಯ್ಕೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತರಬೇತಿ ಕೊಡಲಾಗುತ್ತಿದೆ. ರಾಷ್ಟ್ರೀಯ ಸಂಸ್ಥೆಗಳಾದ ಐಐಟಿ, ಐಐಎಂ, ಐಎಂಐ, ಎನ್‌ಇಟಿಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ದೊರಕಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಫೆಲೋಶಿಪ್ ಮತ್ತು ನಿರುದ್ಯೋಗ ಭತ್ತೆಗಳನ್ನು ಕೊಡಲಾಗುತ್ತಿದೆ. ಪರಿಶಿಷ್ಟ ಪಂಗಡದ 12 ಬುಡಕಟ್ಟುಗಳ 47,859 ಕುಟುಂಬಗಳಿಗೆ 2023ರಿಂದ ಪ್ರತೀ ತಿಂಗಳು ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಇದಕ್ಕಾಗಿ ಸರಕಾರ 70 ಕೋಟಿ ರೂ.ಯಷ್ಟು ಖರ್ಚು ಮಾಡುತ್ತಿದೆ. ರಾಜ್ಯದ 12 ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 4,480 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಸಾಮಾಜಿಕ ಒಳಗೊಳ್ಳುವಿಕೆಯ ಕಾರಣಕ್ಕೆ ಅಂತರ್‌ಜಾತಿ ವಿವಾಹ, ವಿಧವಾ ವಿವಾಹ, ಒಳಪಂಗಡ ವಿವಾಹ, ದೇವದಾಸಿ ಮಕ್ಕಳ ವಿವಾಹ, ಸರಳ ವಿವಾಹಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ.ಪಂಗಡದವರು ಉದ್ಯಮ ಆರಂಭಿಸಲು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತಿದೆ. ಜಯಂತಿಯ ಪರಿಣಾಮವಾಗಿ ರಾಜ್ಯದಾದ್ಯಂತ ಈತನಕ 1,357 ವಾಲ್ಮೀಕಿ ಭವನಗಳು ಕಟ್ಟಲ್ಪಟ್ಟಿವೆ. ಭವನಗಳ ಬಳಕೆಗೆ ಸಮುದಾಯಗಳನ್ನು ಒಳಗೊಳ್ಳುವ ಕಾರ್ಯಸೂಚಿ ಇಲ್ಲದ ಕಾರಣ ಬಹುಪಾಲು ಭವನಗಳು ನಿರುಪಯುಕ್ತವಾಗಿವೆ. 2012ರಿಂದ ಪರಿಶಿಷ್ಟ ಪಂಗಡದ ಸಾಧಕ-ಸಾಧಕಿಯರಿಗೆ ‘ವಾಲ್ಮೀಕಿಶ್ರೀ’ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಈ ತನಕ 11 ಜನ ಮಹಿಳೆಯರನ್ನು ಒಳಗೊಂಡಂತೆ 47 ಜನರಿಗೆ ಈ ಪ್ರಶಸ್ತಿಯ ಗೌರವವನ್ನು ಕೊಡಲಾಗುತ್ತಿದೆ. ಇದರಲ್ಲಿ ಕೆಲವು ಸಾಧಕರನ್ನು ಈ ಪ್ರಶಸ್ತಿಯ ಹೊರತಾಗಿ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.

ಪರಿಶಿಷ್ಟ ಪಂಗಡಗಳ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗುವ ಬಹುಮುಖ್ಯ ಕಾಯ್ದೆ ಅರಣ್ಯ ಹಕ್ಕು ಕಾಯ್ದೆ. ಈ ಕಾಯ್ದೆಯಡಿ ಈ ತನಕ 56,490 ಎಕರೆ ಭೂಮಿಯನ್ನು ಪರಿಶಿಷ್ಟ ಪಂಗಡಗಳಿಗೆ ವಿತರಿಸಲಾಗಿದೆ. ಭೂಮಿಹಕ್ಕು ಕಾಯ್ದೆಗಾಗಿ ಸಲ್ಲಿಸಿದ 1,81,686 ಅರ್ಜಿಗಳು ತಿರಸ್ಕೃತಗೊಂಡಿವೆ. 2019ರ ಹೈಕೋರ್ಟ್ ತೀರ್ಪಿನ ನಂತರ 1,02,991 ಅರ್ಜಿಗಳನ್ನು ಪುನರ್ ಪರಿಶೀಲಿಸಿ 262 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಕಾಣುತ್ತದೆ. ಪಕ್ಷಾತೀತವಾಗಿ ಈ ಕಾಯ್ದೆಯನ್ನು ಜಾರಿ ಮಾಡಲು ಸರಕಾರಗಳು ಹೆಚ್ಚು ಗಮನಹರಿಸಿಲ್ಲ. ಇದರ ಸಮರ್ಪಕ ಜಾರಿಗಾಗಿ ಪರಿಶಿಷ್ಟ ಪಂಗಡಗಳ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ. ಹೀಗೆ ವಾಲ್ಮೀಕಿ ಜಯಂತಿಯಿಂದ ನಿರೀಕ್ಷಿಸಿದ ಪರಿಣಾಮಗಳಂತೆ ಅನಿರೀಕ್ಷಿತ ಪರಿಣಾಮಗಳೂ ಆಗಿವೆ. ಮುಂದೆ ಡಾ.ಅಂಬೇಡ್ಕರ್ ಕನಸಿನ ಶಿಕ್ಷಣ ಸಂಘಟನೆ ಹೋರಾಟಕ್ಕೆ ನೆರವಾಗುವಂತೆ ವಾಲ್ಮೀಕಿ ಜಯಂತಿ ಆಚರಣೆಯ ಮಾದರಿಗಳನ್ನು ಬದಲಾಯಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News