ಹುಚ್ಚುಮನಸ್ಸಿನ ಹತ್ತು ಮುಖಗಳು

Update: 2023-06-24 18:41 GMT

ವ್ಯಕ್ತಿತ್ವ ಎಂದರೇನು? ನಾವು ಆಲೋಚಿಸುವ, ಭಾವಿಸುವ, ವರ್ತಿಸುವ ಮತ್ತು ಮಾಡುವ ಕೆಲಸಗಳ ಒಟ್ಟು ಮೊತ್ತದ ಪ್ರದರ್ಶನ. ಅದೇ ನಮ್ಮ ಆಲೋಚನೆಗಳು, ಭಾವನೆಗಳು, ವರ್ತನೆಗಳು ಮತ್ತು ಕೆಲಸಗಳು ನಮಗೆ ಮತ್ತು ಇತರರಿಗೆ ತೊಂದರೆ, ಒತ್ತಡ ಮತ್ತು ಅಶಾಂತಿಯನ್ನು ತರುತ್ತಿದೆ ಎಂದರೆ ಅಲ್ಲೇನೋ ದೋಷವಿದೆ ಎಂದು ತಿಳಿಯಬಹುದು. ಯಾವಾಗಲೋ ಒಮ್ಮೆ ಸಮಸ್ಯೆಯಾದರೆ ವ್ಯಕ್ತಿಯ ಮತ್ತು ಮತ್ತೊಬ್ಬ ವ್ಯಕ್ತಿ ಅಥವಾ ಸಮಾಜದ ನಡುವಿನ ಭಿನ್ನತೆಯ ಸಂಘರ್ಷ ಅಥವಾ ವ್ಯತ್ಯಾಸದ ತಾಕಲಾಟ ಎನ್ನಬಹುದು. ಆದರೆ ಯಾವಾಗಲೂ ಸಮಸ್ಯೆಯಾಗಿಯೇ ಉಳಿದಿದ್ದರೆ ಮೂಲದಲ್ಲಿ ಇರಬಹುದಾದ ದೋಷವನ್ನು ನಮ್ಮಲ್ಲಿ ಪರೀಕ್ಷಿಸಿಕೊಳ್ಳದೆ ಇರಲಾಗದು.

ಪದೇ ಪದೇ ಸುಳ್ಳುಗಳನ್ನು ಹೇಳುತ್ತಿದ್ದರೆ, ಸಾಮಾನ್ಯ ನಿಯಮಗಳನ್ನು ಧಿಕ್ಕರಿಸುತ್ತಿದ್ದರೆ ಅಥವಾ ಮುರಿಯು ತ್ತಿದ್ದರೆ, ಹಠಾತ್ತಾಗಿ ತಮ್ಮ ಕೋಪವನ್ನು ತೋರಿಸುತ್ತಿದ್ದರೆ, ಎಲ್ಲದಕ್ಕೂ ಜಗಳಕ್ಕೆ, ಸಂಘರ್ಷಕ್ಕೆ ಇಳಿಯುತ್ತಿದ್ದರೆ, ದಾಳಿ ಮಾಡುವ ಪ್ರವೃತ್ತಿಯನ್ನು ಹೊಂದಿದ್ದರೆ, ತನ್ನ ಸುರಕ್ಷತೆ ಮತ್ತು ಇತರರ ಸುರಕ್ಷತೆಯ ಬಗ್ಗೆ ಕಾಳಜಿಯನ್ನೇ ತೋರದಿದ್ದರೆ, ತೀವ್ರವಾಗಿ ಸ್ವಾರ್ಥಪರವಾಗಿದ್ದರೆ; ಬಹುಶಃ ಅವರದ್ದು ಸಮಾಜವಿರೋಧಿ ಸಮಸ್ಯೆಯ ವ್ಯಕ್ತಿತ್ವವಾಗಿರಬಹುದು.

