ರಾಜ್ಯ ಬಿಜೆಪಿ ಕುಮಾರಸ್ವಾಮಿಯವರನ್ನು ಏಕಾಂಗಿಯಾಗಿಸಲಿದೆಯೇ?

Update: 2024-10-22 05:22 GMT

ನವೆಂಬರ್ 13ರಂದು ನಡೆಯಲಿರುವ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತೀವ್ರ ಕದನ ಕುತೂಹಲ ಇರುವುದು ಚನ್ನಪಟ್ಟಣ ಕ್ಷೇತ್ರ ವಿಚಾರದಲ್ಲಿ.

ಬಿಜೆಪಿಯಂತೂ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿಬಿಟ್ಟಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಕಣಕ್ಕಿಳಿದಿದ್ದು, ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

ಇಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು. ಆದರೆ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ, ಯೋಗೇಶ್ವರ್‌ಗೆ ನಿರಾಸೆಯಾಗಿದೆ.

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಜೆಡಿಎಸ್‌ನವರು ಯಾರಿಗೆ ಬೇಕೋ ಅವರಿಗೆ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಮಿತ್ ಶಾ ಅವರೇ ‘‘ಅಲ್ಲಿ ಟಿಕೆಟ್ ಘೋಷಣೆ ಮಾಡುವುದು ಜೆಡಿಎಸ್‌ನವರ ನಿರ್ಧಾರ’’ ಎಂದಿರುವುದಾಗಿಯೂ ಯಡಿಯೂರಪ್ಪ ಹೇಳಿದ್ದಾರೆ.

ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು.

ಜೆಡಿಎಸ್‌ನವರು ತಮಗೆ ಬೇಕಾದವರನ್ನು ಕಣಕ್ಕಿಳಿಸಲಿ ಎನ್ನುವುದು ಕುಮಾರಸ್ವಾಮಿಗೆ ಬಿಜೆಪಿ ಕೊಟ್ಟಿರುವ ಸ್ವಾತಂತ್ರ್ಯವೋ ಅಥವಾ ಮುಂದಿನ ಎಲ್ಲದಕ್ಕೂ ಅವರನ್ನು ಹೊಣೆಯಾಗಿಸುವುದಕ್ಕೆ ಬೇಕಿರುವ ಕೊಕ್ಕೆಯೊ ಎಂಬ ಅನುಮಾನ ಏಳದೇ ಇರುವುದಿಲ್ಲ.

ಈಗ ಅಭ್ಯರ್ಥಿ ಘೋಷಣೆ ಮಾಡುವಲ್ಲಿ ಸಂದಿಗ್ಧಕ್ಕೆ ಸಿಲುಕುವುದು ಕುಮಾರಸ್ವಾಮಿ. ಅವರಿಗೆ ಈ ಉಪ ಚುನಾವಣೆ ಮೂಲಕ ತಮ್ಮ ಪುತ್ರ ನಿಖಿಲ್ ರಾಜಕೀಯಕ್ಕೆ ಒಂದು ದಾರಿ ಮಾಡಿಕೊಡಬೇಕು ಎಂಬ ಇರಾದೆಯಿದೆ. ಆದರೆ ಈಗಾಗಲೇ ಆತುರ ಬಿದ್ದು ಎರಡು ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ಮೂರನೇ ಚುನಾವಣೆಯಲ್ಲೂ ಸೋಲಾದರೆ ತಮ್ಮ ಪುತ್ರನಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾದೀತು ಎಂಬ ಭಯವೂ ಇದೆ.

ತಮ್ಮ ಪುತ್ರನನ್ನು ಕಣಕ್ಕಿಳಿಸುವ ಆಸೆ ಅವರಿಗೆ ಇರುವುದು ಬಿಜೆಪಿ ನಾಯಕರಿಗೆ ಗೊತ್ತಿರುವುದರಿಂದ, ಅವರ ತೀರ್ಮಾನದಿಂದ ಒಂದು ನಿಶ್ಚಿತ ದೂರವನ್ನು ಕಾಯ್ದುಕೊಳ್ಳುವ ತಂತ್ರವನ್ನು ಅವರು ಅನುಸರಿಸುತ್ತಿರುವ ಹಾಗಿದೆ. ಯಾರನ್ನು ಬೇಕಾದರೂ ಘೋಷಿಸಿಕೊಳ್ಳಲಿ ಎಂಬ ಮಾತಿನಲ್ಲಿಯೇ ತಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ಧೋರಣೆ ಸ್ಪಷ್ಟವಾಗಿದೆ.

