ಕಾಮಿಡಿಯನ್ ಆಗಿಯೇ ಉಳಿದ ಸಿ ಎಂ ಇಬ್ರಾಹಿಂ !

Update: 2023-10-15 10:53 GMT
Editor : Althaf | Byline : ಆರ್. ಜೀವಿ

“ನಾನು ಬಿಜೆಪಿಯವರ ಮನೆಯಲ್ಲೂ ಊಟ ಮಾಡ್ತೀನಿ, ಜೆಡಿಎಸ್ ಜೊತೆಗೂ ಚೆನ್ನಾಗಿದ್ದೀನಿ.” ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವ ಯೋಚನೆ ಮಾಡುತ್ತಿದ್ದ ಹೊತ್ತಲ್ಲಿ ಇಂಥ ಒಂದು ಹೇಳಿಕೆಯನ್ನು ಸಿಎಂ ಇಬ್ರಾಹಿಂ ನೀಡಿದ್ದರು. ಈಗ, ಅವರು ರಾಜ್ಯಾಧ್ಯಕ್ಷರಾಗಿರುವ ಜೆಡಿಎಸ್, ಅವರೊಬ್ಬರು ಇದ್ದಾರೆ ಎಂಬುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಸ್ವತಃ ಇಬ್ರಾಹಿಂ ಅವರೇ, ನಾಲ್ಕು ಜನ ಹೋಗಿ ಮದುವೆ ಮಾಡಿಕೊಂಡು ಬಂದಿದ್ದಾರೆ ಎಂದು ಈ ಮೈತ್ರಿಯನ್ನು ಲೇವಡಿ ಮಾಡಿದ್ದೂ ಆಗಿದೆ. ಬಿಜೆಪಿಯವರ ಮನೆಯಲ್ಲೂ ಊಟ ಮಾಡ್ತೀನಿ, ಜೆಡಿಎಸ್ ಜೊತೆಗೂ ಚೆನ್ನಾಗಿದ್ದೀನಿ ಎಂದು ತೀರಾ ಇತ್ತೀಚಿಗೆ ಹೇಳಿದ್ದ ಸಿಎಂ ಇಬ್ರಾಹಿಂ ಈಗ ನಿಜವಾಗಿಯೂ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅವರು ರಾಜ್ಯಾಧ್ಯಕ್ಷರಾಗಿರುವ ಪಕ್ಷದಲ್ಲಿ ಅವರಿದ್ದಾರೆ ಎಂಬುದನ್ನೇ ಗಣನೆಗೆ ತೆಗೆದುಕೊಂಡಿಲ್ಲ. ಅವರಿಗೂ ಪಕ್ಷದ ಯಾವುದೇ ಬೆಳವಣಿಗೆಗೂ ಸಂಬಂಧವೇ ಇಲ್ಲದ ಹಾಗಾಗಿದೆ. ಶಿಷ್ಟಾಚಾರಕ್ಕೂ ರಾಜ್ಯಾಧ್ಯಕ್ಷರ ಬಳಿ ಕೇಳಬೇಕು ಅಂತ ಹೇಳಿಲ್ಲ ಕುಮಾರಸ್ವಾಮಿ. ಬದಲಿಗೆ ಅವರನ್ನು ರಾಜ್ಯಾಧ್ಯಕ್ಷ ಮಾಡಿ ನಮಗೆ ಸಿಕ್ಕಿದ್ದೇನು ಅಂತಾನೆ ಕೇಳಿ ತೀವ್ರ ಮುಜುಗರ ತಂದಿಟ್ಟಿದ್ದಾರೆ.

ಈಗಲೂ ಸಿ ಎಂ ಇಬ್ರಾಹಿಂ ಅವರಿಗೆ ಏಕೆ ಅವರಿಗೆ ಬಿಜೆಪಿಯವರ ಮನೆಯಲ್ಲಿ ಊಟ ಮಾಡಿಕೊಂಡು. ಜೆಡಿಎಸ್ ಜೊತೆಗೂ ಚೆನ್ನಾಗಿರಲು ಆಗುತ್ತಿಲ್ಲ ?. ಕಾಂಗ್ರೆಸ್ ಬಿಡುವ ಹೊತ್ತಲ್ಲಿ ಇನ್ನೂ ನಾಲ್ಕು ವರ್ಷ ಅವಧಿಯಿದ್ದ ವಿಧಾನ ಪರಿಷತ್ ಸದಸ್ಯತ್ವವನ್ನು ಬಿಟ್ಟು ಜೆಡಿಎಸ್ ಸೇರುವಾಗ ನಿಜವಾಗಿಯೂ ಇಬ್ರಾಹಿಂ ಮನಸ್ಸಲ್ಲಿ ಏನಿತ್ತು?