ತಮ್ಮನ್ನು ನಿರಾಕರಿಸುತ್ತಾರೆ ಅಥವಾ ಖಂಡಿಸುತ್ತಾರೆಂಬ ಭಯ, ಸಮೂಹದಲ್ಲಿ ಬೆರೆಯಲು ವಿಪರೀತ ಸಂಕೋಚ, ವಿಪರೀತ ಮುಖೇಡಿತನ, ವ್ಯಕ್ತಿಗಳನ್ನು ಮತ್ತು ಗುಂಪುಗಳನ್ನು ಎದುರುಗೊಳ್ಳಲು ಅಂಜಿಕೆ ಅಥವಾ ತನಗೆ ಎದುರಿಸಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕಗಳಿದ್ದರೆ, ಅವರಿಗೆ ಮುಖೇಡಿತನ ಸಮಸ್ಯೆ ಇರಬಹುದು. ತಿರಸ್ಕಾರಕ್ಕೆ ಒಳರೈಲುುವಂತಹ ಭಾವನೆ, ಸಂಬಂಧಗಳನ್ನು ಅನುಮಾನಿಸುವ ಮತ್ತು ಅವರಿಂದ ತನಗೆ ಭರವಸೆ ಇಲ್ಲ, ತನ್ನನ್ನು ಸರಿಯಾಗಿ ನಡೆಸಿಕೊಳ್ಳು ವುದಿಲ್ಲ ಎಂದು ತಳಮಳಿಸುವುದು, ವ್ಯಕ್ತಿಗತವಾದ ತಮ್ಮ ವ್ಯಕ್ತಿತ್ವದ ಚಿತ್ರಣವನ್ನು ಇದ್ದಕ್ಕಿದ್ದಂತೆ ಮಾನಸಿಕವಾಗಿ ಬದಲಾಯಿಸಿಕೊಳ್ಳುವುದು, ಗುರಿ, ದಾರಿ, ಮೌಲ್ಯಗಳನ್ನು ಇದ್ದಕ್ಕಿದ್ದ ಹಾಗೆ ಬದಲಾಯಿಸಿಕೊಳ್ಳುವುದು, ತನ್ನ ಅಸ್ತಿತ್ವದ ಬಗ್ಗೆಯೇ ಕಟುವಾಗಿ ಭಾವಿಸುವುದು; ಇತ್ಯಾದಿ ಗುಣ ಲಕ್ಷಣಗಳನ್ನು ಸೀಮೆಗೇಡು ಸಮಸ್ಯೆ (ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್) ಎನ್ನಬಹುದು. ಸದಾ ಅಸಹಾಯಕತೆಯ ಭಾವನೆ, ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಹಿಂದೇಟು ಹಾಕುವುದು, ತಮ್ಮ ಕ್ಷೇಮ ಮತ್ತು ಕೆಲಸಗಳ ಬಗ್ಗೆಯೂ ಸರಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಾರದೆ ಸದಾ ಇತರರ ನೆರವನ್ನೇ ಅಪೇಕ್ಷಿಸುತ್ತಿರುವುದು, ಆತ್ಮವಿಶ್ವಾಸ, ಆತ್ಮಸ್ಥೈರ್ಯ ಇಲ್ಲದೆ ಇರುವುದನ್ನು ಅವಲಂಬನಾ ಸಮಸ್ಯೆ (ಡಿಪೆಂಡೆಂಟ್ ಪರ್ಸನಾಲಿಟಿ ಡಿಸಾರ್ಡರ್) ಇದೆ ಎನ್ನಬಹುದು. ತಮ್ಮನ್ನು ಗಮನಿಸುತ್ತಿಲ್ಲ ಎಂಬ ತೀವ್ರವಾದ ಭಾವನೆ, ಅದರಿಂದ ನಾಟಕೀಯವಾಗಿ ಮತ್ತು ಉಗ್ರವಾಗಿ ಗಮನ ಸೆಳೆಯಲು ವರ್ತಿಸುವುದು, ಕೂಗಾಡುವುದು, ಅಳುವುದು, ಜಗಳವಾಡುವುದು. ವಾಸ್ತವದ ಬದುಕಿಗಿಂತ ಹೆಚ್ಚಿನ ವಿಸ್ತಾರದ (ಕೆಲವೊಮ್ಮೆ ಅತಿರೇಕದ ಮತ್ತು ಕಾಲ್ಪನಿಕ) ಬದುಕನ್ನು ನಿರೀಕ್ಷಿಸುವುದು ಮತ್ತು ಹಾಗೆಯೇ ತಮ್ಮನ್ನು ಇತರರು ಉಪಚರಿಸಲಿ ಎಂಬ ನಿರೀಕ್ಷೆಗಳನ್ನು ಹೊಂದಿರುವುದು. ಅವು ಅವರ ನಿರೀಕ್ಷೆಯ ಮಟ್ಟದಲ್ಲಿ ದೊರಕದೇ ಹೋದರೆ ವ್ಯಗ್ರವಾಗುವುದು, ಲೈಂಗಿಕ, ಮಾತುಕತೆ, ನಡವಳಿಕೆ, ಭಾವಿಸುವ, ಪ್ರೀತಿಸುವ, ದ್ವೇಷಿಸುವ, ಒಬ್ಬರಿಗೆ ತಾವು ಕಾಣಿಸಿಕೊಳ್ಳುವ ಎಲ್ಲದರಲ್ಲೂ ಅತಿರೇಕ. ಪದೇ ಪದೇ ಖಚಿತತೆಗಾಗಿ ಹಾತೊರೆಯುವುದು; ಇವೆಲ್ಲಾ ಅತಿಗೇಡಿತನದ ಸಮಸ್ಯೆ (ಹಿಸ್ಟರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್) ಇರಬಹುದು. ಇತರರ ದೃಷ್ಟಿಕೋನ, ಭಾವನೆ, ಅಭಿಪ್ರಾಯಗಳಿಗೆ ಬೆಲೆ ಕೊಡದೆ ತನ್ನದು ಸರಿಯಾಗಿಯೇ ಇರುತ್ತದೆ ಮತ್ತು ತನ್ನದನ್ನು ಒಪ್ಪಲೇ ಬೇಕೆಂಬ ಹಟಮಾರಿತನವಿರುವುದು.

ತಾನು ಸದಾ ಇತರರಿಗಿಂತ ಮೇಲು ಎಂದೂ, ತಾನೆಂದೂ ಪ್ರಶಂಸೆಗೆ ಮಾತ್ರವೇ ಯೋಗ್ಯನೆಂದೂ, ತನ್ನನ್ನು ಬೇರೆ ಯಾರಾದರೂ ವಿಮರ್ಶಿಸಿದರೆ ಅಥವಾ ಪ್ರಶ್ನಿಸಿದರೆ ಸಹಿಸದೆ ಇರುವುದು ಹಾಗೂ ಇಡೀ ಕುಟುಂಬವನ್ನು, ಸಮೂಹವನ್ನು, ತನ್ನ ಕೇಂದ್ರಿತವಾಗಿಯೇ ಹೊಂದಿರಬೇಕೆಂದು ಬಯಸುವವರಿಗೆ ಆತ್ಮರತಿಯ ಸಮಸ್ಯೆ (ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್) ಇರಬಹುದು. ಗಲೀಜು ಅಥವಾ ಸೂಕ್ಷ್ಮಾಣುಗಳು ತಮಗೆ ಹತ್ತಿಬಿಡ ಬಹುದೆಂದು ಹೆದರುವುದು, ಅನಿರೀಕ್ಷಿತವಾಗಿರುವುದನ್ನು ಮತ್ತು ತಮ್ಮ ಮಾನದಂಡ ಮತ್ತು ನಿರೀಕ್ಷೆಗೆ ಅನುಗುಣವಾಗಿಲ್ಲದಿರುವುದನ್ನು ಒಪ್ಪುವುದಕ್ಕೆ ತೀವ್ರವಾಗಿ ಸಂದೇಹಿಸುವುದು ಅಥವಾ ಸಹಿಸಿಕೊಳ್ಳದೆ ಇರುವುದು, ಎಲ್ಲವೂ ಪರ್ಫೆಕ್ಟಾಗಿಯೇ ಇರಬೇಕೆಂದು ಹಟ ಹಿಡಿಯುವುದು, ಶುಚಿತನದಲ್ಲಿ, ನಿರೀಕ್ಷಿತ ಅಚ್ಚುಕಟ್ಟುತನದಲ್ಲಿ ಚೂರು ಏರುಪೇರಾದರೂ ಸಹಿಸದಿರುವುದು, ಕಳವಳಗೊಳ್ಳುವುದು, ಸಹಜ ಮತ್ತು ಸರಳವಾಗಿರಬಹುದಾದ ವಿಷಯಗಳಲ್ಲಿ, ಪ್ರಸಂಗಗಳಲ್ಲಿ ವಿಪರೀತವಾಗಿ ಭಯಂಕರ ಆಲೋಚನೆಗಳನ್ನು ಮಾಡು ವುದು, ಹೆದರುವುದು, ಅವುಗಳಿಂದ ದೂರಾಗುವ ಪ್ರಯತ್ನವನ್ನು ಮಾಡು ವುದು, ಬೇರೆಯವರು ಮಾಡುವ ಅಡುಗೆ, ಕೆಲಸ ಇತ್ಯಾದಿಗಳನ್ನು ಸಂದೇಹಿಸಿ ತಾವೇ ಮಾಡಿಕೊಳ್ಳುವುದು; ಇತ್ಯಾದಿ ಗಳನ್ನೆಲ್ಲಾ ಗೀಳಿನ ಸಮಸ್ಯೆ (ಅಬ್ಸೆಸ್ಸಿವ್ ಕಂಪಲ್ಸೀವ್ ಪರ್ಸನಾಲಿಟಿ ಡಿಸಾರ್ಡರ್) ಎನ್ನಬಹುದು. ಇತರರ ಬದ್ಧತೆ, ಪ್ರಾಮಾಣಿಕತೆಯನ್ನು ಸಂದೇಹಿಸುವುದು, ವಿಪರೀತವಾದ ಅಪನಂಬಿಕೆ, ತಮಗೆ ದ್ರೋಹ ಅಥವಾ ಕೇಡು ಮಾಡಿಬಿಡಬಹುದೆಂದು ತಮ್ಮ ಬಗ್ಗೆ ಯಾರೊಂದಿಗೂ ತೆರೆದುಕೊಳ್ಳದಿರುವುದು, ಕ್ಷಮಿಸದೇ ಇರುವುದು, ಸೇಡಿನ ಮನೋಭಾವ ಹೊಂದಿರುವುದು, ಸರಳವಾಗಿ, ಹಾಸ್ಯವಾಗಿ ಹೇಳುವಂತಹ ಮಾತುಗಳಿಗೆಲ್ಲಾ ವಿಪರೀತಾರ್ಥವನ್ನು ಕಲ್ಪಿಸುವುದು, ತಮ್ಮನ್ನೇ ಗುರಿಯಾಗಿಸಿ ಅವಹೇಳನ ಮಾಡುತ್ತಿದ್ದಾರೆ ಎಂದು ಭ್ರಮಿಸುವುದು, ತಮ್ಮ ಗಂಡ ಅಥವಾ ಹೆಂಡತಿಯ ಚಾರಿತ್ರ್ಯವನ್ನು ಅನುಮಾನಿಸುವುದು, ತಣ್ಣನೆಯ ದ್ವೇಷ ಸಾಧನೆ, ಇತರರ ಬಗ್ಗೆ ವಿಪರೀತ ಅಸೂಯೆ, ಅನುಮಾನ ಮತ್ತು ಅಸಮಾಧಾನವನ್ನು ಹೊಂದಿದ್ದು; ಅದನ್ನೇ ಸಾಧಿಸುತ್ತಿರುವುದು, ಜಗಳಗಳಲ್ಲಿ ತಮ್ಮ ಪಾತ್ರವೂ ಇದೆ ಎಂದು ಒಪ್ಪಿಕೊಳ್ಳುವ ಬದಲು ತಾವು ಯಾವಾಗಲೂ ಸರಿ, ಇತರರೇ ಸರಿಯಿಲ್ಲವೆಂದು ಬಲವಾಗಿ ನಂಬುವುದು, ವಿಶ್ರಾಂತಿ ಪಡೆಯಲು ಸಾಧ್ಯವಾಗದೇ ಸದಾ ತಳಮಳಿಸುತ್ತಿರುವುದು, ಸದಾ ಮೊಂಡುತನ, ಎಲ್ಲರನ್ನೂ, ಎಲ್ಲವನ್ನೂ ವಿಪರೀತವಾಗಿ ಆಕ್ಷೇಪಿಸುತ್ತಲೇ ಇರುವುದು; ಹೀಗಿರುವ ವ್ಯಕ್ತಿ ಎಂದರೆ ಅನುಮಾನಗೇಡಿತನದ ಅಥವಾ ಪ್ಯಾರಾನಾಯ್ಡಾ ಪರ್ಸನಾಲಿಟಿ ಡಿಸಾರ್ಡರ್ ಇರಬಹುದು.

