ದಕ್ಷಿಣ-ಉತ್ತರ ರಾಜ್ಯಗಳ ಅಭಿವೃದ್ಧಿ ಕಂದರಗಳ ಅನಾವರಣ

Update: 2024-10-23 10:03 GMT

ಅನುವಾದಕನ ಓದು

ಕೆ.ಪಿ. ಸುರೇಶ

ನೀಲಕಂಠನ್ ಆರ್.ಎಸ್.ಅವರ South V/S North: India’s Great Divide ಕೃತಿ ನಮ್ಮ ಕಾಲದಲ್ಲಿ ಕೆಕ್ಕರಿಸಿ ನೋಡುತ್ತಿರುವ ವಿಕೃತಿಯನ್ನು ನಮ್ಮ ಮುಂದಿಡುತ್ತದೆ.

ಕೃತಿಯ ಶೀರ್ಷಿಕೆ ಕೊಂಚ ಪ್ರಚೋದನಕಾರಿಯಾಗಿ ಕಂಡರೂ ಒಟ್ಟಾರೆ ಕೃತಿಯ ಹೂರಣದಲ್ಲಿ ಈ ಮಂದ ದೃಷ್ಟಿ ಇಲ್ಲ. ಸ್ವತಃ ಡೇಟಾ ವಿಜ್ಞಾನಿಯಾಗಿರುವ ಕಾರಣಕ್ಕೇ ನೀಲಕಂಠನ್ ಅವರು ಅಸ್ಖಲಿತ ಅಂಕಿ- ಅಂಶಗಳ ಮೂಲಕ ಊನವಿಲ್ಲದ ವಾದವೊಂದನ್ನು ಮುಂದಿಡುತ್ತಾರೆ.

ಒಕ್ಕೂಟ ಎಂಬ ಹೆಸರಿದ್ದರೂ ಕೇಂದ್ರೀಕರಣದ ನಿರಂತರ ಪ್ರಕ್ರಿಯೆಯನ್ನು, ಅದು ತಂದೊಡ್ಡುತ್ತಿರುವ ಅಪಾಯಗಳನ್ನು ನೀಲಕಂಠನ್ ಅಭಿವೃದ್ಧಿಯ ಮಾನದಂಡಗಳ ಮೂಲಕ ಪ್ರಸ್ತುತಪಡಿಸುತ್ತಾರೆ.

ಚಾರಿತ್ರಿಕವಾಗಿ ವಸಾಹತುಶಾಹಿ ಆಡಳಿತ ಶುರುವಾದಾಗ ಮೂರೂ ಪ್ರೆಸಿಡೆನ್ಸಿಗಳು ತೆರಿಗೆ ವಿಧಿಸುವ ಸ್ವತಂತ್ರ ಅಧಿಕಾರ ಹೊಂದಿದ್ದವು. ಆದರೆ ಬ್ರಿಟಿಷ್ ಸರಕಾರದ ಕಾನೂನಾತ್ಮಕ ಆಜ್ಞೆಯ ಮೂಲಕ ಈ ಸರ್ವೋಚ್ಚ ಅಧಿಕಾರವನ್ನು ಬೆಂಗಾಲ್ ಪ್ರೆಸಿಡೆನ್ಸಿಗೆ ನೀಡಿದಲ್ಲಿಂದ ಈ ಕೇಂದ್ರೀಕೃತ ಅಧಿಕಾರದ ಅಧ್ಯಾಯ ಆರಂಭವಾಗುತ್ತದೆ. ಈ ಬಗ್ಗೆ ಮದ್ರಾಸ್ ಪ್ರೆಸಿಡೆನ್ಸಿ ತಕರಾರು ತೆಗೆದಿದ್ದನ್ನೂ ನೀಲಕಂಠನ್ ದಾಖಲಿಸುತ್ತಾರೆ. ಅಂದಾಜು ಎರಡು ಶತಮಾನಗಳ ಬಳಿಕ ಮತ್ತೆ ತಮಿಳುನಾಡು ಈ ಆಕ್ಷೇಪದ ಮುಂಚೂಣಿಯಲ್ಲಿರುವುದು ಗಮನಾರ್ಹ.

ದೇಶ ಸ್ವಾತಂತ್ರ್ಯ ಪಡೆದಾಗ ಅತ್ಯಂತ ಪ್ರಭಾವಿ ಗಳಾಗಿದ್ದ ನೆಹರೂ ಮತ್ತು ಅಂಬೇಡ್ಕರ್ ಇಬ್ಬರೂ ಚಾರಿತ್ರಿಕ ಕಾರಣ ಮತ್ತು ತಮ್ಮದೇ ವಿಶ್ಲೇಷಣಾತ್ಮಕ ನಿಲುವಿನಿಂದ ಬಲಿಷ್ಠ ಕೇಂದ್ರವನ್ನು ಬಯಸಿದ್ದರು. ಅಭಿವೃದ್ಧಿಯ ಯೋಜನಾತ್ಮಕ ಏಕಸೂತ್ರತೆ ನೆಹರೂ ನಿಲುವನ್ನು ನಿರ್ದೇಶಿಸಿದರೆ, ಸಾಮಾಜಿಕ ಪಾಳೆಗಾರಿಕೆಯ ಅಪಾಯ ಅಂಬೇಡ್ಕರ್ ನಿಲುವನ್ನು ಪ್ರಭಾವಿಸಿತ್ತು. ಚಾರಿತ್ರಿಕವಾಗಿ ಇದು ಅನಿವಾರ್ಯವೂ ಆಗಿತ್ತು.

ನಂತರದ ದಶಕಗಳಲ್ಲಿ ರಾಜ್ಯ ಮತ್ತು ಕೇಂದ್ರದ ಸಂಬಂಧದ ತಕ್ಕಡಿ ಕೇಂದ್ರದೆಡೆಗೆ ವಾಲುತ್ತ, ಈಗ ಅದು ತಿದ್ದಲಾರದ ಮಟ್ಟಿಗೆ ಬಂದು ಕೂತಿದೆ.

ನೆಹರೂ ಕಾಲದಲ್ಲಿ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು, ಸ್ವಾಯತ್ತತೆಯನ್ನು ಗೌರವಿಸುತ್ತಲೇ ಕೇಂದ್ರ ಅಭಿವೃದ್ಧಿ ಕಾಣ್ಕೆಯನ್ನು ಹೇರುವ ಮುತ್ಸದ್ದಿತನ ನೆಹರೂ ಅವರಿಗಿತ್ತು. ನೆಹರೂ 15 ದಿನಗಳಿಗೊಮ್ಮೆ ಮುಖ್ಯಮಂತ್ರಿಗಳಿಗೆ ಪತ್ರ ಬರೆವ ಪರಿಪಾಠ ಇಟ್ಟುಕೊಂಡಿದ್ದರು! ಆದರೆ ಸಾಂವಿಧಾನಿಕವಾಗಿ ದತ್ತವಾಗಿದ್ದ ಮತ್ತು ಸಂಸತ್ತಿನ ಪಾರಮ್ಯದ ಮೂಲಕ (ದೇಶವ್ಯಾಪಿ ಕಾನೂನು ಹೇರುವ ಸಂಸತ್ತಿನ ಪರಮಾ ಧಿಕಾರ) ಈ ಕೇಂದ್ರೀಕರಣ ಹೆಚ್ಚುತ್ತಲೇ ಹೋಯಿತು.

ದೇಶದ ಅಭಿವೃದ್ಧಿಯ ಬುನಾದಿ ದೀರ್ಘಕಾಲೀನ ಯೋಜನೆಗಳ ಯಶಸ್ಸಿನಲ್ಲಿದೆ, ಇದು ಚುನಾವಣಾ ವೇಳಾಪಟ್ಟಿಯನ್ನು ಮೀರಿದ ಕಾಲಮಾನ ಹೊಂದಿರು ತ್ತದೆ. ಈ ಯೋಜನೆಗಳ ಫಲಿತಾಂಶ ಗೋಚರಿಸಲು ಒಂದು ತಲೆಮಾರೇ ಬೇಕು ಎಂಬುದನ್ನು ನೀಲಕಂಠನ್ ಅಂಕಿ-ಅಂಶಗಳ ಪುರಾವೆ ಸಹಿತ ಮುಂದಿಡುತ್ತಾರೆ. ಹಾಗೆಯೇ, ಈ ಬುನಾದಿ ಸಾಧನೆ, ರಾಜ್ಯಗಳ ಸ್ಥಳೀಯ ಯೋಜನೆಗಳಿಂದಷ್ಟೇ ಸಾಧ್ಯ ಎಂಬುದನ್ನೂ ತೋರಿಸಿಕೊಡುತ್ತಾರೆ. ಈ ಸಾಧನೆಗೆ ಯೋಜನೆಯ ಸುಸಂಬದ್ಧತೆ, ರಾಜಕೀಯ ಇಚ್ಛಾಶಕ್ತಿ ಮತ್ತು ಅರ್ಪಣಾ ಮನೋಭಾವದ ಸಿಬ್ಬಂದಿ, ಸಮರ್ಥ ಸಾಂಸ್ಥಿಕ ರಚನೆಗಳು ಕಾರಣವಾಗುತ್ತವೆ.

ದಕ್ಷಿಣದ ರಾಜ್ಯಗಳು ತಮ್ಮ ವಿಶಿಷ್ಟ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಿನ್ನೆಲೆಯಿಂದ ಈ ಸಾಧನೆ ಮಾಡಿವೆ. ಆದರೆ ಕಳೆದೊಂದು ದಶಕದಲ್ಲಿ ರಾಜ್ಯಪಟ್ಟಿಯಲ್ಲಿರುವ ಶಿಕ್ಷಣ, ಆರೋಗ್ಯಗಳಂತಹ ವಿಷಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಕೇಂದ್ರ ಏಕರೂಪಿ ಗುರಿ ಮತ್ತು ವಿಧಾನಗಳನ್ನು ರಾಜ್ಯಗಳ ಮೇಲೆ ಹೇರಿದೆ.

ಉತ್ತರದ ರಾಜ್ಯಗಳು ಇನ್ನೂ ಶಿಕ್ಷಣ, ಆರೋಗ್ಯ ದಂತಹ ಮೂಲಭೂತ ಕ್ಷೇತ್ರಗಳಲ್ಲಿ ಕುಂಟುತ್ತಿರುವ ಆತಂಕಕಾರಿ ಅಭಿವೃದ್ಧಿ ವೈರುಧ್ಯವನ್ನು ನೀಲಕಂಠನ್ ಮುಂದಿಡುತ್ತಾರೆ. ಅರ್ಥಾತ್ ದಕ್ಷಿಣ-ಉತ್ತರಗಳ ರಾಜ್ಯಗಳ ಸಾಧನೆಯಲ್ಲಿರುವ ಕಂದರವನ್ನು ಅನಾವರಣಗೊಳಿಸುತ್ತಾರೆ.

ಉತ್ತರದ ರಾಜ್ಯಗಳಿಗೆ ಈ ಮೂಲಭೂತ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಹೂಡಿಕೆಗೆ ಅಗತ್ಯ ಇರುವ ಹಣಕಾಸು ತಮ್ಮದೇ ತೆರಿಗೆ ಮೂಲಗಳಿಂದ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ತೆರಿಗೆ ಸಂಗ್ರಹದ ಹೆಚ್ಚುವರಿ ಪಾಲನ್ನು ಈ ರಾಜ್ಯಗಳಿಗೆ ನೀಡಲಾಗುತ್ತಿದೆ.

ಈ ತೆರಿಗೆ ಪಾಲನ್ನು ನಿರ್ಧರಿಸುವ ಹಣಕಾಸು ಆಯೋಗದ ಮಾನದಂಡಗಳಲ್ಲಿ ಕೇಂದ್ರದ ಇಚ್ಛೆಯ ನೆರಳು ದಟ್ಟವಾಗಿದೆ. ಸಾಂವಿಧಾನಿಕ ಸಂಸ್ಥೆಯಾಗಿರುವ ಹಣಕಾಸು ಆಯೋಗವೂ ತೆರಿಗೆ ಸಂಗ್ರಹದ ಹಂಚಿಕೆಯ ಶಿಫಾರಸುಗಳಲ್ಲಿ ವೈರುಧ್ಯತೆ ತೋರುತ್ತಿದೆ. ಇದು ಅಂತಿಮವಾಗಿ ಅಭಿವೃದ್ಧಿ ಮಾನದಂಡಗಳಲ್ಲಿ ಅಭಿವೃದ್ಧಿ ತೋರಿ ತೆರಿಗೆ ಸಂಗ್ರಹದಲ್ಲೂ ಮುಂಚೂಣಿಯಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ನೀಲಕಂಠನ್ ವಾದಿಸುತ್ತಾರೆ.

ಜನಸಂಖ್ಯಾ ನಿಯಂತ್ರಣ ದೇಶದ ಬಹು ಮುಖ್ಯನೀತಿಯಾಗಿ ಒಪ್ಪಿಕೊಂಡ ಬಳಿಕ ಅಂದರೆ 70ರ ದಶಕದಿಂದ ಇಂದಿನವರೆಗೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ಬೆಳವಣಿಗೆಯನ್ನು ಬಹುತೇಕ ನಿಯಂತ್ರಿಸಿವೆ. ಇದೇ ಕಾರಣದಿಂದ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ತೋರಿವೆ. ಈ ಪ್ರಗತಿಯು ಉದ್ಯೋಗ, ಉದ್ಯಮಶೀಲತೆಗಳ ಪ್ರಗತಿಗೂ ಕಾರಣವಾಗಿವೆ.

ಇದೀಗ ಮುಂದಿನ ಹಂತದ ಅಭಿವೃದ್ಧಿ ಯೋಜನೆಗೆ ಬೇಕಾದ ಹಣಕಾಸು ಲಭ್ಯತೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಗಮನಾರ್ಹ ನಷ್ಟವಾಗುತ್ತಿರುವುದನ್ನು ನೀಲಕಂಠನ್ ವಿವರಿಸುತ್ತಾರೆ. ಇದರೊಂದಿಗೆ ಮೋದಿ ಸರಕಾರ ತನ್ನ ಇಷ್ಟಾನಿಷ್ಟಗಳಿಗೆ ತಕ್ಕಂತೆ ಆದಾಯಮೂಲಗಳನ್ನು ನಿಯಂತ್ರಿಸುತ್ತಿರುವ ವಿಕೃತಿಯ ಬಗ್ಗೆ ಎಚ್ಚರಿಸುತ್ತಾರೆ.

ಸೆಸ್, ಸರ್ಚಾರ್ಜ್‌ಗಳನ್ನು ಹೆಚ್ಚಿಸಿ ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದ ದುರ್ಬುದ್ಧಿ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವಷ್ಟು ಅಪಾಯಕಾರಿಯಾಗಲಿದೆ. ತೆರಿಗೆ ಹಂಚಿಕೆಯ ನಿಯಂತ್ರಣದ ಮೂಲಕ ಕೇಂದ್ರ ಸರಕಾರ ರಾಜ್ಯ ಸರಕಾರಗಳ ಮೇಲೆ ಅಸಹಜ, ಸಂವಿಧಾನ ವಿರೋಧಿ ನಿಯಂತ್ರಣಕ್ಕಾಗಿ ಹವಣಿಸುತ್ತಿರುವ ಕಾರ್ಯಶೈಲಿಯನ್ನು ನೀಲಕಂಠನ್ ವಿವರಿಸುತ್ತಾರೆ.

ಇವೆಲ್ಲವೂ ಈಗ ಕಾರ್ಯಾಂಗದ ತಂತ್ರಗಾರಿಕೆ ಮೂಲಕ ನಡೆಯುತ್ತಿದೆ. ಆದರೆ 1976ರಲ್ಲಿ ಸಂಸತ್ ಸ್ಥಾನಗಳ ಸಂಖ್ಯೆಯನ್ನು 1971ರ ಜನಗಣತಿ ಆಧಾರದ ಮೇಲೆ ಸ್ಥಗಿತಗೊಳಿಸುವ ನಿರ್ಣಯ 2026ರಲ್ಲಿ ಅಂತ್ಯವಾಗಲಿದ್ದು, ಆಗ ಜನಸಂಖ್ಯೆಗನುಗುಣವಾಗಿ ಸಂಸತ್ ಸ್ಥಾನಗಳು ಪುನರ್ನಿರ್ಧಾರವಾಗಲಿವೆ.

ಇದು ಪ್ರಜಾಸತ್ತಾತ್ಮಕವಾಗಿ, ಸಾಂವಿಧಾನಿಕವಾಗಿ ಸರಿಯಾದ ಕ್ರಮ, ನಿಜ. ಆದರೆ ಇದು ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನೇ ಗೌಣವಾಗಿಸುವ ಸಾಧ್ಯತೆ ಇದೆ.

ಜನಸಂಖ್ಯಾ ನಿಯಂತ್ರಣದಲ್ಲೂ ಕಳಪೆ ಸಾಧನೆ ತೋರಿ, ಉಳಿದ ಅಭಿವೃದ್ಧಿ ಮಾನದಂಡಗಳಲ್ಲೂ ಕಳಪೆ ಸಾಧನೆ ತೋರಿರುವ ಉತ್ತರದ ರಾಜ್ಯಗಳು ಜನಸಂಖ್ಯಾ ಹೆಚ್ಚಳದ ಕಾರಣಕ್ಕೇ ಹೆಚ್ಚುವರಿ ರಾಜಕೀಯ ಪ್ರಾತಿನಿಧ್ಯ ಪಡೆಯಲಿವೆ.