ಇದು ಒಂದೆಡೆಗೆ ಇರಲಿ. ಇನ್ನೊಂದು ವಿಚಾರವನ್ನು ನೋಡೋಣ. ವಿಧಾನಸಭೆ ಚುನಾವಣೆಗೂ ಮೊದಲು ಒಂದು ಅಬ್ಬರದ ಹೇಳಿಕೆಯನ್ನು ಇಬ್ರಾಹಿಂ ನೀಡಿದ್ದರು. ಎಚ್ಡಿ ಕುಮಾರಸ್ವಾಮಿ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯೋದಾಗಿ ಇಬ್ರಾಹಿಂ ಹೇಳಿದ್ದರು.

ಕುಮಾರಸ್ವಾಮಿ ಒಂದಿಷ್ಟು ದಿನ ಮುಖವನ್ನೇ ತೋರಿಸದ ಸ್ಥಿತಿ ತಲೆದೋರುವ ಹಾಗೆ ಫಲಿತಾಂಶ ಬಂತು. ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಇಬ್ರಾಹಿಂ ಕೂಡ ಆಮೇಲೆ ಎಲ್ಲೂ ತೆರೆ ಮೇಲೆ ಕಾಣಿಸಿರಲಿಲ್ಲ. ಈಗ ಅವರು ರಾಜಕೀಯದಿಂದ ನಿವೃತ್ತಿ ಪಡೆಯುತ್ತಾರೋ, ಇಲ್ಲವೊ ಬೇರೆ ಮಾತು, ಜೆಡಿಎಸ್ನ ತೆನೆ ಬಿಟ್ಟು, ಮತ್ತೊಮ್ಮೆ ಕಾಂಗ್ರೆಸ್ ಕೈಯನ್ನೇ ಕುಲುಕುವುದೋ , ಜೆಡಿಯು ಬಾಣವನ್ನು ಹಿಡಿಯುವುದೊ, ಎನ್ಸಿಪಿಯ ಗಡಿಯಾರದೆದುರು ಸಮಯ ಪರೀಕ್ಷೆ ಎದುರಿಸುವುದೋ ಎಂಬ ಗೊಂದಲದಲ್ಲಿ ಬಿದ್ದಿದ್ದಾರೆ.

ಅದರ ನಡುವೆಯೂ ದೇವೇಗೌಡರು ತಂದೆ ಸಮಾನ, ಕುಮಾರಸ್ವಾಮಿ ಸೋದರನ ಸಮಾನ ಎಂದು ಹೇಳುತ್ತಿರುವ ಇಬ್ರಾಹಿಂ ವರಸೆ ಏನು?. ಸೀದಾ ದೆಹಲಿಗೆ ಹೋಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಾಗ, ಪಕ್ಷಾಧ್ಯಕ್ಷ ಹುದ್ದೆಯಲ್ಲಿದ್ದ ತನ್ನನ್ನು ತಂದೆ ಸಮಾನರಾದ ದೇವೇಗೌಡರಾಗಲೀ ಸೋದರ ಸಮಾನರಾದ ಕುಮಾರಸ್ವಾಮಿಯವರಾಗಲೀ ಒಂದು ಮಾತೂ ಕೇಳಲಿಲ್ಲ ಎಂದು ಈಗ ಏಕೆ ಇಬ್ರಾಹಿಂ ಕೊರಗುತ್ತಿದ್ದಾರೆ.