ತಮ್ಮನ್ನು ತಾವು ಭಾರೀ ಚಾಣಾಕ್ಷ ರಾಜಕಾರಣಿ ಎಂದುಕೊಂಡಿರುವ ಕುಮಾರಸ್ವಾಮಿಗೆ ಈ ಸೂಕ್ಷ್ಮ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅವರು ಇತ್ತೀಚೆಗೆ ಆಡುವ ಮಾತುಗಳು, ತೋರಿಸುತ್ತಿರುವ ನಡವಳಿಕೆಗಳನ್ನೆಲ್ಲ ನೋಡಿದರೆ, ಈ ಬಗ್ಗೆ ಸಂಶಯವೇ ಮೂಡುತ್ತದೆ.

ಆದರೆ ತನ್ನ ನಿರ್ಧಾರದಲ್ಲಿ ಬಿಜೆಪಿ ತಲೆಹಾಕುವುದಿಲ್ಲ ಎನ್ನುವುದೇ ಕುಮಾರಸ್ವಾಮಿಯವರ ಎದುರು ಸಂದಿಗ್ಧ ಪರಿಸ್ಥಿತಿ ತಲೆದೋರುವುದಕ್ಕೂ ಕಾರಣವಾಗದೇ ಇಲ್ಲ.

ಅವರ ಕ್ಷೇತ್ರ, ಅವರ ಆಯ್ಕೆಯ ಅಭ್ಯರ್ಥಿ, ಅವರೇ ಘೋಷಿಸುವ ಸ್ವಾತಂತ್ರ್ಯ.

ಇದು ತನ್ನ ಮಿತ್ರಪಕ್ಷವನ್ನು ಬಿಜೆಪಿ ಒಬ್ಬಂಟಿಯನ್ನಾಗಿ ಮಾಡಿರುವ ರೀತಿಯಂತೆಯೂ ಇದೆ. ಯಾಕೆಂದರೆ, ರಾಜ್ಯ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿಯವರ ಬಗ್ಗೆ ಅಸಮಾಧಾನ ಇದೆ.

ಎಲ್ಲ ವಿಚಾರಗಳಲ್ಲೂ ತಮ್ಮನ್ನು ಕಡೆಗಣಿಸುತ್ತಾರೆ ಎಂಬ ಅಸಮಾಧಾನ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗಿದೆ. ಅಲ್ಲದೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಡಾ. ಅಶ್ವತ್ಥ್ ನಾರಾಯಣ ಸೇರಿದಂತೆ ಬಿಜೆಪಿಯ ಒಕ್ಕಲಿಗ ನಾಯಕರೂ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೋಲಾರ ಕೇತ್ರವನ್ನು ಬಿಟ್ಟುಕೊಟ್ಟಿದ್ದೆವು. ಅದೇ ರೀತಿ ಜೆಡಿಎಸ್ ಮುಖಂಡರು ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಎರಡು ದಿನಗಳ ಹಿಂದೆ ಹೇಳಿದ್ದನ್ನೂ ಗಮನಿಸಬಹುದು.

ಕೋಲಾರ ಕ್ಷೇತ್ರ ಬಿಜೆಪಿ ವಶದಲ್ಲಿದ್ದರೂ ನಾವು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೆವು ಮತ್ತು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಶ್ರಮ ಹಾಕಿದ್ದೆವು. ಈಗ ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿಯ ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬೇಕಿದ್ದರೆ ಅವರಿಗೆ ಜೆಡಿಎಸ್ ತನ್ನ ಪಕ್ಷದಿಂದಲೇ ಟಿಕೆಟ್ ನೀಡಲಿ. ನಾವು ಪಕ್ಷ ಯಾವುದೆಂದು ನೋಡದೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದರು.

ಆದರೆ, ಇದಕ್ಕೂ ಸ್ಪಷ್ಟನೆ ಎಂಬಂತೆ, ಜೆಡಿಎಸ್ ಚಿಹ್ನೆಯಡಿ ಬಿಜೆಪಿಯವರು ನಿಲ್ಲುವ ಯೋಚನೆ ಇಲ್ಲ ಎಂದು ಕೂಡ ಯಡಿಯೂರಪ್ಪ ಹೇಳಿದ್ದಾರೆ.

ಯೋಗೇಶ್ವರ್ ಕೂಡ ತಾವು ಸ್ಪರ್ಧಿಸುವುದಾದರೆ ಬಿಜೆಪಿ ಟಿಕೆಟ್‌ನಲ್ಲೇ ಎಂದು ಹೇಳಿಬಿಟ್ಟಿದ್ದರು. ಎನ್‌ಡಿಎ ಅಭ್ಯರ್ಥಿಯೇ ಗೆಲ್ಲಬೇಕು ಎಂದಾದರೆ ಬಿಜೆಪಿಗೆ ಬಿಟ್ಟು ಕೊಟ್ಟರೆ ಏನು ಸಮಸ್ಯೆಯಿದೆ ಎಂದು ಅವರು ಕೇಳಿದ್ದರು.

ಅಂದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಕಣಕ್ಕಿಳಿಯುವುದರ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೇ ಸಹಮತವಿಲ್ಲ ಮತ್ತು ಸಮಾಧಾನವೂ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇವೆಲ್ಲವೂ, ಕುಮಾರಸ್ವಾಮಿಯವರನ್ನು ಈ ಬಾರಿಯ ಚುನಾವಣೆಯಲ್ಲಿ ಏಕಾಂಗಿಯಾಗಿಸುವ ಎಲ್ಲ ಸುಳಿವುಗಳನ್ನೂ ಕಾಣಿಸುತ್ತಿದೆ ಮತ್ತು ಈಗ ಅಭ್ಯರ್ಥಿ ಘೋಷಣೆಯ ಹಂತದಿಂದಲೇ ಅವರನ್ನು ಒಬ್ಬಂಟಿಯಾಗಿಸುವುದೂ ನಡೆದಿದೆ.

ಹೀಗೆ ಒಂದೆಡೆ, ಕುಮಾರಸ್ವಾಮಿಯವರನ್ನು ಬಿಜೆಪಿ ನಾಯಕರು ಒಬ್ಬಂಟಿಯಾಗಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದೆಡೆ ಯೋಗೇಶ್ವರ್ ನಡೆ ಕೂಡ ಕುಮಾರಸ್ವಾಮಿಗೆ ಸವಾಲಿನದ್ದಾಗಲಿದೆ.

ಯೋಗೇಶ್ವರ್ ಚನ್ನಪಟ್ಟಣದಲ್ಲಿ ವೈಯಕ್ತಿಕ ವರ್ಚಸ್ಸುಳ್ಳ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಅವರು ಪಕ್ಷದ ಬಲವಿಲ್ಲದೆಯೂ ಪೈಪೋಟಿಯೊಡ್ಡಬಲ್ಲರು.

15 ವರ್ಷಗಳ ಹಿಂದೆ 2008ರಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದವರು ಸಿಪಿ ಯೋಗೇಶ್ವರ್. ಆನಂತರ ಬಿಜೆಪಿಯನ್ನೂ, ಎಸ್‌ಪಿಯನ್ನೂ ಒಂದೊಂದು ಸಲ ಅಲ್ಲಿ ಗೆಲ್ಲಿಸಿದ ಶ್ರೇಯಸ್ಸು ಕೂಡ ಯೋಗೇಶ್ವರ್ ಅವರದೇ ಆಗಿದೆ.

2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರು ಕುಮಾರಸ್ವಾಮಿಗೆ ಪ್ರಬಲ ಪೈಪೋಟಿ ನೀಡಿದ್ದರು.

ಹಿಂದೆ ಈ ಕ್ಷೇತ್ರಕ್ಕೆ ನಡೆದಿದ್ದ ಎರಡು ಉಪ ಚುನಾವಣೆಗಳಲ್ಲಿಯೂ ಸ್ಪರ್ಧಿಸಿದ್ದ ಯೋಗೇಶ್ವರ್, ಒಂದರಲ್ಲಿ ಸೋತು, ಇನ್ನೊಂದರಲ್ಲಿ ಗೆದ್ದಿದ್ದರು.

ಸೋತಾಗಲೂ ಅವರು ಗಳಿಸಿರುವ ಮತಗಳ ಪ್ರಮಾಣ ಗಮನಾರ್ಹ. ಅಂತಹ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಏನಾಗಬಹುದು?

ಯೋಗೇಶ್ವರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತೋ ಅದರಂತೆ ಆಗಲಿದೆ ಎಂಬ ಮಾತನ್ನು ಯಡಿಯೂರಪ್ಪ ಹೇಳಿದ್ದಾರೆ.

ಆದರೆ ಯೋಗೇಶ್ವರ್ ಈಗ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರನಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದೇನೆ ಎನ್ನುವ ಮೂಲಕ ಬಿಜೆಪಿ ಹೈಕಮಾಂಡ್ ಅನ್ನೂ ಮೀರಿ ತಮ್ಮದೇ ನಿರ್ಧಾರ ತೆಗೆದುಕೊಂಡಿದ್ದಾರೆ.