ಈ ಹೆಚ್ಚಳ ಉತ್ತರದ ಯಜಮಾನಿಕೆಗೂ ಕಾರಣವಾಗಬಹುದು ಎಂಬ ಆತಂಕಕ್ಕೆ ವರ್ತಮಾನದ ರಾಜಕೀಯ ಚಲನೆಯೂ ಇಂಬುಕೊಡುವಂತಿದೆ. ಅರ್ಥಾತ್ ಏಕರೂಪೀ ಸಾಂಸ್ಕೃತಿಕ ಮೊಹರಿನ ಹಪಾಹಪಿ, ರಾಜಕೀಯ ನಿಯಂತ್ರಣದ ಹಪಾಹಪಿ ಹಾಗೂ ವಿತ್ತೀಯ ನೀತಿಗಳ ಏಕಸ್ವಾಮ್ಯ ಮೂರೂ ಹೆಣೆದುಕೊಂಡಿರುವ ಮೋದಿ ಆಡಳಿತದ ಹೆಜ್ಜೆಗತಿಗೆ 2026ರ ಬದಲಾವಣೆ ಸಂಸದೀಯ ಒಪ್ಪಿಗೆಯ ಮೊಹರೂ ಒತ್ತಬಹುದು.

ಈ ಅಪಾಯಕ್ಕೆ ಪರ್ಯಾಯವೇನು?

ನೀಲಕಂಠನ್ ಅವರು ಸೂಚಿಸುವ ಪರ್ಯಾಯ ಗಳೆಲ್ಲ, ವಾಸ್ತವ ದೂರ ತಾರ್ಕಿಕ ಸೂಚಿಗಳಷ್ಟೇ ಆಗಿವೆ.

ಉತ್ತರ ಗಿ/S ದಕ್ಷಿಣ ಎಂಬ ಬಿಂಬವೂ ಕೊಂಚ ಮಂದದೃಷ್ಟಿಯ ಗ್ರಹಿಕೆ. ಅಸಲಿಗೆ ಇದು ಕೇಂದ್ರೀಕರಣದ ಸೂತ್ರಧಾರಿಗಳ ಚಿತಾವಣೆಯಿಂದ ಹುಟ್ಟಿರುವ ಬಿಕ್ಕಟ್ಟು. ಈ ಬಿಕ್ಕಟ್ಟು ಮೋದಿ ಕಾಲದ ಏಕಾಏಕಿ ಸೃಷ್ಟಿಯಲ್ಲ. ಮೋದಿಗಿಂತ ಮೊದಲಿದ್ದ ಕಾಂಗ್ರೆಸ್ ಈ ಬಿಕ್ಕಟ್ಟಿನ ಬೀಜ ಬಿತ್ತಿದ್ದು ಎಂಬುದನ್ನು ಮರೆಯಕೂಡದು.

ದಕ್ಷಿಣದ ರಾಜ್ಯಗಳಷ್ಟೇ ಅಲ್ಲ ಅಭಿವೃದ್ಧಿ ಮತ್ತು ತೆರಿಗೆ ಸಂಗ್ರಹದ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಕೂಡ ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಭಾಗವಷ್ಟೇ. ಇವು ಈ ಅನಾರೋಗ್ಯಕರ ಕೇಂದ್ರ ನಿಯಂತ್ರಣದ ವಿರುದ್ಧ ವಾದಿಸಲೇ ಇಲ್ಲ.

ಜಿಎಸ್‌ಟಿಯಿಂದ ಹಿಡಿದು ಕೇಂದ್ರದ ತೆರಿಗೆ ಹಂಚಿಕೆಯ ವಿನ್ಯಾಸದ ಬಗ್ಗೆ ಪ್ರತಿರೋಧ ಒಡ್ಡಿಯೇ ಇಲ್ಲ. ತೆರಿಗೆ ಸಂಗ್ರಹಕ್ಕೂ ತೆರಿಗೆ/ ಆದಾಯದ ಪಾಲಿಗೂ ಇರುವ ಕಂದರದ ಬಗ್ಗೆ ಕರ್ನಾಟಕವೂ ಪ್ರತಿಭಟಿಸುತ್ತಿದೆ.

ಈ ಪ್ರತಿಭಟನೆಯ ಸಂದರ್ಭದಲ್ಲೇ ಇದೇ ರಾಜ್ಯಗಳ ಅನುದಾನ/ಅಧಿಕಾರಹಂಚಿಕೆ ವೈರುಧ್ಯ ಹಣಕಿಕ್ಕುತ್ತಿದೆ. ಕೇಂದ್ರದ ನಿಯಂತ್ರಣದ ಬಗ್ಗೆ ಧ್ವನಿ ಎತ್ತುವಾಗ ಸ್ವತಃ ತಾವೇ ವಿಕೇಂದ್ರೀಕರಣದ ಮೂರ್ತರೂಪಗಳಾದ ಗ್ರಾಮಪಂಚಾಯತ್‌ಗಳಿಗೆಷ್ಟು ಸ್ವಾಯತ್ತತೆ ಕೊಟ್ಟಿದ್ದೇವೆ ಎಂಬ ಆತ್ಮಾವಲೋಕನ ಕಾಣಿಸುತ್ತಿಲ್ಲ.

ಒಕ್ಕೂಟದ ಸಂತುಲಿತ ಅಧಿಕಾರ ಸ್ವರೂಪ ಕೇಂದ್ರ-ರಾಜ್ಯಗಳಿಗಷ್ಟೇ ಸೀಮಿತ ಎಂಬಂತೆ ಮಾತಾಡಿದರೆ ಅದು ಆತ್ಮವಂಚನೆಯಾಗುತ್ತದೆ.

ಇದು ಒಂದಂಶ.

ನೀಲಕಂಠನ್ ಅವರ ಕೃತಿಯನ್ನು ಓದಿದವರು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಸಾಂವಿಧಾನಿಕ ಸಾಂಸ್ಥಿಕ, ಸಂರಚನೆಗಳನ್ನು ಮರುರೂಪಿಸುವ ಬಗ್ಗೆ, ಅವು ಕೇಂದ್ರದ, ಸಂಸತ್ತಿನ ಸಂವಿಧಾನೇತರ ಪ್ರಭಾವಕ್ಕೊಳಗಾಗದಷ್ಟು ಸ್ವಾಯತ್ತತೆ ಪಡೆಯುವುದು ಹೇಗೆ ಎಂಬಿತ್ಯಾದಿ ಬಗ್ಗೆ ಚರ್ಚಿಸುವ ಅಗತ್ಯವಿದೆ.