ಒಂದಲ್ಲ ಒಂದು ದಿನ ಇದೆಲ್ಲವೂ ಹೀಗೇ ಆಗಲಿದೆ ಎಂದು ಗೊತ್ತಿಲ್ಲದೆಯೆ ಅವರೇನಾದರೂ ಜೆಡಿಎಸ್ ಸೇರಿದರಾ?. ಹಾಗೆನ್ನಿಸುವುದಿಲ್ಲ. ಎಲ್ಲವೂ ಗೊತ್ತಿದ್ದೂ ಜೆಡಿಎಸ್ ಗೆ ಹೋದ ಅವರದ್ದು ತೀರಾ ಸಮಯ ಸಾಧಕತನ, ಅವಕಾಶವಾದಿ ರಾಜಕಾರಣ ಎನ್ನಿಸುವುದಿಲ್ಲವೆ?. ಈಗಲೂ ಸ್ಪಷ್ಟವಾಗಿ ವಿರೋಧಿಸಿ ಬಿಟ್ಟು ಬರಲಾಗದ ದ್ವಂದ್ವ ಅವರಲ್ಲಿ ಏಕಿದೆ?. ಅವರು ಕರೆದಿದ್ದಾರೆ, ಇವರು ಕರೆಯುತ್ತಿದ್ಧಾರೆ ಎನ್ನುತ್ತಿರುವ ಇಬ್ರಾಹಿಂ, ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಮಾಡುತ್ತೇನೆ ಎನ್ನುತ್ತಿರುವುದೇಕೆ?

ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಇಬ್ರಾಹಿಂ, ದೆಹಲಿಗೆ ಹೋಗುವಾಗ ತನಗೊಂದು ಮಾತು ಹೇಳಲಿಲ್ಲ ಎಂಬುದರ ಬಗ್ಗೆ ತಕರಾರೆತ್ತುತ್ತಿದ್ದಾರೆ. ಅವರ ತಕರಾರು ಬಿಜೆಪಿ ಜೊತೆ ಮೈತ್ರಿಯ ಬಗ್ಗೆಯೇ ? ಅಥವಾ ಮೈತ್ರಿ ಮಾತುಕತೆಗೆ ತನ್ನನ್ನೂ ಕರೆದುಕೊಂಡು ಹೋಗಿ ಅಮಿತ್ ಶಾ ಜೊತೆ ಕೈಕುಲುಕಲು ಅವಕಾಶ ಮಾಡಿ ಕೊಟ್ಟಿಲ್ಲ ಎಂದೇ ?.

ಇಬ್ರಾಹಿಂ ಅವರ ಹೇಳಿಕೆಯಿಂದ ಅದರ ಬಗ್ಗೆಯೇ ಸಂಶಯ ಮೂಡುತ್ತದೆ. ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದಕ್ಕಿಂತ ತಮ್ಮೊಂದಿಗೆ ಚರ್ಚಿಸಲಿಲ್ಲ ಎಂಬುದಕ್ಕಾಗಿ ಇಬ್ರಾಹಿಂ ಬೇಸರಗೊಂಡಿದ್ದಾರೆಯೆ?. ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ತಮ್ಮೊಂದಿಗೆ ಚರ್ಚಿಸಿಲ್ಲ ಎಂಬುದು ಅವರಿಗೆ ಸ್ವಾಭಿಮಾನದ, ಘನತೆಯ ಪ್ರಶ್ನೆಯಾಗಬೇಕಿತ್ತೆ ಹೊರತು, ಅದು ಸಣ್ಣ ದನಿಯಲ್ಲಿ ತಕರಾರು ತೆಗೆಯುತ್ತ, ಅಲ್ಲಿಯೇ ಅಂಟಿಕೊಂಡಿರುವಂಥ ವಿಚಾರವಾಗಿರಲಿಲ್ಲ.

ಹಲವು ದಶಕಗಳಿಂದ ರಾಜಕಾರಣದಲ್ಲಿದ್ದ ಹಿರಿಯ ರಾಜಕಾರಣಿಗೆ ಅಂಥದೊಂದು ಕಡೆಗಣನೆ ಅಲ್ಲಿಂದ ಒಂದು ಕ್ಷಣವೂ ತಡಮಾಡದೆ ಹೊರಬರುವುದಕ್ಕೆ ಸಾಕಿತ್ತು. ಹಾಗಿರುವಾಗಲೂ ಅವರನ್ನು ಅಲ್ಲಿಯೇ ತಡೆದು ನಿಲ್ಲಿಸಿರುವ ಸಂಗತಿಯಾದರೂ ಏನು?