ಇವೆಲ್ಲದರ ನಡುವೆ ಕಾಂಗ್ರೆಸ್ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಚನ್ನಪಟ್ಟಣ ಚುನಾವಣೆ ಗೆಲ್ಲುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ ಎನ್ನುವುದಕ್ಕಿಂತ ಹೆಚ್ಚಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಆ ಭಾಗದಲ್ಲಿ ತಮ್ಮ ಪ್ರಾಬಲ್ಯ ಸಾಬೀತು ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಚುನಾವಣೆಯ ಕಾರಣದಿಂದ ತಲೆದೋರಿದೆ.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಎದುರು ಉಂಟಾದ ಸೋಲಿಗೆ ಈ ಚುನಾವಣೆ ಮೂಲಕ ಉತ್ತರ ನೀಡಿ, ಆ ಸೋಲಿನಿಂದಾದ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವ ಅನಿವಾರ್ಯವೂ ಡಿ.ಕೆ. ಶಿವಕುಮಾರ್ ಅವರ ಎದುರು ಇದೆ. ಹಾಗಾಗಿಯೇ ಚನ್ನಪಟ್ಟಣದಲ್ಲಿ ತಾನೇ ಅಭ್ಯರ್ಥಿ ಎಂದು ಅವರು ಹೇಳುತ್ತ ಬಂದಿರುವುದು.

ಅದರರ್ಥ ಅದು ಅವರ ಪ್ರತಿಷ್ಠೆಯ ಕ್ಷೇತ್ರ. ಯಾರೇ ಅಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ, ಗೆಲ್ಲಲೇಬೇಕಿರುವ ಡಿ.ಕೆ. ಶಿವಕುಮಾರ್ ಆವರ ಆಕಾಂಕ್ಷೆಯನ್ನು ಆ ಅಭ್ಯರ್ಥಿ ಪ್ರತಿನಿಧಿಸುತ್ತಾನೆ. ಆದರೆ ಈಗ ಪ್ರಶ್ನೆಯಿರುವುದು ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು.

ಅವರ ಸೋದರ ಸುರೇಶ್ ಹೆಸರು ಕೇಳಿಬರುತ್ತಲೇ ಇದೆಯಾದರೂ ಈಗ ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಯೋಗೇಶ್ವರ್‌ಗೆ ಉಂಟಾದ ಅಸಮಾಧಾನವನ್ನು ಬಳಸಿಕೊಳ್ಳುವ ತಂತ್ರವೇನಾದರೂ ಡಿ.ಕೆ. ಶಿವಕುಮಾರ್ ಎದುರಿಗಿದೆಯೇ?

ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಎಲ್ಲ ತಯಾರಿ ಮಾಡಿಕೊಂಡಿರುವ ಯೋಗೇಶ್ವರ್ ಈ ಹಂತದಲ್ಲಿ ಕಾಂಗ್ರೆಸ್ ಸೇರಲು ಬಯಸುತ್ತಾರೆಯೇ?

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ತ್ರಿಕೋನ ಸ್ಪರ್ಧೆಗೆ ಅವಕಾಶ ಮಾಡಿಕೊಡು ವುದಕ್ಕಿಂತಲೂ, ಜೆಡಿಎಸ್ ಅಭ್ಯರ್ಥಿಗೆ ನೇರ ಪೈಪೋಟಿಯೊಡ್ಡಬಹುದಾದ ಅವಕಾಶವೇ ಸರಿ ಎಂಬ ನಿರ್ಧಾರಕ್ಕೆ ಯೋಗೇಶ್ವರ್ ಕೂಡ ಬರಲೂ ಬಹುದು.

ಆದರೆ, ಸ್ವತಃ ಡಿ.ಕೆ. ಶಿವಕುಮಾರ್ ಈಗ ಕ್ಷೇತ್ರವನ್ನು ತಮ್ಮ ಕುಟುಂಬದ ಹಿಡಿತಕ್ಕೆ ತೆಗೆದುಕೊಳ್ಳಲು ಒದಗಿರುವ ಅವಕಾಶವನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ಹಾಗಾಗಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆದು ಚನ್ನಪಟ್ಟಣವನ್ನು ಅಷ್ಟು ಸುಲಭವಾಗಿ ಒಪ್ಪಿಸಿಬಿಡಲಾರರು.

ತಮ್ಮ ಸೋದರ ಸುರೇಶ್ ಅವರನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡರೆ ತಮ್ಮ ರಾಜಕೀಯ ಪ್ರಾಬಲ್ಯ ಹೆಚ್ಚುವುದರೊಂದಿಗೆ, ಕುಮಾರಸ್ವಾಮಿ ಕುಟುಂಬ ಪೂರ್ತಿಯಾಗಿ ಬದಿಗೆ ಸರಿಯುವಂತಾಗುತ್ತದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಚೆನ್ನಾಗಿಯೇ ಬಲ್ಲರು.