ಈ ಕೃತಿಯನ್ನು ನಾನು ಉತ್ಸಾಹದಿಂದ ಅನುವಾದಿಸಿ ದ್ದೇನೆ. ಎಂದಿನಂತೆ ಮೂಲಕ್ಕೆ ಚ್ಯುತಿ ಬಾರದಂತೆ ಅನು ವಾದಿಸಲು ಯತ್ನಿಸಿದ್ದೇನೆ. ಈ ಕೃತಿಯ ಅನುವಾದಕ್ಕೆ ಅವಕಾಶ ನೀಡಿದ ಡಾ. ನಾಗೇಗೌಡ ಕೀಲಾರ ಮತ್ತು ನಂದೀಶ್ ದೇವ್ ಅವರಿಗೆ ಆಭಾರಿ.

ಹಾಗೇ ಮೌಲಿಕ ಮುನ್ನುಡಿ ಬರೆದು ಈ ಕೃತಿಗೊಂದು ಬೌದ್ಧಿಕ ಮನ್ನಣೆ ನೀಡಿದ ಶ್ರೀ ಕೃಷ್ಣಬೈರೇಗೌಡ ಅವರಿಗೂ ಕೃತಜ್ಞತೆಗಳು.

ಉಳಿದಂತೆ, ಈ ಕೃತಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕರ್ನಾಟಕದ ಚಿಂತಕರು, ರಾಜಕಾರಣಿಗಳಾದಿಯಾಗಿ ಎಲ್ಲರೂ ಚರ್ಚಿಸಿದರೆ ಈ ಅನುವಾದ ಸಾರ್ಥಕ.

ಒಂದು ದೇಶದೊಳಗಿನ ಅಸಮಾನ ಅಭಿವೃದ್ಧಿ ಜಾಗತಿಕ ವಿದ್ಯಮಾನ

ಕೃಷ್ಣ ಬೈರೇಗೌಡ

ಕಂದಾಯ ಸಚಿವರು, ಕರ್ನಾಟಕ ಸರಕಾರ

ಭಾರತದ ಸಂವಿಧಾನದ ನಿರ್ದೇಶಕ ತತ್ವಗಳ ವಿಧಿ 38(2), ಸರಕಾರವು ವಿವಿಧ ಭಾಗಗಳಲ್ಲಿ ನೆಲೆಸಿರುವ ಜನರ ಅಸಮಾನತೆಯನ್ನು ಕಡಿಮೆಗೊಳಿಸುವತ್ತ ಶ್ರಮಿಸಬೇಕು ಎಂದು ಹೇಳುತ್ತದೆ.

ಸಂತುಲಿತ ಪ್ರಾದೇಶಿಕ ಅಭಿವೃದ್ಧಿಯತ್ತ ಎಷ್ಟೇ ಪ್ರಯತ್ನಗಳು ನಡೆದಾಗ್ಯೂ, ಈ ಅಸಮಾನ ಬೆಳವಣಿಗೆ ಭಾರತದ ನತದೃಷ್ಟ ವಾಸ್ತವವಾಗಿದೆ.

ಸ್ವಾತಂತ್ರ್ಯ ಪಡೆಯುವ ವೇಳೆಗೆ ಭಾರತದ ಹೆಚ್ಚಿನ ಪ್ರದೇಶಗಳು ಏಕರೀತಿಯ ದಾರಿದ್ರ್ಯ ಮತ್ತು ಹಿಂದುಳಿದಿರುವಿಕೆಗೆ ತುತ್ತಾಗಿದ್ದವು. ಒಂದೇ ಬಗೆಯ ಅಭಿವೃದ್ಧಿ ನೆಲೆಯಿಂದ ಶುರು ಮಾಡಿದರೂ ಕೆಲವು ರಾಜ್ಯಗಳು ಸಾಮಾಜಿಕ, ಮಾನವ ಸಂಪನ್ಮೂಲ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅಪಾರ ಸುಧಾರಣೆ ಸಾಧಿಸಿವೆ. ಒಳ್ಳೆಯ ಸಾಧನೆ ಮಾಡುತ್ತಿರುವ ರಾಜ್ಯಗಳು ಮತ್ತು ಇತರ ರಾಜ್ಯಗಳ ನಡುವಿನ ಅಂತರ 80ರ ದಶಕದ ಬಳಿಕ ಇನ್ನಷ್ಟು ಹೆಚ್ಚಾಗಿದೆ.

ತಲಾ ಆದಾಯವನ್ನು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸೂಚಿಯಾಗಿ ಗಮನಿಸಿದರೆ; 60ರ ದಶಕದಲ್ಲಿ ಈ ಅಂತರ ಶೇ.-30ರಿಂದ ಶೇ.+30ರ ಮಟ್ಟದಲ್ಲಿತ್ತು. ಆದರೆ ಈಗ ಈ ಅಂತರ ಶೇ.-60ರಿಂದ ಶೇ.+90ರವರೆಗೂ ಹೆಚ್ಚಿದೆ.