ನಿರ್ಧಾರ ತೆಗೆದುಕೊಳ್ಳಲು ಅಕ್ಟೋಬರ್ 16ರ ಮುಹೂರ್ತ ಇಟ್ಟುಕೊಂಡು ಇಬ್ರಾಹಿಂ ಕೂತಿರುವುದರ ಹಿನ್ನೆಲೆ ಏನು?. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಜೆಡಿಎಸ್ ಚಿಹ್ನೆ ಉಳಿಯುತ್ತದೆಯೆ ಎಂದು ಏಕೆ ಇಬ್ರಾಹಿಂ ತಲೆಕೆಡಿಸಿಕೊಂಡು ಕೂತಿದ್ದಾರೆ ?. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ನಾವು ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಆಗುವುದಿಲ್ಲ ಎಂದು ಜೆಡಿಎಸ್ ಒಳಗಡೆ ಇಬ್ರಾಹಿಂ ಅವರೊಬ್ಬರು ಹೇಳುತ್ತಿದ್ದರೆ ಅದು ಜಾತ್ಯತೀತ ಪಕ್ಷವಾಗಿ ಉಳಿಯುತ್ತದೆಯೆ?

ಹಾಗಾಗಲು ಸಾಧ್ಯವಿಲ್ಲ. ಇಬ್ರಾಹಿಂ ಎಂಬ ಒಬ್ಬರು ಅಲ್ಲಿದ್ದಾರೆ ಎಂಬುದನ್ನೇ ಕುಮಾರಸ್ವಾಮಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಅಂದಮೇಲೆ ಇಬ್ರಾಹಿಂ ಅವರಲ್ಲಿರುವ ಗೊಂದಲಗಳೇನು?. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಘೋಷಣೆಯಾಗಿ ಇಷ್ಟು ದಿನಗಳ ಬಳಿಕ ಈಗ ಇದ್ದಕ್ಕಿದ್ದಂತೆ ಮಾಧ್ಯಮಗಳೆದುರು ಪ್ರತ್ಯಕ್ಷರಾಗಿ, ಕಾಂಗ್ರೆಸ್ನವರು ವಾಪಸ್ ಬನ್ನಿ ಅಂತಿದ್ದಾರೆ, ನಿತೀಶ್ ಕುಮಾರ್ ಕರೀತಿದ್ದಾರೆ, ಶರದ್ ಪವಾರ್ ಕೂಡ ಸಂಪರ್ಕ ಮಾಡಿದ್ದಾರೆ. ಯಾರ ಜೊತೆ ಹೋಗೋದು ಅನ್ನೋದನ್ನು ತೀರ್ಮಾನಿಸ್ತೀನಿ ಎಂದೆಲ್ಲ ಹೇಳಿರುವುದರ ಮರ್ಮ ಏನು ಎಂಬ ಪ್ರಶ್ನೆಯೂ ಕಾಡುತ್ತದೆ.

ಇಲ್ಲಿ ಹಲವು ವರ್ಷಗಳಿಂದ ಪ್ರಭಾವ ಇರೋ ಪಕ್ಷಕ್ಕೇ ಹೋಗಿ ಇಬ್ರಾಹಿಂ ಮಾಡಿದ ಸಾಧನೆ ಏನು ಅನ್ನೋದು ರಾಜ್ಯದ ಜನರ ಮುಂದಿದೆ. ಹೀಗಿರುವಾಗ ರಾಜ್ಯದಲ್ಲಿ ಏನೇನು ಅಲ್ಲದ ಜೆಡಿಯು, ಎನ್ ಸಿ ಪೀ ಇತ್ಯಾದಿ ಪಕ್ಷಗಳಿಗೆ ಸೇರಿ ಇಬ್ರಾಹಿಂ ಅವರು ಕಡಿದು ಕಟ್ಟೆ ಹಾಕೋದೇನು ?