ಚನ್ನಪಟ್ಟಣ ಕುಮಾರಸ್ವಾಮಿಯ ಕೈತಪ್ಪಿದರೆ, ಕೇಂದ್ರ ಸರಕಾರದಲ್ಲಿ ಕೂಡ ಕುಮಾರಸ್ವಾಮಿಯ ಮಹತ್ವ ಕಡಿಮೆಯಾಗಿ, ಇತ್ತ ಬಿಜೆಪಿ ನಾಯಕರು ಕೂಡ ಅವರನ್ನು ಮುಲಾಜಿಲ್ಲದೆ ಬದಿಗೆ ಸರಿಸುತ್ತಾರೆ. ಇದ್ದಕ್ಕಿದ್ದಂತೆ ಡಿ.ಕೆ. ಶಿವಕುಮಾರ್ ಕುಟುಂಬ ಹೆಚ್ಚು ಪ್ರಾಬಲ್ಯ ಸಾಧಿಸುವುದು ಸಾಧ್ಯವಾಗುತ್ತದೆ.

ಇದೆಲ್ಲದಕ್ಕೂ ಪೂರಕ ಎನ್ನುವಂತೆ ಡಿ.ಕೆ. ಸುರೇಶ್ ಹೇಳಿಕೆಯಿದೆ. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ಒತ್ತಡವಿದೆ ಎಂದು ಅವರು ಸುರೇಶ್ ರವಿವಾರ ಹೇಳಿದ್ದಾರೆ.

ಈ ಭಾಗದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು, ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. ಚನ್ನಪಟ್ಟಣ ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿಸಲಾಗಿದೆೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಎಲ್ಲರೂ ಹೇಳಿದ್ದು, ನನ್ನ ಮೇಲೂ ಸ್ಪರ್ಧಿಸುವಂತೆ ಒತ್ತಡವಿದೆ ಎಂದಿದ್ದಾರೆ.

ಯೋಗೇಶ್ವರ್‌ಗೆ ಬಿಜೆಪಿ ನಾಯಕರಲ್ಲಿ ಹೆಚ್ಚಿನವರ ಬೆಂಬಲ ಇದೆ ಎಂಬುದೂ ನಿಜ. ಹಾಗಾಗಿ ಯೋಗೇಶ್ವರ್ ತೆಗೆದುಕೊಳ್ಳುವ ತೀರ್ಮಾನದ ಹಿಂದೆ ಆ ಧೈರ್ಯವೂ ಇರಲಿದೆ.

ಒಂದು ವೇಳೆ ಯಾವ್ಯಾವುದೋ ಒತ್ತಡಕ್ಕೆ ಮಣಿದು, ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದರೂ ಯೋಗೇಶ್ವರ್ ಸಕ್ರಿಯ ಬೆಂಬಲವೇನೂ ಜೆಡಿಎಸ್ ಅಭ್ಯರ್ಥಿಯ ಬಲಕ್ಕಿರಲಾರದು. ಅಭ್ಯರ್ಥಿಯಾಗದ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ತಡೆಯಾಗುವುದು ಬಹುತೇಕ ಖಚಿತ.

ಜೆಡಿಎಸ್ ಅಭ್ಯರ್ಥಿ ಅಧಿಕೃತವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದರೂ, ಸ್ಥಳೀಯ ಹಾಗೂ ರಾಜ್ಯ ಬಿಜೆಪಿಯಿಂದ ಸಕ್ರಿಯ ಸಹಕಾರ ಮತ್ತು ಬೆಂಬಲ ಸಿಗುವುದು ಮಾತ್ರ ಕಷ್ಟ. ಪುತ್ರನನ್ನೇ ಕಣಕ್ಕಿಳಿಸಿದರೂ ಅದು ಕುಮಾರಸ್ವಾಮಿಯವರ ಏಕಾಂಗಿ ಹೋರಾಟ ವಾಗಲಿರುವುದು ಬಹುತೇಕ ನಿಶ್ಚಿತ. ಬಹುಶಃ ಇದು, ಮುಂದೆ ರಾಜಕೀಯವಾಗಿ ಕುಮಾರಸ್ವಾಮಿಯವರು ಒಬ್ಬಂಟಿಯಾಗಲಿರುವುದರ ಆರಂಭವೂ ಆಗಿರುವಂತೆ ಕಾಣಿಸುತ್ತದೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News