ವೈರುಧ್ಯವೆಂದರೆ, ಉತ್ತಮ ಸಾಧನೆ ತೋರುತ್ತಿರುವ ರಾಜ್ಯಗಳಿಂದ ಕುಂಟುತ್ತಿರುವ ರಾಜ್ಯಗಳಿಗೆ ಅಪಾರ ಆರ್ಥಿಕ ಸಂಪನ್ಮೂಲವನ್ನು ವರ್ಗಾವಣೆ ಮಾಡುತ್ತಿರುವ ಸಂದರ್ಭದಲ್ಲೇ ಇದು ಜರುಗಿದೆ. ಹಣಕಾಸು ಆಯೋಗಗಳು ಮತ್ತು ಕೇಂದ್ರ ಸರಕಾರಗಳು ಈ ಕುಂಟುತ್ತಿರುವ ರಾಜ್ಯಗಳಿಗೆ ನಿಧಿ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳು, ವಿವೇಚನಾ ನಿಧಿಗಳ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಸಂವಿಧಾನದ ವಿಧಿ 38(2)ರ ಅನ್ವಯ ಒದಗಿಸಿವೆ. ಇಷ್ಟಾದರೂ ಮಾನವ ಸಂಪನ್ಮೂಲ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಅಂತರ ಹೆಚ್ಚುತ್ತಲೇ ಇದೆ. ಅಂದರೆ ಸಂಪನ್ಮೂಲ ಕೊರತೆ ಇದಕ್ಕೆ ಕಾರಣವಲ್ಲ ಎಂದಾಯಿತು.

ಕಳೆದ 50 ವರ್ಷಗಳ ಅನುಭವ ಹೀಗಿದ್ದರೂ ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳಿಂದ ಹಿಂದುಳಿದ ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ವರ್ಗಾವಣೆ ಮೂಲಕ ಈ ಸಮಸ್ಯೆ ನಿವಾರಿಸಬಹುದೆಂಬ ಚಿಂತನೆಗೆ ನಾವು ಜೋತು ಬಿದ್ದಿದ್ದೇವೆ.

ಒಂದೋ ಇದು ಅಸಮಾನತೆಯನ್ನು ನಿವಾರಿಸುವ ಮೇಲ್ಪದರದ ಹುಸಿ ಬದ್ಧತೆಯಾಗಿದೆ; ಇಲ್ಲಾ ಕೆಲವು ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ವರ್ಗಾಯಿಸುವ ಅನುಕೂಲದ ಹಾದಿಯಾಗಿದೆ. ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಂಡರಷ್ಟೇ ಪರಿಹಾರಗಳು ಹೊರಹೊಮ್ಮಲು ಸಾಧ್ಯ.

ಮಾನವ ಸಂಪನ್ಮೂಲ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿರುವ ಅಂತರ, ಭಿನ್ನ ಹಾದಿ-ಗತಿ, ದಕ್ಷಿಣದ ರಾಜ್ಯಗಳ ಸಾಧನೆಗಳ ಕಾರಣಗಳನ್ನು ನೀಲಕಂಠನ್ ಅವರು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಅವರು ಸಮಸ್ಯೆಯನ್ನು ವಿಶ್ಲೇಷಿಸಿ ಉತ್ತಮ ಸಾಧನೆಯ ಕಾರಣಗಳನ್ನು ಮುಂದಿಡುತ್ತಾರೆ. ಈ ಪ್ರಕ್ರಿಯೆ ಮೂಲಕ ಅವರು ಸಮಸ್ಯೆಯ ಆಳವಾದ ಅರ್ಥೈಸುವಿಕೆಯ ಪುರಾವೆ ಮುಂದಿಡುತ್ತಾರೆ. ಅಷ್ಟೇ ಅಲ್ಲ, ಸಾಧ್ಯ ಪರಿಹಾರದತ್ತ ನಮ್ಮನ್ನು ನಿರ್ದೇಶಿಸುತ್ತಾರೆ. ಖಾಸಗಿ ವಲಯದ ವೃತ್ತಿಪರರಾದರೂ ನಮ್ಮ ಕೆಲವು ಸಾರ್ವಜನಿಕ ನೀತಿ ಪರಿಣಿತರಿಗಿಂತ ಉತ್ತಮವಾದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ವಿಶ್ಲೇಷಣೆಯನ್ನು ಅವರು ಮಾಡಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತಾರೆ. ಗಟ್ಟಿಯಾದ ಅಂಕಿ-ಅಂಶಗಳ ಬಲದಿಂದಲೇ ಅವರು ವಿಶ್ಲೇಷಣೆ ಮತ್ತು ವಿಷಯ ಸಮಾಪನ ಮಾಡುತ್ತಾರೆ. ತೌಲನಿಕವಾದ ಅಂಕಿ-ಅಂಶಗಳನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಂಡಿಸುತ್ತಾರೆ

ಕೊಂಚ ಪ್ರಚೋದಕ ಶೀರ್ಷಿಕೆ ಇದ್ದರೂ ಈಗಿರುವ ಬಿಗುವಿನ ಕಾರಣಗಳನ್ನು ಒಪ್ಪುವಂತೆ ನಮ್ಮನ್ನು ಒತ್ತಾಯಿಸಿ, ನಮ್ಮ ಒಕ್ಕೂಟವನ್ನು ಇನ್ನಷ್ಟು ಬಲಪಡಿಸುವ ಅವರ ಉದ್ದೇಶ ಈ ಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಈ ಬಿಗುವಿನ ಕಾರಣಗಳನ್ನು ನಿರ್ಲಕ್ಷಿಸುವುದು ಪರಿಹಾರವಲ್ಲ.

ನಮ್ಮ ಒಕ್ಕೂಟ ಕಾಲಕಾಲಕ್ಕೆ ಹಲವು ಸವಾಲುಗಳನ್ನು ಚಾರಿತ್ರಿಕವಾಗಿ ಎದುರಿಸಿದೆ. ವಿಪರೀತ ತದ್ವಿರುದ್ಧ ನಿಲುವುಗಳ ಮಧ್ಯೆ ಒಮ್ಮತ ಮೂಡಿಸುವುದು, ಸಂಧಾನದ ಮೂಲಕ ವಿಭಿನ್ನ ದೃಷ್ಟಿಕೋನ, ಹಿತಾಸಕ್ತಿಗಳನ್ನು ಸಂಭಾಳಿಸುವ ಹಾದಿಗಳ ಮೂಲಕ ನಾವು ಹಲವಾರು ಸವಾಲುಗಳನ್ನು ಪರಿಹರಿಸಿದ್ದೇವೆ. ತನ್ಮೂಲಕ ಒಕ್ಕೂಟವನ್ನು ಇನ್ನಷ್ಟು ಬಲಯುತಗೊಳಿಸಿದ್ದೇವೆ.