ಕಾಂಗ್ರೆಸ್ ಬಿಡುವ ಸೂಚನೆಗಳಿದ್ದಾಗಲೂ ಆ ಪಕ್ಷದ ನಾಯಕರು ಉಳಿಸಿಕೊಳ್ಳಲು ಸಾಕಷ್ಟು ನೋಡಿದ್ದರು. ಆಗ ಸಾಧ್ಯವಿರುವ ಹುದ್ದೆ, ಅಧಿಕಾರ, ಅವಕಾಶ ಎಲ್ಲವನ್ನೂ ನೀಡಿದರು.

ಅನಂತರ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಅಲ್ಲಿಂದ ಜೆಡಿಎಸ್ಗೆ ಬಂದರು. ಈಗ ಅವರು ಬಂದಿದ್ದರಿಂದ ಆಗಿರುವ ಸಂಪಾದನೆ ಏನು ಎಂದು ಕುಮಾರಸ್ವಾಮಿ ಕೇಳಿದ್ದೂ ಆಯಿತು.  ಜೆಡಿಎಸ್ ಗೆ ಅಷ್ಟು ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಇಬ್ರಾಹಿಂ ಸಾಹೇಬರು.ಇಬ್ರಾಹಿಂ ಭಾಷಣ ಓಟು ತರುವುದಿಲ್ಲ ಎಂಬುದು ಕಾಂಗ್ರೆಸ್ಗೆ ಯಾವತ್ತೋ ಗೊತ್ತಾಗಿ ಹೋಗಿತ್ತು. ಈಗ ಜೆಡಿಎಸ್ ತನಗೂ ಲಾಭವಾಗಿಲ್ಲ ಎಂದುಬಿಟ್ಟಿದೆ.

ಜನರಿಂದ ಆಯ್ಕೆಯಾಗುವ ಚುನಾವಣೆಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಇಬ್ರಾಹಿಂ, ಇನ್ನು ಇತರರನ್ನು ಹೇಗೆ ಗೆಲ್ಲಿಸಿಕೊಂಡು ಬಂದಾರು ಎಂದು ಆಡಿಕೊಳ್ಳುವವರೇ ಇದ್ದಾರೆ. ಇಷ್ಟೊಂದು ವರ್ಷ ರಾಜಕಾರಣದಲ್ಲಿದ್ದು, ಅಧಿಕಾರ ಅನುಭವಿಸಿದ ಇಬ್ರಾಹಿಂ ಅವರು ತಮ್ಮ ಘನತೆ ಉಳಿಸಿಕೊಂಡಿದ್ದರೆ ಈ ಮಾತು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ಮಾಡಿದ್ದು ಏನೂ ಇಲ್ಲವಾದರೂ, ಮುಸ್ಲಿಂ ಕೋಟಾದಲ್ಲಿ ಅಧಿಕಾರ ಅನುಭವಿಸಿಕೊಂಡು ಬಂದ ಇಬ್ರಾಹಿಂ ಒಬ್ಬ ನಾಯಕನಾಗಿ ಬದ್ಧತೆ ತೋರುವಲ್ಲಿ, ಘನತೆ ಉಳಿಸಿ ಕೊಳ್ಳುವಲ್ಲಿಯೂ ವಿಫಲರಾದರು. ಒಂದಿಷ್ಟೂ ಹಿಂಜರಿಕೆ ಇಲ್ಲದೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತ, ತೀರಾ ಅವಕಾಶವಾದಿ ಎನ್ನಿಸಿಕೊಂಡುಬಿಟ್ಟರು. ಅಲ್ಲಿದ್ಧಾಗ ಇವರನ್ನೂ, ಇಲ್ಲಿದ್ಧಾಗ ಅವರನ್ನೂ ಅದದೇ ಮಾತುಗಳನ್ನು ಬಳಸಿ ಲೇವಡಿ ಮಾಡುವ ಅವರ ಭಾಷಣಗಳು ಅವತ್ತಿಗೂ ಇವತ್ತಿಗೂ ಒಮ್ಮೆ ನಕ್ಕು ಮರೆತುಬಿಡುವಂಥ ಕಾಮೆಡಿ ಬೈಟ್ ಗಳು ಮಾತ್ರವಾಗಿ ಉಳಿದುಬಿಟ್ಟವು.  