ಇನ್ನೂ ಕೆಲವರು ತಮ್ಮ ಸಂಗಾತಿ, ಕುಟುಂಬ, ಸ್ನೇಹಿತರು; ಯಾರೊಂದಿಗೂ, ಯಾವ ಸಂಬಂಧಗಳೊ ಡನೆಯೂ ಆಪ್ತತೆಯನ್ನು ಬೆಳಸಿಕೊಳ್ಳುವುದಿಲ್ಲ. ತಮ್ಮದೇ ಆದ ಕೆಲವೇ ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಅಥವಾ ಖುಷಿ ಕಂಡುಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ತೋರ್ಪಡಿಸುವುದು, ಪ್ರತಿಕ್ರಿಯಿಸುವುದು ಅತ್ಯಂತ ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಸ್ಯಪ್ರಜ್ಞೆ ಇರುವುದಿಲ್ಲ. ಯಾವುದೇ ವಿಷಯ, ಪ್ರಸಂಗ ಮತ್ತು ವ್ಯಕ್ತಿಗಳೊಡನೆ ತಣ್ಣಗಿರುತ್ತಾರೆ. ವಿಮರ್ಶೆ ಮಾಡಿದರೂ, ಪ್ರಶಂಸೆ ಮಾಡಿದರೂ ತಮಗಲ್ಲವೆಂಬಂತೆ ಇರುತ್ತಾರೆ. ಹೀಗಿರುವವರು ಸ್ಕಿಸಾಯ್ಡಿ ಪರ್ಸನಾಲಿಟಿ ಡಿಸಾರ್ಡರ್ ಅಥವಾ ಭಾವನಾಭಾವ ಸಮಸ್ಯೆಯ ವ್ಯಕ್ತಿಗಳಾಗಿರುತ್ತಾರೆ. ಇನ್ನೂ ಕೆಲವರು ಇತರರ ಬಗ್ಗೆ ಅನುಮಾನ ಹೊಂದಿರುವವರಾಗಿರುವುದರ ಜೊತೆಗೆ ತಮ್ಮ ವೇಷ ಭೂಷಣಗಳಲ್ಲಿ ವಿಲಕ್ಷಣವಾಗಿರುತ್ತಾರೆ. ಆಪ್ತತೆಯನ್ನು ಹೊಂದಲು ಹಿಂಜರಿಯುವುದು, ವಾಸ್ತವವನ್ನು ಇದ್ದಂತೆಯೇ ಹೇಳುವುದರ ಬದಲು ತಮ್ಮ ಕಲ್ಪನೆಯ ರೀತಿಯಲ್ಲಿ ವಿವರಿಸುವುದು, ಮೌಢ್ಯಾಚರಣೆ, ಮಾಂತ್ರಿಕತೆ, ಅನೈಸರ್ಗಿಕ ಶಕ್ತಿಗಳನ್ನು ವಿಪರೀತವಾಗಿ ನಂಬುವುದು, ಹಗಲುಗನಸು ಕಾಣುತ್ತಿರುವುದು, ತಮ್ಮನ್ನು ಇತರರೊಂದಿಗೆ ಸಮೀಕರಿಸಿಕೊಳ್ಳದೆ ಸದಾ ಹಟದಿಂದ ಅಂತರವನ್ನು ಕಾಯ್ದುಕೊಳ್ಳುವುದು, ಸಾಮಾನ್ಯವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ತಣ್ಣಗಿದ್ದು, ಆತ್ಮೀಯತೆಯನ್ನು ಅನುಭವಿಸದೇ ಇರುವುದು; ಹೀಗೆಲ್ಲಾ ಇದ್ದಲ್ಲಿ ಅವರು ಸ್ಕಿಸೋಟೈಪಲ್ ಅಥವಾ ಭ್ರಮಾಗೇಡಿತನದ ವ್ಯಕ್ತಿತ್ವವನ್ನು ಹೊಂದಿರಬಹುದು. ಇದರಲ್ಲಿ ನಾವು ಯಾವುದೋ, ನಮ್ಮ ಜೊತೆಯಲ್ಲಿರುವವರಿಗೆ ಯಾವುದಿದೆಯೋ! ಇತರರನ್ನು ತೂಗುವ, ಅಳೆಯುವ, ನಿರ್ಧರಿಸುವ ಮುನ್ನ ನಮ್ಮನಮ್ಮ ಆತ್ಮಾವಲೋಕನ ಮಾಡಿಕೊಂಡರೆ, ಇತರರ ಸಮಸ್ಯೆಯನ್ನೂ ಗುರುತಿಸಲು ಸಾಧ್ಯವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಯೋಗೇಶ್ ಮಾಸ್ಟರ್,

contributor

Similar News