ದಕ್ಷಿಣ ಭಾರತ ಮತ್ತು ಉತ್ತಮ ಸಾಧನೆ ತೋರುತ್ತಿರುವ ಇತರ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚಿನ ಪಾಲು ನೀಡಿವೆ. ಈ ರಾಜ್ಯಗಳು ಬೆಳವಣಿಗೆ, ಪ್ರತಿಭೆ, ಉದ್ಯೋಗ, ಅವಕಾಶ, ಆದಾಯಗಳ ಚಾಲಕ ಶಕ್ತಿಗಳಾಗಿವೆ. ಈ ರಾಜ್ಯಗಳು ಮಾನವ ಸಂಪನ್ಮೂಲ, ಆರ್ಥಿಕ ಅಭಿವೃದ್ಧಿ, ಮೂಲಭೂತ ಸಂರಚನಾ ಅಭಿವೃದ್ಧಿಗೆ ಅಪಾರ ಹೂಡಿಕೆ ಮಾಡಿವೆ. ಆದ್ದರಿಂದಲೇ ಈ ರಾಜ್ಯಗಳ ಸಾಮಾಜಿಕ-ಆರ್ಥಿಕ ಸಾಧನೆ ರಾಷ್ಟ್ರೀಯ ಸರಾಸರಿಗಿಂತ ಮೇಲಿದೆ. ಈ ರಾಜ್ಯಗಳು ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸತತವಾಗಿ ಇನ್ನಷ್ಟು ಹೂಡಿಕೆ ಮಾಡಬೇಕಾದ ಅಗತ್ಯ ಇದೆ. ಈ ರಾಜ್ಯಗಳ ಪ್ರಜೆಗಳ ನಿರೀಕ್ಷೆಯೂ ಅದೇ. ಈ ಸಾಧನೆಯ ಸಾತತ್ಯಕ್ಕೆ ಬೇಕಾದ ಹೂಡಿಕೆಗೆ ಯಾವ ಅಡ್ಡಿ, ತಡೆಗಳೂ ಇರಬಾರದು.

ಇದು ಸಾಧನೆ ಮಾಡುತ್ತಿರುವ ರಾಜ್ಯಗಳ ಹಿತಕ್ಕಾಗಿ ಅಷ್ಟೇ ಅಲ್ಲ, ದೇಶದ ಒಟ್ಟಾರೆ ಒಕ್ಕೂಟದ ಹಿತಕ್ಕಾಗಿ ಅವಶ್ಯವಿದೆ. ಈ ರಾಜ್ಯಗಳಲ್ಲಿ ಸೃಷ್ಟಿಯಾಗುವ ಉದ್ಯೊಗಗಳು, ಅವಕಾಶಗಳು, ಆದಾಯಗಳೆಲ್ಲ ಉಳಿದ ರಾಜ್ಯಗಳಿಗೂ ಲಾಭ ತರುತ್ತವೆ.

ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಪೋಷಿಸಬೇಕಲ್ಲವೇ?

ಈ ರಾಜ್ಯಗಳ ಕಾಳಜಿಯನ್ನು ನಿರ್ಲಕ್ಷಿಸುವುದು ಅಥವಾ ಅವುಗಳನ್ನು ವಿಭಜಕ ಎಂದು ಮುದ್ರೆ ಒತ್ತುವುದು ಒಕ್ಕೂಟಕ್ಕೆ ಮಾಡುವ ಸೇವೆಯಲ್ಲ. ಈ ರಾಜ್ಯಗಳ ಅಗತ್ಯಗಳಿಗೆ ಸ್ಪಂದಿಸಿ ಸಾಮೂಹಿಕವಾಗಿ ಪರಿಹಾರ ಹುಡುಕಲು ನಾವೆಲ್ಲ ತೊಡಗಬೇಕಿದೆ. ನಮ್ಮ ದೇಶ ಮತ್ತು ಒಕ್ಕೂಟವನ್ನು ಇನ್ನಷ್ಟು ಸಶಕ್ತಗೊಳಿಸುವ ಬಗೆ ಇದು. ಆದ್ದರಿಂದಲೇ ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಚೌಕಟ್ಟೊಂದನ್ನು ಅಭಿವೃದ್ಧಿಗೊಳಿಸಬೇಕಿದೆ. ಈ ಚೌಕಟ್ಟು ಹಿಂದುಳಿದಿರುವ ರಾಜ್ಯಗಳ ಅಗತ್ಯಗಳನ್ನೂ ಪೂರೈಸುವಂತಿರಬೇಕು. ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆಯಷ್ಟೇ.

ಉತ್ತಮ ಸಾಧನೆ ಮಾಡಿರುವ ರಾಜ್ಯಗಳು ಸಾಮಾಜಿಕ, ಆರ್ಥಿಕ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಹೂಡಿಕೆ ಮಾಡಬೇಕಿದೆ. ಅದಕ್ಕೆ ಆರ್ಥಿಕ ಸಂಪನ್ಮೂಲ ಬೇಕು. ಈ ರೀತಿಯ ಹೂಡಿಕೆ ಇಲ್ಲದಿದ್ದರೆ ಈ ರಾಜ್ಯಗಳ ಸಾಧನೆ ಇಳಿಮುಖವಾಗಬಹುದು. ಇದು ಉಳಿದ ರಾಜ್ಯಗಳನ್ನಷ್ಟೇ ಅಲ್ಲ, ದೇಶವನ್ನೇ ಪ್ರಭಾವಿಸಬಹುದು. ಎಲ್ಲರಿಗೂ ನಷ್ಟ ತರಬಹುದಾದ ಸಂಗತಿ ಇದು.