ಜೆಡಿಎಸ್ ಗೆ ಹೋಗಿ ಹೇಗಾದರೂ ಮಗನನ್ನು ಶಾಸಕ ಮಾಡಲು ಹೆಣಗಾಡಿದರು. ಅದಕ್ಕಾಗಿಯೇ ಅವರು ಜೆಡಿಎಸ್ ಗೆ ಹೋಗಿದ್ದು ಎಂದು ಜನ ಮಾತಾಡಿಕೊಂಡರು. ಹುಮನಾಬಾದ್ ನಲ್ಲಿ ಮಗ ಅಭ್ಯರ್ಥಿ ಎಂದು ಹೇಳಲು ಹೋದಾಗ ಅಲ್ಲಿನ ದರ್ಗಾದಲ್ಲಿ ಅವರು ಗೊಳೋ ಎಂದು ಅತ್ತಿದ್ದು ತೀರಾ ನಾಟಕೀಯವಾಗಿತ್ತು ಎಂದು ಎಲ್ಲರೂ ಟೀಕಿಸಿದರು. ಇಂತದ್ದೇ ರಾಜಕೀಯ ಜೀವನದ ಉದ್ದಕ್ಕೂ ಮಾಡಿಕೊಂಡು ಬಂದ ಇಬ್ರಾಹಿಂ ಅವರ ವರಸೆ ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಜೆಡಿಎಸ್ ಸೋತಿತು. ಅವರ ಮಗನೂ ಹೀನಾಯವಾಗಿ ಸೋತರು. ಆ ಮೂಲಕ ಇಬ್ರಾಹಿಂ ಅವರ ಸೋಗಲಾಡಿ ರಾಜಕೀಯವನ್ನೂ ಜನ ಸೋಲಿಸಿ ಮನೆಗೆ ಕಳಿಸಿದರು.

ಅಲ್ಲಿ ಸುತ್ತಿ ಇಲ್ಲಿ ಸುತ್ತಿ ಈಗ ಮತ್ತೊಮ್ಮೆ ಅದೇ ಗತಿ ಎಂದು ಕಾಂಗ್ರೆಸ್ ಕಡೆಗೆ ಹೋಗಲು ತೀರ್ಮಾನಿಸಿದರೂ, ಅಥವಾ ನಿತೀಶ್ ಕುಮಾರ್, ಶರದ್ ಪವಾರ್ ಎಂದುಕೊಂಡು ಅಲೆದರೂ, ಇಬ್ರಾಹಿಂ ಮನಸ್ಸಲ್ಲಿರುವುದು ಮಾತ್ರ ಯಾವ ಕಡೆ ತಿರುಗಿದರೆ ಕುರ್ಚಿ ಸಿಕ್ಕೀತು ಎಂಬ ಲೆಕ್ಕಾಚಾರ ಮಾತ್ರ.

ಗಾಂಭೀರ್ಯ ಉಳಿಸಿಕೊಂಡಿದ್ದರೆ, ರಾಜಕೀಯ ಬದ್ಧತೆ ಇದ್ದಿದ್ದರೆ ದೇಶದ ಒಬ್ಬ ಪ್ರಮುಖ ಲೀಡರ್ ಆಗಿ ನಿಲ್ಲಬಲ್ಲವರಾಗಿದ್ದ ಇಬ್ರಾಹಿಂ ಈಗಿನ ಹಂತದಲ್ಲಂತೂ ಯಾವುದೇ ಬಂಡವಾಳವಿಲ್ಲದೆ ತೀರಾ ಚೌಕಾಸಿಗೆ ಇಳಿದವರ ಹಾಗೆ ಕಾಣುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಕುಮಾರಸ್ವಾಮಿ ಸಿಎಂ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ಪಡೀತೇನೆ ಎಂದು ಅವರೇ ಹೇಳಿರುವ ಮಾತನ್ನಾದರೂ ಅವರು ಉಳಿಸಿಕೊಳ್ಳುತ್ತಾರ ಎಂದು ಈಗ ರಾಜ್ಯದ ಜನ ಕೇಳ್ತಾ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News