ಹಿಂದುಳಿದ ರಾಜ್ಯಗಳ ಅಭಿವೃದ್ಧಿ ಸಮತೆಯ ಬಗ್ಗೆ ಸಹಮತ ಹೊಂದಿ, ಸಾಧನೆ ಮಾಡಿರುವ ರಾಜ್ಯಗಳ ಬಗ್ಗೆ ಯಾವ ಕಾಳಜಿಯೂ ಇಲ್ಲದಿದ್ದರೆ ದೀರ್ಘಾವಧಿಯಲ್ಲಿ ಇದು ಇಡೀ ದೇಶಕ್ಕೆ ನಷ್ಟದಾಯಕವಾಗಬಹುದು.

ಒಕ್ಕೂಟದ ಮನೋಧರ್ಮದ ಭಾಗವಾಗಿ, ಹಿಂದುಳಿದ ರಾಜ್ಯಗಳ ಹಿತಾಸಕ್ತಿಗೆ ಗಮನ ನೀಡಿದಂತೆ, ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಹಿತಾಸಕ್ತಿಗೂ ಗಮನ ಹರಿಸಬೇಕಿದೆ. ಆಯಾ ರಾಜ್ಯಗಳಿಗೆ ಅವುಗಳ ತೆರಿಗೆ ಪಾಲನ್ನು ಆಧರಿಸಿದ ಒಂದು ಪಾಲನ್ನು ಮರಳಿಸುವುದು, ಆಯಾ ರಾಜ್ಯಗಳ ಒಟ್ಟಾರೆ ಆಂತರಿಕ ಉತ್ಪನ್ನವನ್ನು ಒಂದು ಸೂಚಿಯಾಗಿ ಹಣಕಾಸು ಆಯೋಗ ಪರಿಗಣಿಸುವುದು- ಇತ್ಯಾದಿ ಸಲಹೆಗಳನ್ನು ತಜ್ಞರು ಮುಂದಿಟ್ಟಿದ್ದಾರೆ. ಇವೆಲ್ಲಾ ಸಮಾನತೆ ಮತ್ತು ಸಾಧನೆಗಳೆರಡನ್ನೂ ಸಂತುಲಿತಗೊಳಿಸಿ ಅಭಿವೃದ್ಧಿಯನ್ನು ಸಾಧಿಸುವ ಉಪಾಯಗಳು.

ಈಗ ನಡೆಯುತ್ತಿರುವ ಈ ಪ್ರಮುಖ ರಾಷ್ಟ್ರೀಯ ಚರ್ಚೆಗಳಿಗೆ ನೀಲಕಂಠನ್ ಅವರ ಕೃತಿ ಬಲು ಉಪಯುಕ್ತ ಕೊಡುಗೆ ನೀಡಿದೆ. ಸಾಮಾನ್ಯನೂ ಗ್ರಹಿಸಬಲ್ಲ ಸರಳ ಶೈಲಿ ಇಲ್ಲಿದೆ.

ಇಂತಹ ಕೃತಿಯನ್ನು ಅನುವಾದಿಸುವುದು ವಿಶಿಷ್ಟ ಸವಾಲುಗಳನ್ನೊಡ್ಡುತ್ತದೆ. ಜ್ಞಾನವನ್ನು ಸೃಷ್ಟಿಸುವ ಬದಲು ಸ್ವೀಕರಿಸುವ ಭಾಷೆಯಾದಾಗ ಈ ಸವಾಲುಗಳು ಇನ್ನಷ್ಟು ಸಂಕೀರ್ಣವಾಗುತ್ತವೆ. ಈ ಸವಾಲುಗಳ ದೆಸೆಯಿಂದಾಗಿ ವಿಶದವಾಗದ ವಿಚಿತ್ರ ಪದ/ ನುಡಿಗಟ್ಟುಗಳನ್ನು ಬಳಸುವ ಪ್ರಮೇಯ ಒದಗಬಹುದು. ಇದು ಮೂಲದ ಚಿಂತನೆಯನ್ನು ಇನ್ನೊಂದು ಭಾಷೆಗೆ ದಾಟಿಸುವ ಪ್ರಯತ್ನಕ್ಕೇ ಏಟು ನೀಡಬಹುದು. ಅರ್ಥಶಾಸ್ತ್ರ ಮತ್ತು ವಿತ್ತೀಯ ವಿಚಾರಗಳು ಇಂತಹ ಸವಾಲಿನ ಕ್ಷೇತ್ರ.

ಕೆ.ಪಿ. ಸುರೇಶ ಅವರು ಈ ಸವಾಲನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಭಾಷೆಗೂ ನ್ಯಾಯ ಒದಗಿಸುತ್ತಾ, ಈ ಪುಸ್ತಕದ ಹೂರಣವನ್ನು ಸುಲಭವಾಗಿ ಗ್ರಹಿಸುವ ಸುಲಲಿತತನವನ್ನು ಸೃಷ್ಟಿಸಿದ್ದಾರೆ. ಅವರ ಪ್ರಯತ್ನ ಪ್ರಶಂಸನೀಯ.

ಸಾರ್ವಜನಿಕ ವಿಷಯಗಳ ಕುರಿತು ಬರೆಯುತ್ತಿರುವ ಅವರ ಸುದೀರ್ಘ ಅನುಭವ ಈ ಅನುವಾದದ ಮೂಲಕ ನಮಗೆಲ್ಲಾ ಲಾಭ ತಂದಿದೆ.

ಈ ವಿಚಾರದ ಕುರಿತು ಸಾರ್ವಜನಿಕ ಚರ್ಚೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಇದನ್ನು ಪ್ರಕಟಿಸುತ್ತಿರುವ ಪ್ರಕಾಶಕರಿಗೂ ನಾವು ಋಣಿಯಾಗಿರಬೇಕು.

ವಾಸ್ತವ ದಾಖಲೆಗಳನ್ನಾಧರಿಸಿದ, ಸರಳ ಓದಿಗೆ ದಕ್ಕುವ ಕೃತಿಯೊಂದನ್ನು ಅವರು ನಮ್ಮ ಕೈಗಿತ್ತು ನಾಡಿಗೆ ಬಲು ದೊಡ್ಡ ಉಪಕಾರ ಮಾಡಿದ್ದಾರೆ

-ಮುನ್ನುಡಿಯಿಂದ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News